ದೀಪಾವಳಿ ಹಬ್ಬಕ್ಕೆ ಹೊಸ ವಸ್ತುಗಳ ಖರೀದಿಗೆ ಜನರು ಹೆಚ್ಚಾಗಿ ಆಸ್ತಕ್ತಿ ತೋರುವ ಪರಿಣಾಮ ಎಲೆಕ್ಟ್ರಾನಿಕ್ಸ್ ಹಾಗೂ ವಾಹನಗಳ ಖರೀದಿಗೆ ಈಗಾಗಲೇ ಪೂರ್ವ ತಯಾರಿ ಮಾಡಿಕೊಂಡಿದ್ದು, ಹಬ್ಬದ ದಿನ ಮನೆಗೆ ಹೊಸ ಅತಿಥಿಗಳನ್ನು ಕರೆ ತರಲು ಉತ್ಸುಕವಾಗಿದ್ದಾರೆ.

ಎಸ್.ಎಂ. ಸೈಯದ್

ಗಜೇಂದ್ರಗಡ: ಪಟ್ಟಣ ಸೇರಿ ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದಿದ್ದರೂ ಸಹ ದೀಪವಾಳಿ ಹಬ್ಬವು ಮಾರಕಟ್ಟೆಗೆ ಹೊಸ ಜೀವ ಕಳೆ ತಂದಿದ್ದು, ರೈತರು ಹಾಗೂ ಜನರು ಹಬ್ಬದ ಆಚರಣೆಗೆ ಭರದ ಸಿದ್ಧತೆ ಕೈಗೊಂಡಿದ್ದಾರೆ.

ಪಟ್ಟಣದ ಜೋಡು ರಸ್ತೆ, ಕಾಲಕಾಲೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ಸೇರಿ ಪ್ರಮುಖ ವಾಣಿಜ್ಯ ಮಳಿಗೆಗಳಲ್ಲಿ ಹಾಗೂ ರಸ್ತೆ ಬದಿಯ ಅಂಗಡಿಗಳಲ್ಲಿ ಸ್ವಚ್ಚತೆ ನಡೆಸಿ, ಸುಣ್ಣ ಬಣ್ಣ ಹಚ್ಚುವ ಕಾರ್ಯ ಪೂರ್ಣಗೊಳಿಸಿರುವ ವ್ಯಾಪರಸ್ಥರು ಪಟ್ಟಣ ಸೇರಿ ಸುತ್ತಲಿನ ಗ್ರಾಮಸ್ಥರು ಹಬ್ಬದ ಸಾಮಾಗ್ರಿಗಳ ವ್ಯಾಪಾರ-ವಹಿವಾಟಿನಲ್ಲಿ ಮಗ್ನವಾಗಿದ್ದಾರೆ.

ದೀಪಾವಳಿ ಹಬ್ಬಕ್ಕೆ ಹೊಸ ವಸ್ತುಗಳ ಖರೀದಿಗೆ ಜನರು ಹೆಚ್ಚಾಗಿ ಆಸ್ತಕ್ತಿ ತೋರುವ ಪರಿಣಾಮ ಎಲೆಕ್ಟ್ರಾನಿಕ್ಸ್ ಹಾಗೂ ವಾಹನಗಳ ಖರೀದಿಗೆ ಈಗಾಗಲೇ ಪೂರ್ವ ತಯಾರಿ ಮಾಡಿಕೊಂಡಿದ್ದು, ಹಬ್ಬದ ದಿನ ಮನೆಗೆ ಹೊಸ ಅತಿಥಿಗಳನ್ನು ಕರೆ ತರಲು ಉತ್ಸುಕವಾಗಿದ್ದಾರೆ. ಪರಿಣಾಮ ಮೂಬೈಲ್, ಟಿವಿ ಹಾಗೂ ಬೈಕ್ ಶೋರಂಗಳಲ್ಲಿ ಹೊಸ ಸ್ಟಾಕ್ ತರಿಸಲಾಗಿದೆ. ಹಬ್ಬಕ್ಕಾಗಿ ಬಟ್ಟೆ ಅಂಗಡಿ ಮತ್ತು ಕಿರಾಣಿ ಅಂಗಡಿಗಳು ಸಹ ಜನರಿಂದ ತುಂಬಿದ್ದು ಕಂಡು ಬರುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಪರಿಣಾಮವು ಸಹ ಕಂಡು ಬರುತ್ತಿದೆ. ಮಲ್ಲಿಗೆ, ಸೇವಂತಿಗೆ, ಚಂಡು ಹೂ ಹಾಗೂ ಸೇಬು ಮತ್ತು ಬಾಳೆ ಹಣ್ಣುಗಳ ಬೆಲೆ ಏರಿಕೆಯ ಬಿಸಿಗೆ ಹಣ್ಣಾದಂತೆ ಕಾಣಸಿಗುತ್ತಿವೆ.

ದೀಪ ಹಾಗೂ ಪಟಾಕಿ ವ್ಯಾಪಾರ: ಪರಿಸರ ಸ್ನೇಹಿ ಹಣತೆಗಳು ಮತ್ತು ಹಸಿರು ಪಟಾಕಿಗಳ ಖರೀದಿಗೆ ಜನರು ಆಸ್ತಕ್ತಿ ತೋರುತ್ತಿದ್ದಾರೆ. ಆದರೆ ಪಟ್ಟಣದಲ್ಲಿ ಹಸಿರು ಪಟಾಕಿಗಳ ಮಾರಾಟ ಕಾಣ ಸಿಗುತ್ತಿಲ್ಲ. ಆದರೆ ಮನೆ, ಮನೆಯಲ್ಲೂ ಪ್ರತಿ ದಿನ ರಾತ್ರಿ ಮಹಿಳೆಯರು ಹಣತೆ ಬೆಳಗಿಸಿ ಹಬ್ಬಕ್ಕೆ ಹೊಸ ಮೆರುಗು ತರುತ್ತಾರೆ. ಹೀಗಾಗಿ ದೀಪಾವಳಿ ಸಮಯದಲ್ಲಿ ಹಣತೆಗೆ ಹೆಚ್ಚಿನ ಬೇಡಿಕೆ ಇದ್ದು, ಹಬ್ಬ ಆರಂಭಕ್ಕೆ ಕೆಲ ದಿನ ಮುಂಚಿತವಾಗಿ ಮಣ್ಣಿನಿಂದ ಮಾಡಿದ ಹಣತೆ ಹಾಗೂ ಪಿಂಗಾಣಿ ಹಣತೆಗಳ ಮಾರಾಟ ಜೋರಾಗಿ ನಡೆಯುತ್ತಿದೆ.

ಬೀದಿದನಗಳ ಹಾವಳಿ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಜನರು ದೀಪಾವಳಿ ಹಬ್ಬದ ವ್ಯಾಪಾರ ವಹಿವಾಟಿಗೆ ಆಗಮಿಸುತ್ತಿದ್ದು ಸ್ಥಳೀಯ ಜೋಡು ರಸ್ತೆ, ಕಾಲಕಾಲೇಶ್ವರ ವೃತ್ತ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತಗಲ್ಲಿ ಈಗಾಗಲೇ ಹೂ, ಹಣ್ಣು, ಬಟ್ಟೆ ಸೇರಿ ಅಲಂಕಾರಿಕ ವಸ್ತುಗಳ ಮಾರಾಟಗಾರರು ರಸ್ತೆ ಬದಿಯಲ್ಲಿ ಅಂಗಡಿಗಳನ್ನು ಹಾಕಿಕೊಂಡಿದ್ದಾರೆ. ಪರಿಣಾಮ ಕಾಲಕಾಲೇಶ್ವರ ರಸ್ತೆಯಿಂದ ದುರ್ಗಾ ವೃತ್ತ ತಲುಪಲು ಜನ ಹಾಗೂ ವಾಹನ ಸವಾರರು ಪರದಾಡುತ್ತಿದ್ದಾರೆ. ಜೋಡು ರಸ್ತೆಯಲ್ಲಿ ಹಬ್ಬಕ್ಕೂ ಮುನ್ನವೇ ಟ್ರಾಫಿಕ್ ಸಮಸ್ಯೆ ಆರಂಭವಾಗಿದ್ದು ವ್ಯಾಪಾರಸ್ಥರಿಗೆ ಹಾಗೂ ಜನಸಾಮಾನ್ಯರಿಗೆ ವಾಹನಗಳ ಹಾರ್ನ್ ಕಿರಿಕಿರಿ ಒಂದೆಡೆಯಾದರೆ ಮಾರುಕಟ್ಟೆಯಲ್ಲಿ ನುಗ್ಗುತ್ತಿರುವ ಬೀದಿ ದನಗಳು ರಸ್ತೆಯಲ್ಲಿ ಹಚ್ಚಿರುವ ಹಣ್ಣುಗಳನ್ನು ತಿನ್ನಲು ಮುಂದಾದಾಗ ವ್ಯಾಪಾರಸ್ಥರು ಅದನ್ನು ಓಡಿಸಲು ಮುಂದಾಗುತ್ತಾರೆ, ಆಗ ದನ ದಿಕ್ಕಾಪಾಲಾಗಿ ಓಡುತ್ತವೆ. ಇದು ಆತಂಕ ಮೂಡಿಸುತ್ತದೆ.

ಸಾಗಾಟ ಹೆಚ್ಚಳ: ಪಟ್ಟಣದಲ್ಲಿ ದೀಪಾವಳಿ ಹಬ್ಬದ ವ್ಯಾಪಾರ ಎರಡು ದಿನಗಳಿಂದ ಜೋರಾಗಿದ್ದು, ಗ್ರಾಹಕರು ಬೆಲೆ ಹೆಚ್ಚಾಯಿತು ಎಂದು ಹೇಳುತ್ತಿದ್ದಾರೆ. ಆದರೆ ಪೆಟ್ರೋಲ್ ಮತ್ತು ಡಿಸೇಲ್ ಸೇರಿ ಇತರ ವಸ್ತುಗಳ ಬೆಲೆ ಹೆಚ್ಚಾಗಿದ್ದು ಅಗತ್ಯ ಸಾಮಾಗ್ರಿಗಳ ಸಾಗಾಟ ಸಹ ಹೆಚ್ಚಾಗಿದ್ದು ಸಹಜವಾಗಿ ಕೊಂಚ ಮಟ್ಟದ ಬೆಲೆ ಏರಿಕೆಯಾಗಿದೆ ಎಂದು ವರ್ತಕ ಸಿದ್ದು ಬಳಿಗೇರ ತಿಳಿಸಿದರು.