ಕನ್ನಡಪ್ರಭ ವಾರ್ತೆ ಪಾಂಡವಪುರ
ಸಬ್ ರಿಜಿಸ್ಟರ್ ಕಚೇರಿ ಎದುರು ಸೇರಿದ ಪ್ರತಿಭಟನಾಕಾರರು ನೋಂದಣಾಧಿಕಾರಿಗಳ ಕಚೇರಿ ಮೊದಲನೇ ಮಹಡಿಯಲ್ಲಿದ್ದು, ವೃದ್ಧರು, ಅಂಗವಿಕಲರು, ದೈಹಿಕ ನಿಶಕ್ತರು ಮೆಟ್ಟಿಲು ಹತ್ತಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿನಿತ್ಯ ತಮ್ಮ ಆಸ್ತಿ ನೋಂದಣಿ, ಮಾರಾಟ ಇನ್ನಿತರ ವಿಚಾರವಾಗಿ ನೂರಾರು ಸಂಖ್ಯೆಯ ಸಾರ್ವಜನಿಕರು ಇಲ್ಲಿಗೆ ಆಗಮಿಸುತ್ತಾರೆ. ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಕುಡಿಯುವ ನೀರು, ಕುಳಿತುಕೊಳ್ಳಲು ಕುರ್ಚಿ, ಕುಡಿವ ನೀರು ಹಾಗೂ ಶೌಚಗೃಹದ ವ್ಯವಸಸ್ಥೆ ಸೇರಿದಂತೆ ಯಾವುದೇ ಮೂಲಸೌಕರ್ಯ ಕಲ್ಪಿಸಲಾಗಿಲ್ಲ ಎಂದು ಕಿಡಿಕಾರಿದರು.ಅಧಿಕಾರಿಗಳಿಗೆ ಮಾತ್ರ ಶೌಚಗೃಹವಿದ್ದು, ಸಾರ್ವಜನಿಕರಿಗೆ ಇಲ್ಲವಾಗಿದೆ. ಕಚೇರಿಗೆ ಬರುವ ಸಾರ್ವಜನಿಕರು ಬಹಿರ್ದೆಸೆಗೆ ಎಲ್ಲಿಗೆ ಹೋಗಬೇಕು. ಇದರಿಂದ ಮಹಿಳೆಯರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ ಎಂದು ಉಪನೋಂದಣಿಧಿಕಾರಿ ವಎಂಕಟೇಶ್ ಅವರನ್ನು ಪ್ರಶ್ನಿಸಿದರು.
ಜನದಟ್ಟಣೆ ಹೆಚ್ಚಾಗಿರುವ ಕಾರಣ ಕಚೇರಿಗೆ ಬರುವ ಸಾರ್ವಜನಿಕರು ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶ ಸಿಗದೇ ಪರದಾಡುತ್ತಿದ್ದಾರೆ. ಈಗಿರುವ ಕಚೇರಿಗೆ ಬಾಡಿಗೆ ತೆರಬೇಕಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಹೀಗಾಗಿ ಇಲಾಖೆಗೆ ಸೇರಿದ ಕಟ್ಟಡಕ್ಕೆ ಕಚೇರಿ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಉಪನೋಂದಣಾಧಿಕಾರಿ ವೆಂಕಟೇಶ್ ಮಾತನಾಡಿ, ಕಚೇರಿಯನ್ನು ನೆಲಮಹಡಿಗೆಗೆ ಸ್ಥಳಾಂತರಿಸುವಂತೆ ಕೋರಿ ಈಗಾಗಲೇ ಮೇಲಾಧಿಕಾರಿಗಳಿಗೆ ಪತ್ರ ಮುಖೇನಾ ಮನವಿ ಸಲ್ಲಿಸಲಾಗಿದೆ. ಜತೆಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು.