ಕನ್ನಡಪ್ರಭ ವಾರ್ತೆ ಇಂಡಿ
ಗುತ್ತಿ ಬಸವಣ್ಣ ಮತ್ತು ತಿಡಿಗುಂದಿ ಶಾಖಾ ಕಾಲುವೆಯಿಂದ ತಾಲೂಕಿನ ಕಾಲುವೆಯ ಕೊನೆಯ ಭಾಗದವರೆಗೂ ನೀರು ಹರಿಸಿ ಕೆರೆ, ಕಟ್ಟೆ, ಹಳ್ಳ, ಕೊಳ್ಳ ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ತಾಲೂಕಿನ ತಡವಗಲಗಾ ಗ್ರಾಮದ ಜೋಡ ಗುಡಿ ಹತ್ತಿರ ವಿಜಯಪುರ ಮುಖ್ಯ ರಸ್ತೆಯ ತಡೆದು ನೂರಾರು ರೈತರು ಪ್ರತಿಭಟನೆ ನಡೆಸಿದರು.ಪ್ರತಿಭಟನೆ ಮಾಹಿತಿ ಪಡೆದು ಅಧಿಕಾರಿಗಳು ಸ್ಥಳಕ್ಕೆ ಬಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ನಿಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರೂ ರೈತರು ಯಾವುದೇ ಹೇಳಿಕೆ ಜಗದೇ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ನಮ್ಮ ರೈತರ ಬೇಡಿಕೆ ಈಡೇರಿಸುವವವರೆಗೂ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.
ಅಧಿಕಾರಿಗಳಿಗೆ ಅನೇಕ ಬಾರಿ ಲಿಖಿತವಾಗಿ ಸಮಸ್ಯೆಗಳ ಕುರಿತು ಬೇಡಿಕೆ ನೀಡಿದರೂ ಕ್ಯಾರೆ ಎಂದಿಲ್ಲ. ತಾಲೂಕಿನ ತಡವಲಗಾ, ಅಥರ್ಗಾ, ಕೊಟ್ನಾಳ, ನಿಂಬಾಳ, ಚಿಕ್ಕಬೇವನೂರ, ಅಥರ್ಗಾ, ರಾಜನಾಳ ಸೇರಿದಂತೆ ಇನ್ನಿತರ ಕೆರೆಗಳಿಗೆ ನೀರು ತುಂಬಬೇಕು. ಗುತ್ತಿಬಸವಣ್ಣ ಕಾಲುವೆಯ ಕೊನೆ ಭಾಗದವರೆಗೂ ನೀರು ಹರಿಸಬೇಕು. ತಾಲೂಕಿನ ಹಂಜಗಿ, ರೂಗಿ, ತೆನ್ನಳ್ಳಿ ಸೇರಿದಂತೆ ಜನ ಜಾನುವಾರಗಳಿಗೆ ನೀರಿನ, ಮೇವಿನ ಕೊರತೆಯಾಗಿದೆ. ಈಗ ಕಾಲುವೆಗಳ ಮೂಲಕ ಕೆರೆಗಳಿಗೆ, ನೀರು ತುಂಬಿದರೆ ಅನುಕೂಲವಾಗುತ್ತದೆ. ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಎಸಿ ಮಾತಿಗೂ ಜಗ್ಗಲಿಲ್ಲ:ಧರಣಿ ಸ್ಥಳಕ್ಕೆ ಎಸ್ಸಿ ಅಬೀದ ಗದ್ಯಾಳ, ಕೆಬಿಜೆಎನ್ಎಲ್ ಅಧಿಕಾರಿ ಮನೋಜಕುಮಾರ ಗಡಬಳ್ಳಿ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿ ಪರಿಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು. ಆದರೆ ರೈತರು ಜಿಲ್ಲಾಧಿಕಾರಿಗಳು ಬರಬೇಕು ಎಂದು ಪಟ್ಟು ಹಿಡಿದರು.
ಈ ವೇಳೆ ಭೀಮಸೇವ ಟೋಕರೆ, ಮಲ್ಲನಗೌಡ ಪಾಟೀಲ ಬಿ.ಡಿ ಪಾಟೀಲ, ವಿಠೋಬಾ ಹುಣಶ್ಯಾಳ, ಈರಪ್ಪಾ ಗೋಟ್ಯಾಳ, ಸುಭಾಷ ಗೊಳ್ಳಗಿ, ಶರಣಪ್ಪ ತಾರಾಪೂರ, ಗುರುಪಾದ ತಾರಾಪೂರ, ಅಂಬಣ್ಣ ಪಂತೋಜಿ, ಭೀಮರಾಯ ಪುಟಾಣಿ, ಭೀಮರಾಯ ಬಿರಾದಾರ, ಭೀಮು ಕಪಾಲಿ, ಹೂವಪ್ಪ ಶಿರಶ್ಯಾಡ, ಮಹಾದೇವ ಸುಧಾಮ, ಚಿದಾನಂದ ಮದರಿ, ಚೆನ್ನಪ್ಪ ಮಿರಗಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿದ್ದರು.