ಮಾಸಾಶನ ಬಂದ್ ಆಗಿರುವುದಕ್ಕೂ ಅರ್ಜಿಗಳು ಬರುತ್ತಿವೆ, ಮಾಸಾಶನ ಬಂದ್ ಆದ ಫಲಾನುಭವಿಗಳ ಮರು ಪರಿಶೀಲನೆಗೆ ಸರ್ಕಾರ ಆದೇಶಿಸಿದೆ. ಹೀಗಾಗಿ ರೋಣ ತಾಲೂಕಿನಲ್ಲಿ 4೦೦ಕ್ಕೂ ಹೆಚ್ಚು ಅರ್ಜಿಗಳನ್ನು ಮರು ಪರಿಶೀಲನೆ ಮಾಡಲು ತಿಳಿಸಲಾಗಿದೆ.
ರೋಣ: ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಪ್ರಜಾಸೇವೆ ಆಂದೋಲನ ಜಾರಿಗೆ ತರಲಾಗಿದೆ ಎಂದು ಪ್ರಭಾರಿ ತಹಸೀಲ್ದಾರ್ ಮಂಜುನಾಥ ಅಮಾಸಿ ಹೇಳಿದರು.
ಅವರು ಶನಿವಾರ ತಾಲೂಕಿನ ಚಿಕ್ಕಮಣ್ಣೂರ ಪಂಚಾಯಿತಿ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೇವೆ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.ಮಾಸಾಶನ ಬಂದ್ ಆಗಿರುವುದಕ್ಕೂ ಅರ್ಜಿಗಳು ಬರುತ್ತಿವೆ, ಮಾಸಾಶನ ಬಂದ್ ಆದ ಫಲಾನುಭವಿಗಳ ಮರು ಪರಿಶೀಲನೆಗೆ ಸರ್ಕಾರ ಆದೇಶಿಸಿದೆ. ಹೀಗಾಗಿ ರೋಣ ತಾಲೂಕಿನಲ್ಲಿ 4೦೦ಕ್ಕೂ ಹೆಚ್ಚು ಅರ್ಜಿಗಳನ್ನು ಮರು ಪರಿಶೀಲನೆ ಮಾಡಲು ತಿಳಿಸಲಾಗಿದೆ. ಪ್ರಜಾಸೇವಾ ಆಂದೋಲನದಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾದ ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವಲ್ಲಿ ಶ್ರಮಿಸಲಾಗುವುದು. ಜಠಿಲ ಸಮಸ್ಯೆಗಳಿದ್ದಲ್ಲಿ ಕಾಲಾವಕಾಶ ತಗೆದುಕೊಂಡು ತ್ವರಿತಗತಿಯಲ್ಲಿ ಪರಿಹಾರ ಒದಗಿಸಲಾಗುವದು ಎಂದರು.
ತಾಪಂ ಇಒ ಚಂದ್ರಶೇಖರ ಕಂದಕೂರ ಮಾತನಾಡಿ, ಜನರ ಬಳಿಗೆ ಸರ್ಕಾರ ತೆರಳಬೇಕು ಎಂಬ ನಿಟ್ಟಿನಲ್ಲಿ ಪ್ರಜಾಸೇವೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಪ್ರಜೆಗಳ ಸಮಸ್ಯೆಗೆ ಶೀಘ್ರ ಪರಿಹಾರ ದೊರಕಿಸುವ ಕೆಲಸ ಅಧಿಕಾರಿಗಳು ಮಾಡಬೇಕು. ಪ್ರತಿ ಗ್ರಾಮ ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.ರೇಷನ್ ಕಾರ್ಡ ವಿತರಣೆ ವಿಳಂಬ, ಪಹಣಿ ತಿದ್ದುಪಡಿ, ಪೋಡಿ, ರಸ್ತೆ ಸುಧಾರಣೆ ಸೇರಿದಂತೆ ವಿವಿದ ಬೇಡಿಕೆಗಳಿಗೆ ಸಾರ್ವಜನಿಕರು ಅಹವಾಲು ಸಲ್ಲಿಸಿದರು.
ಈ ವೇಳೆ ಉಪತಹಸೀಲ್ದಾರ್ ಜಿ.ಟಿ. ಕೊಪ್ಪದ, ಲೋಕೋಪಯೋಗಿ ಎಇಇ ಜಿ.ಎಸ್. ಪಾಟೀಲ, ಅಕ್ಷರ ದಾಸೋಹ ಕಾರ್ಯಕ್ರಮ ಅಧಿಕಾರಿ ಆರ್.ಎಲ್. ನಾಯ್ಕರ್, ಹೆಸ್ಕಾಂ ಎಇಇ ರಾಘವೇಂದ್ರ ಕೋಚಿ, ಸಿಡಿಪಿಒ ಲಲಿತಾ ಅಳವಂಡಿ, ಪಿಡಿಒ ಕಲ್ಪನಾ ಕಡಗ, ಕಂದಾಯ ನಿರೀಕ್ಷಕ ಅಭಿಷೇಕ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.