ಶಿಗ್ಗಾಂವಿ: ವರದಾ ನದಿ ನೀರನ್ನು ತಡಸ ಹಾಗೂ ಸುತ್ತಮುತ್ತಲಿನ ಗ್ರಾಮದ ಕೆರೆಗಳಿಗೆ ತುಂಬಿಸುವಂತೆ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಎತ್ತಿನ ಗಾಡಿ ಮೆರವಣಿಗೆಯ ಮೂಲಕ ಪ್ರತಿಭಟನೆ ನಡೆಸಿದರು.
ಗ್ರಾಮದ ಕೆರೆಗಳಿಗೆ ನೀರು ತುಂಬಿಸಬೇಕು, ಕಬ್ಬಿನ ದರವನ್ನು ಕರ್ನಾಟಕದಲ್ಲಿ ಪ್ರತಿ ಟನ್‌ಗೆ ೫೫೦೦ ರು. ನಿಗದಿ ಮಾಡುವಂತೆ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಗೋವಿನ ಜೋಳವನ್ನು ಕರ್ನಾಟಕದಲ್ಲಿರುವ ಎಲ್ಲಾ ಕಂಪನಿಗಳು ಕೇಂದ್ರ ಸರ್ಕಾರದ ಆದೇಶದಂತೆ ಖರೀದಿ ಮಾಡಬೇಕೆಂದು ರೈತರು ಅಧಿಕಾರಿಗಳಿಗೆ ಒತ್ತಾಯಿಸಿದರು.
ನಂತರ ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಕರಿಯಪ್ಪ ಆಲೂರು, ತಡಸ ಗ್ರಾಮದ ರೈತರ ಹೊಲಗಳಿಗೆ ಹೋಗುವ ದಾರಿ ಸರಿಪಡಿಸಬೇಕು, ಮಧ್ಯಂತರ ಬೆಳೆವಿಮೆಯನ್ನು ರೈತರ ಖಾತೆಗೆ ಜಮಾ ಮಾಡುವಂತೆ ಆಗ್ರಹಿಸಿದರು.ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಲಮಂಡಳಿಯ ಸಹಾಯಕ ಅಧಿಕಾರಿ ರವಿ ಅರಸಿಕೆರೆ ಮನವಿ ಸ್ವೀಕರಿಸಿ ತಡಸ ಭಾಗದ ಕೆರೆಗಳಿಗೆ ೨೨ರಂದು ವರದಾ ನದಿಯ ನೀರನ್ನು ಬಿಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತರಾದ ಕೃಷ್ಣಾ ಚೌಡಾಳ ಎಲ್ಲಪ್ಪ ಗರಗದ, ಗಂಗಾಧರ ಮಳವಳ್ಳಿ, ಈರಣ್ಣ ಗಾಣಿಗೆರೆ, ನಾಗರಾಜ ಮಿಶ್ರಿಕೋಟಿ, ಮಲ್ಲಯ್ಯ ಪೂಜಾರ, ಶಂಕರ ಬಡಿಗೇರ, ಯಲ್ಲಪ್ಪ ತಿಮ್ಮಾಪೂರ, ಗಂಗಾಧರ ಬೆಂಡಲಗಟ್ಟಿ ಪಾಲ್ಗೊಂಡಿದ್ದರು.