ಸ್ಥಳದಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಕಾಯ್ದುಕೊಳ್ಳುತ್ತಲೇ, ಮೊಸಳೆಗೆ ಯಾವುದೇ ರೀತಿಯ ಭೌತಿಕ ಹಾನಿಯಾಗದಂತೆ ಸೂಕ್ತ ರಕ್ಷಣಾ ಜಾಲಗಳನ್ನು ಬಳಸಿ ಅರಣ್ಯ ಸಿಬ್ಬಂದಿ ಅತ್ಯಂತ ಜಾಗರೂಕತೆಯಿಂದ ಮೊಸಳೆಯನ್ನು ಸೆರೆಹಿಡಿದಿದ್ದಾರೆ.
ಮುಂಡರಗಿ: ಪಟ್ಟಣದ ಕೆ.ಎಸ್.ಆರ್.ಟಿ.ಸಿ ಡಿಪೋ ಹಿಂಭಾಗದ ಪ್ರದೇಶದಲ್ಲಿ ಮೊಸಳೆಯೊಂದು ಕಾಣಿಸಿಕೊಂಡು ಸ್ಥಳೀಯ ಸಾರ್ವಜನಿಕರಲ್ಲಿ ತೀವ್ರ ಭೀತಿ ಹಾಗೂ ಆತಂಕ ಸೃಷ್ಟಿಸಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೊಸಳೆಯನ್ನು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.
ಶುಕ್ರವಾರ ಸಂಜೆ ಮೊಸಳೆ ಪ್ರತ್ಯಕ್ಷವಾದ ಬಗ್ಗೆ ಮುಂಡರಗಿ ವಲಯ ಅರಣ್ಯ ಕಚೇರಿಗೆ ಸಾರ್ವಜನಿಕರಿಂದ ತುರ್ತು ಮಾಹಿತಿ ಲಭಿಸಿತ್ತು. ಗದಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವರ ಹಾಗೂ ಗದಗ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಾಂತೇಶ ಪೋಲಿಸ್ಪಾಟೀಲ ಅವರ ಮಾರ್ಗದರ್ಶನದಲ್ಲಿ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿತು.ಕಪ್ಪತ್ತಗುಡ್ಡ ವಲಯ ಅರಣ್ಯಾಧಿಕಾರಿ ಕೆ. ಮಲ್ಲಪ್ಪ, ಉಪ ವಲಯ ಅರಣ್ಯಾಧಿಕಾರಿ ಗುರುಶಾಂತ ಗೋರಬಾಳ, ಶಹರ ಶಾಖೆ ಉಪ ವಲಯ ಅರಣ್ಯಾಧಿಕಾರಿ ಈಶ್ವರರಾಜ ಮರತೂರು, ಗಸ್ತು ಅರಣ್ಯ ಪಾಲಕ, ಕಲಕೇರಿ ಗಸ್ತು ಮತ್ತು ಇಲಾಖೆಯ ನುರಿತ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸ್ಥಳದಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಕಾಯ್ದುಕೊಳ್ಳುತ್ತಲೇ, ಮೊಸಳೆಗೆ ಯಾವುದೇ ರೀತಿಯ ಭೌತಿಕ ಹಾನಿಯಾಗದಂತೆ ಸೂಕ್ತ ರಕ್ಷಣಾ ಜಾಲಗಳನ್ನು ಬಳಸಿ ಅರಣ್ಯ ಸಿಬ್ಬಂದಿ ಅತ್ಯಂತ ಜಾಗರೂಕತೆಯಿಂದ ಮೊಸಳೆಯನ್ನು ಸೆರೆಹಿಡಿದಿದ್ದಾರೆ. ಸೆರೆಹಿಡಿಯಲಾದ ಮೊಸಳೆಯನ್ನು ಹಿರಿಯ ಅಧಿಕಾರಿಗಳ ಅನುಮತಿ ಮೇರೆಗೆ, ಜನವಸತಿ ಪ್ರದೇಶದಿಂದ ದೂರವಿರುವ ಸುರಕ್ಷಿತ ಹಾಗೂ ಆಳವಾದ ನೈಸರ್ಗಿಕ ಜಲಮೂಲಕ್ಕೆ ಯಾವುದೇ ಪ್ರಾಣಾಪಾಯವಿಲ್ಲದಂತೆ ಯಶಸ್ವಿಯಾಗಿ ಬಿಡಲಾಯಿತು ಎಂದು ಕಪ್ಪತ್ ಹಿಲ್ಸ್ ವಲಯ ಅರಣ್ಯಾಧಿಕಾರಿ ಕೆ. ಮಲ್ಲಪ್ಪ ತಿಳಿಸಿದ್ದಾರೆ. ಅರಣ್ಯ ಇಲಾಖೆಯ ತ್ವರಿತ ಸ್ಪಂದನೆಗೆ ಸ್ಥಳೀಯ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.