ಶಾಲಾ ಶಿಕ್ಷಣ ಇಲಾಖೆ ಸಂಘಟಿಸಿದ್ದ ಜಿಲ್ಲಾಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಈ ನಾಟಕವು ಪ್ರಥಮ ಸ್ಥಾನ ಪಡೆದು ವಲಯಮಟ್ಟಕ್ಕೆ ಆಯ್ಕೆಯಾಗಿದೆ.

ಮುಂಡರಗಿ: ವಿಜ್ಞಾನ ನಾಟಕಗಳು ಮಕ್ಕಳಲ್ಲಿ ಸೃಜನಶೀಲತೆ, ಕಲಾಭಿರುಚಿ, ಅಭಿವ್ಯಕ್ತಿ ಸಾಮರ್ಥ್ಯ ಹಾಗೂ ರಂಗಕಲೆಯ ಆಸಕ್ತಿಯನ್ನು ಬೆಳೆಸುವುದರೊಂದಿಗೆ ವಿಜ್ಞಾನದ ಅನ್ವೇಷಣೆಗಳನ್ನು, ವೈಜ್ಞಾನಿಕ ವಿಚಾರಗಳನ್ನು ಸಾಮಾಜೀಕರಣಗೊಳಿಸಿ ಆಲೋಚನೆಗೆ ಹಚ್ಚುತ್ತವೆ. ಸಾಧಕ ಬಾಧಗಳ ಬಗೆಗೆ ಚಿಂತನೆಗೆ ಒಳಪಡಿಸುತ್ತವೆ ಎಂದು ರಂಗ ನಿರ್ದೇಶಕ, ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ ಹೇಳಿದರು.ಅವರು ಶನಿವಾರ ಮುಂಡರಗಿ ಪಟ್ಟಣದ ರಾಮೇನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಂಡರಗಿಯ ಜೆ. ಟಿ. ಕೋಟೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯ ಸಾಧಕ ಬಾಧಕಗಳ ಕುರಿತಾಗಿ ಪ್ರಸ್ತುತಪಡಿಸಿದ ಎ.ಐ. ಭಾಗ್ಯ ನಾಟಕ ಪ್ರದರ್ಶನ ವೀಕ್ಷಿಸಿ ಮಾತನಾಡಿದರು. ಶಾಲಾ ಶಿಕ್ಷಣ ಇಲಾಖೆ ಸಂಘಟಿಸಿದ್ದ ಜಿಲ್ಲಾಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಈ ನಾಟಕವು ಪ್ರಥಮ ಸ್ಥಾನ ಪಡೆದು ವಲಯಮಟ್ಟಕ್ಕೆ ಆಯ್ಕೆಯಾಗಿದ್ದು, ನಾಟಕ ನಿರ್ದೇಶಿಸಿದ ವಿಜ್ಞಾನ ಶಿಕ್ಷಕ ರಾಘವೇಂದ್ರ ಅರ್ಕಸಾಲಿ ಹಾಗೂ ಅಭಿನಯಿಸಿದ ವಿದ್ಯಾರ್ಥಿಗಳನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳಾದ ನೀಲಮ್ಮ ಚಿಕ್ಕಣ್ಣವರ, ಸುಶ್ಮಿತಾ ನಿಟ್ಟಾಲಿ, ಪಲ್ಲವಿ ಬಂಡಿವಡ್ಡರ, ಗೌರಮ್ಮ ಜೋಬಾಳಿ, ಅಂದಪ್ಪ ಉಕ್ಕಲಿ, ದಾನೇಶ್ವರಿ ಸಿಂಪಿ, ಜ್ಯೋತಿ ಚಂಡೂರ, ದೀಪಾ ಕಟಿಗಾರ ಪಾತ್ರದಾರಿಗಳಾಗಿ ಅಭಿನಯಿಸಿದರು. ಶಾಲಾ ಎಸ್.ಡಿ.ಎಂಸಿ ಅಧ್ಯಕ್ಷ ಉಮೇಶ ದಂಡಿನ ಅಧ್ಯಕ್ಷತೆ ವಹಿಸಿದ್ದರು, ಶರಣಪ್ಪ ದಂಡಿನ, ಶಿಕ್ಷಕಿಯರಾದ ಶಿವಲೀಲಾ ಅಬ್ಬಿಗೇರಿ, ಅನಿತಾ ಝಳಕಿ, ಅಂದಪ್ಪ ಉಕ್ಕಲಿ ಉಪಸ್ಥಿತರಿದ್ದರು. ಶಿಕ್ಷಕ ಎಂ.ಆರ್. ಗುಗ್ಗರಿ ಸ್ವಾಗತಿಸಿದರು. ಬಿ.ಎಚ್. ಹಲವಾಗಲಿ ವಂದಿಸಿದರು.