ಮನೆಯ ಆವರಣ ಹಾಗೂ ಮಾಳಿಗೆಯಲ್ಲಿ ನೂರಾರು ಬಗೆಯ ಹೂವು, ಹಣ್ಣು, ತರಕಾರಿ ಮತ್ತು ಔಷಧೀಯ ಸಸ್ಯ ಬೆಳೆಸುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ ಸುಜಾತಾ

ಮಂಜುನಾಥ ಕೆ.ಎಂ. ಬಳ್ಳಾರಿ

ನಗರದ ಕಾಂಕ್ರೀಟ್ ಕಟ್ಟಡಗಳ ನಡುವೆ ಹಸಿರಿನ ಲೋಕವೊಂದನ್ನು ಸೃಷ್ಟಿಸುವುದು ಸುಲಭದ ಮಾತಲ್ಲ. ಆದರೆ, ಆಸಕ್ತಿ, ಪರಿಶ್ರಮ ಮತ್ತು ಪರಿಸರದ ಮೇಲಿನ ಕಾಳಜಿ ಇದ್ದರೆ ಮನೆಯ ಮಾಳಿಗೆಯನ್ನೇ ಸುಂದರ ಉದ್ಯಾನವನವನ್ನಾಗಿ ರೂಪಿಸಬಹುದು ಎಂಬುದನ್ನು ಬಳ್ಳಾರಿಯ ಶಾಸ್ತ್ರಿನಗರ ಮೊದಲ ಕ್ರಾಸ್‌ನ ನಿವಾಸಿ ಆರ್.ಜೆ. ಸುಜಾತಾ ತೋರಿಸಿಕೊಟ್ಟಿದ್ದಾರೆ.

ಮನೆಯ ಆವರಣ ಹಾಗೂ ಮಾಳಿಗೆಯಲ್ಲಿ ನೂರಾರು ಬಗೆಯ ಹೂವು, ಹಣ್ಣು, ತರಕಾರಿ ಮತ್ತು ಔಷಧೀಯ ಸಸ್ಯ ಬೆಳೆಸುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ ಸುಜಾತಾ. ಬರದ ನಾಡು ಬಳ್ಳಾರಿಯ ಬಿಸಿಲಿನ ನಡುವೆಯೂ ಹಸಿರಿನ ಸೊಬಗು ಕಾಪಾಡಿಕೊಂಡಿರುವ ಇವರು ತಮ್ಮಮನೆಯ ಮಾಳಿಗೆಯನದನು ಪುಟ್ಟ ಕೈತೋಟವನ್ನಾಗಿ ರೂಪಿಸಿದ್ದಾರೆ.

ಕಳೆದ ಆರೇಳು ವರ್ಷಗಳಿಂದ ಈ ಹಸಿರು ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಆರಂಭದಲ್ಲಿ ಒಂದಿಷ್ಟು ಗಿಡ ಬೆಳೆಸುವ ಮೂಲಕ ಶುರುವಾದ ಆಸಕ್ತಿ, ಇಂದು ನೂರಾರು ಬಗೆಯ ಸಸ್ಯಗಳ ಪೋಷಣೆಯವರೆಗೆ ಬೆಳೆದಿದೆ.

ಹಣ್ಣು, ಹೂವುಗಳ ವೈವಿಧ್ಯ: ಸುಜಾತಾ ಅವರ ಕೈತೋಟದಲ್ಲಿ ಸಪೋಟ, ಬಾಳೆ, ಚೆರ್ರಿ, ಸೀಬೆ, ದಡ್ಡಲಕಾಯಿ, ನೀಲದಹಣ್ಣು, ಮೊಸುಂಬೆ, ನಿಂಬೆ, ಡ್ರ್ಯಾಗನ್ ಫ್ರೂಟ್, ಗೆಣಸು, ಅಂಜೂರ ಸೇರಿದಂತೆ ಹಲವು ಬಗೆಯ ಹಣ್ಣಿನ ಗಿಡಗಳಿವೆ. ಮಿಂಟ್, ಕರಿಬೇವು, ನುಗ್ಗೆ ಸೇರಿದಂತೆ ನಿತ್ಯದ ಅಡುಗೆಗೆ ಅಗತ್ಯವಾಗುವ ಸಸ್ಯಗಳನ್ನೂ ಬೆಳೆಸಿದ್ದಾರೆ. ಹೂವಿನ ಗಿಡಗಳ ವೈವಿಧ್ಯವೂ ಗಮನ ಸೆಳೆಯುತ್ತದೆ. ನಾಲ್ಕು ಬಗೆಯ ದಾಸವಾಳ, 15 ಬಗೆಯ ಬೋನ್ಸಾಯಿ ಗಿಡಗಳು, ವಾಟರ್ ಲಿಲ್ಲಿ, ಶಾವಂತಿ, ಮಲ್ಲಿಗೆ ಹಾಗೂ ನಾಲ್ಕು ಬಗೆಯ ಕಮಲದ ಹೂವುಗಳು ಕೈತೋಟದ ಸೌಂದರ್ಯ ಹೆಚ್ಚಿಸಿವೆ. ಬಳ್ಳಿಗೆಣಸು ಸೇರಿದಂತೆ ಹತ್ತಾರು ಬಗೆಯ ಔಷಧೀಯ ಸಸ್ಯಗಳೂ ಇಲ್ಲಿವೆ. ವಿಶೇಷವೆಂದರೆ, ಈ ಎಲ್ಲ ಗಿಡಗಳಿಗೂ ರಾಸಾಯನಿಕ ಗೊಬ್ಬರ ಅಥವಾ ಕೀಟನಾಶಕಗಳ ಬಳಕೆಗೆ ಆದ್ಯತೆ ನೀಡದೆ, ಸಂಪೂರ್ಣ ಸಾವಯವ ಪದ್ಧತಿಯಲ್ಲಿಯೇ ಪೋಷಣೆ ಮಾಡುತ್ತಿದ್ದಾರೆ.

ಸಾವಯವ ಉತ್ಪನ್ನಗಳ ತಯಾರಿ: ನೈಸರ್ಗಿಕ ವಸ್ತು ಬಳಸಿಕೊಂಡು ದೈನಂದಿನ ಜೀವನಕ್ಕೆ ಅಗತ್ಯವಾದ ಗೃಹೋಪಯೋಗಿ ಉತ್ಪನ್ನಗಳನ್ನು ತಯಾರಿಸುವಲ್ಲಿಯೂ ಇವರು ಆಸಕ್ತಿ ಹೊಂದಿದ್ದಾರೆ. ಸಾವಯವ ಪದ್ಧತಿಯಲ್ಲಿ ಪಿನಾಯಿಲ್ ತಯಾರಿಸುವ ಜತೆಗೆ ವಿವಿಧ ಔಷಧೀಯ ಸಸ್ಯಗಳನ್ನು ಬಳಸಿಕೊಂಡು ಸೋಪುಗಳನ್ನು ಸಿದ್ಧಪಡಿಸುತ್ತಿದ್ದಾರೆ. ಶಾಂಪೂ, ಲಿಪ್‌ಬಾಮ್, ಧೂಪ, ಜಪಮಾಲೆ, ಸಾಂಬ್ರಾಣಿ ಹಾಗೂ ಗೋಮಯದಿಂದ ದೀಪಗಳನ್ನು ತಯಾರಿಸುವ ಮೂಲಕ ನೈಸರ್ಗಿಕ ಉತ್ಪನ್ನಗಳ ಬಳಕೆಗೆ ಉತ್ತೇಜನ ನೀಡುತ್ತಿದ್ದಾರೆ.

ನಗರ ಪ್ರದೇಶಗಳಲ್ಲಿ ಜಾಗದ ಕೊರತೆ, ಹೆಚ್ಚುತ್ತಿರುವ ತಾಪಮಾನ ಮತ್ತು ಪರಿಸರ ಮಾಲಿನ್ಯದ ನಡುವೆ ಮನೆಗಳ ಮಾಳಿಗೆ ಹಾಗೂ ಬಾಲ್ಕನಿಗಳಲ್ಲಿ ಗಿಡಗಳನ್ನು ಬೆಳೆಸುವ ಅಭ್ಯಾಸ ಹೆಚ್ಚಬೇಕಿದೆ. ಈ ನಿಟ್ಟಿನಲ್ಲಿ ಸುಜಾತಾ ಪ್ರಯತ್ನ ಇತರರಿಗೂ ಪ್ರೇರಣೆಯಾಗಿದೆ. ಪತಿ ಆರ್.ಜೆ. ಬಸವನಗೌಡ ಹಾಗೂ ಪುತ್ರ ಅಕ್ಷಯ್ ಕುಮಾರ್ ಸುಜಾತಾ ಅವರ ಹಸಿರು ಬದುಕಿನ ಪ್ರಯತ್ನಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಸಾವಯವ ಉತ್ಪನ್ನಗಳ ಕುರಿತು ಹೆಚ್ಚಿನ ಮಾಹಿತಿ ಹಾಗೂ ಖರೀದಿಗೆ ಆಸಕ್ತರು ಮೊಬೈಲ್ ಸಂಖ್ಯೆ 9000367605 ಸಂಪರ್ಕಿಸಬಹುದು.

ಬಾಲ್ಯದಿಂದಲೂ ನನಗೆ ಗಿಡ-ಮರಗಳ ಬಗ್ಗೆ ಅಪಾರ ಆಸಕ್ತಿ. ಹೀಗಾಗಿ ಹತ್ತಾರು ಬಗೆಯ ಹೂವು, ಹಣ್ಣು ಹಾಗೂ ಔಷಧೀಯ ಸಸ್ಯ ಬೆಳೆಸಿದ್ದೇನೆ. ಶ್ರೀ ಸಾಯಿ ನ್ಯಾಚುರಲ್ಸ್‌ ಹೆಸರಿನಲ್ಲಿ ಸಾವಯವ ಉತ್ಪನ್ನಗಳನ್ನು ಮನೆಯಲ್ಲಿಯೇ ತಯಾರಿಸಿ ಮಾರಾಟ ಮಾಡುತ್ತೇವೆ. ಇದು ನನಗೆ ಹೆಚ್ಚು ಖುಷಿ ನೀಡಿದೆ ಎಂದು ಬಳ್ಳಾರಿ ಶಾಸ್ತ್ರಿನಗರದ ಶ್ರೀ ಸಾಯಿ ನ್ಯಾಚುರಲ್ಸ್‌ ಮುಖ್ಯಸ್ಥರಾದ ಆರ್‌.ಜೆ.ಸುಜಾತ ತಿಳಿಸಿದ್ದಾರೆ.