ಡಾ. ಅಂಬೇಡ್ಕರ್ ಅಭಿಮಾನಿ ಬಳಗ, ನಾನಾ ಸಂಘಟನೆಗಳಿಂದ ಆಕ್ರೋಶಮುಂಡರಗಿ: ಪಟ್ಟಣದ ಪುರಸಭೆ ಎದುರಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಒತ್ತಾಯಿಸಿ ತಾಲೂಕು ಬಿ.ಆರ್. ಅಂಬೇಡ್ಕರ್ ಅಭಿಮಾನಿ ಬಳಗ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಸಂಜೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಧನಂಜಯ ಮಾಲಗತ್ತಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಡಿ.ಎಚ್.ನದಾಫ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ನಿಂಗರಾಜ ಹಾಲಿನವರ ಮಾತನಾಡಿ, ಅಂಬೇಡ್ಕರ್ ಪುತ್ಥಳಿ ನಿರ್ಮಾಣದ ಕುರಿತು ನಾವು ನಿರಂತರವಾಗಿ ಮನವಿ ಸಲ್ಲಿಸುತ್ತಾ ಒತ್ತಾಯಿಸುತ್ತಾ ಬಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ನಾವು ಭರವಸೆ ನೀಡುವವರೆಗೂ ಪ್ರತಿಭಟನೆ ಮುಂದುವರೆಸಲಿದ್ದೇವೆ ಎಂದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಮಾತನಾಡಿ, ತಾವು ನಿಮ್ಮ ಈ ಮನವಿಯ ಕುರಿತು ಈಗಾಗಲೇ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಇದಕ್ಕೆ ಸಂಬಂದಿಸಿದ ಎಲ್ಲ ಕಡತಗಳನ್ನು ಹಿರಿಯ ಅಧಿಕಾರಿಗಳಿಗೆ ಕಳಿಸಿರುವುದಾಗಿ ಹೇಳಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ತಕ್ಷಣವೇ ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುವಂತೆ ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಧನಂಜಯ ಮಾಲಗತ್ತಿ ಮಾತನಾಡಿ, ಯಾವುದೇ ಪುತ್ಥಳಿ ಪ್ರತಿಷ್ಠಾಪನೆ ಮಾಡಲು ಸರ್ಕಾರದ ನಿಯಮಗಳಿರುತ್ತವೆ. ಅದರಂತೆ ಮಾಡಬೇಕಾಗುತ್ತದೆ. ಮುಖ್ಯಾಧಿಕಾರಿಯವರು ಹೇಳುವಂತೆ ಇದೊಂದು ಬಾರಿ ಕಾಲಾವಕಾಶ ನೀಡುವಂತೆ ತಿಳಿಸಿದರು.ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಮಂಗಳವಾರ ಮಧ್ಯಾಹ್ನದವರೆಗೆ ನೀವು ಇದಕ್ಕೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ನಾವು ಮತ್ತೆ ಈ ಹೋರಾಟವನ್ನು ನಿರಂತರವಾಗಿ ಮುಂದುವರೆಸುವುದಾಗಿ ತಿಳಿಸಿ, ಮುಂಡರಗಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಅವಕಾಶ ನೀಡುವಂತೆ ಒತ್ತಾಯಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಪ್ರತಿಭಟನೆಯನ್ನು ಮುಕ್ತಾಯಗೊಳಿಸಿದರು. ಈ ಸಂದರ್ಭದಲ್ಲಿ ನಿಂಗರಾಜ ಹಾಲಿನವರ, ಪ್ರಕಾಶ ಹಲವಾಗಲಿ, ಸಂತೋಷ ಹಿರೇಮನಿ, ಮಹ್ಮದರಫಿ ಮುಲ್ಲಾ, ಚಂದ್ರಶೇಖರ ಪೂಜಾರ, ಭೀಮರಾಜ ಮುಂಡವಾಡ, ಮಲ್ಲೇಶ ಕಕ್ಕೂರ, ಡಿ.ಎಂ.ಕಾತರಕಿ, ಹರೀಶ ಹಾರೊಗೆರಿ, ಮೌಲಾಸಾಬ್ ಬಾಗವಾನ, ಮಹಾದೇವಪ್ಪ ತಾಂಬ್ರಗುಂಡಿ, ಹನಂತ ಪೂಜಾರ, ಶಿವು ಕಲಕೇರಿ, ರೆಹೆಮಾನಸಾಬ್ ಒಂಟಿ, ಕಿರಣ್ ಹಾಲಿನವರ, ಬಸವರಾಜ ದೇಸಾಯಿ, ಮಂಜುನಾಥ ಬೆನಕೊಪ್ಪ, ನಾಗರಾಜ ಹಾನಗಲ್, ಪರಶುರಾಮ ಕರಡಿಕೊಳ್ಳ, ಅಂದಪ್ಪ ಉಳ್ಳಾಗಡ್ಡಿ, ನಿಂಗರಾಜ ಸ್ವಾಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.