ಕನ್ನಡಪ್ರಭ ವಾರ್ತೆ ಹಾಸನ
ಪ್ರತಿಭಟನಾಕಾರರು ಕೋಡಿಹಳ್ಳಿ ಚಂದ್ರಶೇಖರ್ ಅವರ ಬಂಧನವನ್ನು ಖಂಡಿಸಿ, ರೈತ ಚಳವಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಪರಿಶೀಲಿಸದೆ ಹಾಗೂ ಯಾವುದೇ ನೋಟಿಸ್ ನೀಡದೆ ಹಳೆಯ ಪ್ರಕರಣದ ವಾರಂಟ್ ಆಧರಿಸಿ ಬಂಧಿಸಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ಮಾತನಾಡಿ, ಸೆ.೨೭ರಂದು ಹುಬ್ಬಳ್ಳಿಯಲ್ಲಿ ಮಹದಾಯಿ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಹೋರಾಟದಲ್ಲಿ ಪಾಲ್ಗೊಂಡಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ೨೦೧೩ರಲ್ಲಿ ನಡೆದ ರೈಲು ತಡೆ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ವಾರಂಟ್ ಇರುವ ಹಿನ್ನೆಲೆಯಲ್ಲಿ ಆರ್‌ಪಿಎಫ್ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದರು. ರೈತ ಚಳವಳಿಗೆ ಸಂಬಂಧಿಸಿದ ಹಲವು ಪ್ರಕರಣಗಳನ್ನು ಸರ್ಕಾರ ವಾಪಸ್ ಪಡೆದಿರುವ ಹಿನ್ನೆಲೆಯಲ್ಲಿ ೨೦೧೩ರ ಪ್ರಕರಣದ ಕುರಿತು ಸೂಕ್ತ ಪರಿಶೀಲನೆ ನಡೆಸದೆ ಹಾಗೂ ಮುನ್ನೋಟಿಸ್ ನೀಡದೆ ಬಂಧಿಸಿರುವುದು ಖಂಡನೀಯ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಸಂಚಾಲಕ ವಿಠಲ, ಜಿಲ್ಲಾ ಕಾರ್ಯದರ್ಶಿ ಎಚ್.ಆರ್. ಸಮೀವುಲ್ಲಾ, ಹಸಿರುಸೇನೆ ಜಿಲ್ಲಾ ಸಂಚಾಲಕ ಅಕ್ಮಲ್ ಪಾಷಾ, ಹಾಸನ ತಾಲೂಕು ಅಧ್ಯಕ್ಷ ದಾಸೇಗೌಡ, ಅರಕಲಗೂಡು ತಾಲೂಕು ಅಧ್ಯಕ್ಷ ಗಂಗಾಧರ ಮೇಷ್ಟು, ಆಲೂರು ತಾಲೂಕು ಅಧ್ಯಕ್ಷರು ಸೇರಿದಂತೆ ಕಮಲಮ್ಮ, ಪವಿತ್ರ, ರಂಗಮ್ಮ, ಕಾಳಕ್ಕ ಹಾಗೂ ಇತರರು ಉಪಸ್ಥಿತರಿದ್ದರು.---
ಫೋಟೋಹಸಿರುಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಬಿಡುಗಡೆಗೆ ಆಗ್ರಹಿಸಿ ರೈತ ಸಂಘದ ಹಾಸನ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.