ಸಾವಿರಾರು ಕೋಟಿ ಸುರಿದು ಹುಬ್ಬಳ್ಳಿ-ಧಾರವಾಡ ಮಧ್ಯದ ಸುಃಖಕರ ಸಾರಿಗೆಗಾಗಿ ಜಾರಿಗೆ ತಂದಿರುವ "ಬಿಆರ್‌ಟಿಎಸ್‌ " (ಚಿಗರಿ ಬಸ್‌) ಸಾರಿಗೆ ನಿತ್ಯವೂ ಒಂದಿಲ್ಲಾ ಒಂದು ಅಧ್ವಾನ ಮಾಡುತ್ತಿದೆ.

ಹುಬ್ಬಳ್ಳಿ:

ಸಾವಿರಾರು ಕೋಟಿ ಸುರಿದು ಹುಬ್ಬಳ್ಳಿ-ಧಾರವಾಡ ಮಧ್ಯದ ಸುಃಖಕರ ಸಾರಿಗೆಗಾಗಿ ಜಾರಿಗೆ ತಂದಿರುವ "ಬಿಆರ್‌ಟಿಎಸ್‌ " (ಚಿಗರಿ ಬಸ್‌) ಸಾರಿಗೆ ನಿತ್ಯವೂ ಒಂದಿಲ್ಲಾ ಒಂದು ಅಧ್ವಾನ ಮಾಡುತ್ತಿದ್ದು, ಶನಿವಾರ ಸಂಜೆ ಧಾರವಾಡ-ಹುಬ್ಬಳ್ಳಿ ಮಧ್ಯೆ ಅತಿ ಹೆಚ್ಚು ತಡೆರಹಿತ (ನಾನ್‌ಸ್ಟಾಪ್‌) ಬಸ್‌ಗಳನ್ನು ಓಡಿಸುವ ಮೂಲಕ ಪ್ರಯಾಣಿಕರು ಗಂಟೆಗಟ್ಟಲೇ ಕಾದು ನಿಲ್ಲುವ ಪರಿಸ್ಥಿತಿ ಎದುರಾಗಿತ್ತು.

ಮಧ್ಯಾಹ್ನ 3.20 ರಿಂದ 4.10ರ ವರೆಗೆ ಧಾರವಾಡದಿಂದ ಹುಬ್ಬಳ್ಳಿಗೆ 9 ನಾನ್‌ಸ್ಟಾಪ್‌ ಬಸ್‌ಗಳು ಓಡಿದರೆ, ಕೇವಲ 2 ನಾನ್‌ಸ್ಟಾಪ್‌ ಬಸ್‌ ಸಂಚರಿಸಿದವು. ಈ ಅಧ್ವಾನದಿಂದಾಗಿ ಧಾರವಾಡ ಎನ್‌ಟಿಟಿಎಫ್‌ದಿಂದ ಹುಬ್ಬಳ್ಳಿ ವಿದ್ಯಾನಗರ ವರೆಗಿನ ಬಹುತೇಕ ಬಿಆರ್‌ಟಿಎಸ್‌ ನಿಲ್ದಾಣಗಳು ತುಂಬಿ ತುಳುಕುತ್ತಿದ್ದವು.

ಆ ಎರಡು ಆಲ್‌ ಸ್ಟಾಪ್‌ ಬಸ್‌ಗಳು ನಿಲ್ದಾಣಕ್ಕೆ ಬಂದು ನಿಂತಾಗ ಬಸ್‌ನಿಂದ ಇಳಿಯುವವರು, ಏರುವವರು ಹರಸಾಹಸ ಪಡುತ್ತಿದ್ದರು. ಒಂದು ಹಂತದಲ್ಲಿ ಅವಸರದಲ್ಲಿ ಇಬ್ಬರು ಏರಿದ್ದರಿಂದ ಬಸ್‌ನ ಬಾಗಿಲು ಹಾಕದೇ ಚಾಲಕ ದಾರಿ ಮಧ್ಯದಲ್ಲಿ ಬಸ್‌ ನಿಲ್ಲಿಸಿ ಬಾಗಿಲು ಹಾಕಿದ ಪ್ರಸಂಗವೂ ನಡೆಯಿತು.

ಚಿಗರಿ ಬಸ್‌ಗಾಗಿ ಕಾದು ನಿಂತು ಸಾಕಾದವರು ಬೇರೆ ಬಸ್‌ಗೆ ಹೋಗಲು ಈ ಟಿಕೆಟ್‌ ವಾಪಸ್‌ ನೀಡುವಂತೆ ನಿಲ್ದಾಣದ ಸಿಬ್ಬಂದಿ ಜೊತೆ ಜಗಳಕ್ಕೆ ಇಳಿದಿದ್ದರು. ಹಲವರು ಹಣ ಹೋದರೆ ಹೋಗಲಿ ಎಂದು ನಿಲ್ದಾಣದಿಂದ ಹೊರ ಬಂದು ಬೇರೆ ಬಸ್ಸು ಏರಿ ಹೋದರು.

ಡಿಸಿ ಉಢಾಪೆ ಉತ್ತರ:

ಈ ನಾನ್‌ಸ್ಟಾಪ್‌ ಅಧ್ವಾನದಿಂದ ಬೆಸತ್ತ ಪ್ರಯಾಣಿಕರೊಬ್ಬರು ನಿಲ್ದಾಣದ ಸಿಬ್ಬಂದಿಯಿಂದ ಮೊಬೈಲ್‌ ನಂಬರ್‌ ಪಡೆದು ಬಿಆರ್‌ಟಿಎಸ್‌ ಡಿಸಿ ಇನಾಯತ್‌ ಬಾಗವಾನ ಅವರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿ, "ಏನಾದರೂ ಸಮಸ್ಯೆಯಾಗಿದೆಯಾ ಸರ್‌ " ಎಂದಿದ್ದಕ್ಕೆ, "ನನಗೇನೂ ಗೊತ್ತಿಲ್ಲ, ಧಾರವಾಡ ಕಂಟ್ರೋಲರ್‌ ಕೇಳಿ ಹೇಳ್ತೀನಿ " ಎಂದು ಕಾಲ್‌ ಕಟ್ ಮಾಡಿದರು.

ಸುಮಾರು ಹೊತ್ತಿನ ಬಳಿಕ ಆ ಪ್ರಯಾಣಿಕರು ಕುತೂಹಲಕ್ಕೆ "ಸರ್, ಫೋನ್‌ ಮಾಡಿ ಸಮಸ್ಯೆ ಹೇಳಿದ್ದೆ, ಏನಾದರೂ ಉತ್ತರ ಸಿಕ್ಕಿತಾ? ನಿಜಕ್ಕೂ ಏನು ಸಮಸ್ಯೆಯಾಗಿತ್ತು? " ಎಂದು ಪ್ರಶ್ನಿಸಿದ್ದಕ್ಕೆ "ರೀ ಸಮಸ್ಯೆ ಬಗೆಹರಿಸುವುದಷ್ಟೇ ನನ್ನ ಕೆಲಸ, ಫೋನ್‌ ಮಾಡಿದವರಿಗೆಲ್ಲ ಉತ್ತರ ಕೊಡಲು ನಾನು ಟೆಲಿಫೋನ್‌ ಆಪರೇಟರ್‌ ಅಲ್ಲ. ನಿಮಗೆ ಉತ್ತರ ಬೇಕಿದ್ದರೆ, ನನಗೆ ಮೇಲ್‌ ಮಾಡಿ " ಎಂದು ಉಢಾಪೆಯ, ಅಷ್ಟೇ ವರಟಾದ ಮಾತಿನ ಉತ್ತರ ನೀಡಿದರು.

ಈ ಬಿಆರ್‌ಟಿಎಸ್‌ ಪ್ರಯಾಣಿಕ ಸ್ನೇಹಿ ಆಗುವುದು ಯಾವಾಗ?

ಚಿಗರಿ ಬಸ್‌ನ ಸಮಸ್ಯೆಗಳ ಬಗ್ಗೆ ಪ್ರಯಾಣಿಕರ ದೂರಿಗೆ ಉತ್ತರ ಕೊಡಲು ನಾನು ಟೆಲಿಫೋನ್‌ ಆಪರೇಟರ್‌ ಅಲ್ಲ, ಬಿಆರ್‌ಟಿಎಸ್‌ ಡಿಸಿ. ನಿಮಗೆ ವಿವರಣೆ ಅಥವಾ ಉತ್ತರ ಬೇಕಿದ್ದರೆ ನನಗೆ ಮೇಲ್‌ ಮಾಡಿ.

ಇನಾಯತ್‌ ಬಾಗವಾನ್‌, ಬಿಆರ್‌ಟಿಎಸ್‌ ಡಿಸಿಈ ಯೋಜನೆ ಬಂದಾಗಿನಿಂದ ಒಂದಿಲ್ಲೊಂದು ಕಿರಿಕಿರಿಯಲ್ಲೇ ಚಿಗರಿ ಓಡಾಡುತ್ತಿವೆ. ಕೆಲವು ನಿಲ್ದಾಣಗಳಲ್ಲಿ ರಾತ್ರಿ ಕರೆಂಟ್‌ ಇರುವುದಿಲ್ಲ. ಕೆಲವು ನಿಲ್ದಾಣಗಳಲ್ಲಿ ಟಿಕೆಟ್‌ ಇಲ್ಲದೇ ಓಡಾಡಬಹುದು. ಆದರೆ, ಹಣ ಕೊಟ್ಟು ಟಿಕೆಟ್‌ ಪಡೆದವರಿಗೆ ಅಧಿಕಾರಿಗಳ ಸೊಕ್ಕಿನ ಉತ್ತರ ಇರುತ್ತದೆ.

ವಿಜಯಕುಮಾರ ಪಾಟೀಲ್‌, ಶಾಂತಿನಿಕೇತನ