ಕೊಪ್ಪಳ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯಿಂದ ಜಿಲ್ಲಾಧಿಕಾರಿ ಕಚೇರಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಉದ್ದಗಲಕ್ಕೂ ಸಿಐಟಿಯು ಸೇರಿ ಇತರೆ ಕೇಂದ್ರ ಕಾರ್ಮಿಕ ಸಂಘಗಳು ಹಾಗೂ ಸಂಯುಕ್ತ ಹೋರಾಟ ಕರ್ನಾಟಕ ಜಂಟಿಯಾಗಿ ಪ್ರತಿಭಟನೆ ನಡೆಸಿ ಈ ಬೇಡಿಕೆಗಳ ಆಧಾರದಲ್ಲಿ ಸಲ್ಲಿಸುತ್ತಿದ್ದೇವೆ. ಕೇಂದ್ರ ಸರ್ಕಾರದ ಜನ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿ ಕೈ ಬಿಡಬೇಕೆಂದು ಆಗ್ರಹಿಸುತ್ತಿದ್ದೇವೆ ಎಂದು ತಿಳಿಸಿದರು.
ಬೇಡಿಕೆಗಳು:ನ. 21ರಂದು 4 ಸಂಹಿತೆಗಳ ಅಧಿಸೂಚನೆ ರದ್ದುಗೊಳಿಸಬೇಕು. ರಾಜ್ಯ ಸರ್ಕಾರ ಈ ನಿಯಮ ರಚಿಸಬಾರದು. ಶ್ರಮಶಕ್ತಿ ನೀತಿ ಕೇಂದ್ರ ಸರ್ಕಾರ ಹಿಂಪಡೆಯಬೇಕು ಮತ್ತು ರಾಜ್ಯ ಸರ್ಕಾರ ಇದನ್ನು ತಿರಸ್ಕರಿಸಬೇಕು. ಕನಿಷ್ಠ ವೇತನದ ಮಂಡಳಿ ಶಿಫಾರಸ್ಸು ಮಾಡಿರುವ ಕರಡು ಅಧಿಸೂಚನೆ ಅಂತಿಮಗೊಳಿಸಿ ₹36 ಸಾವಿರ ಜಾರಿ ಮಾಡಬೇಕು. ರಾಜ್ಯದಲ್ಲಿ ಕಾರ್ಖಾನೆ ಕಾಯ್ದೆಗೆ ತಂದಿರುವ ತಿದ್ದುಪಡಿ ವಾಪಸ್ಸು ಪಡೆಯಬೇಕು. 12 ಗಂಟೆಗಳ ಕೆಲಸ ಕಡ್ಡಾಯ ಮಾಡಬಾರದು. ಕರ್ನಾಟಕ ಕಾರ್ಮಿಕ ಸಮ್ಮೇಳನ ರಚಿಸಬೇಕು, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಅನುದಾನ ಒದಗಿಸಿ,ನಿವೃತ್ತಿ ಸೌಲಭ್ಯ ಕೊಡಬೇಕು ಮತ್ತು ಸಾಮಾಜಿಕ ಭದ್ರತಾ ಸವಲತ್ತು ನೀಡಬೇಕು. ಇತ್ತೀಚಿಗೆ ಪ್ರಾರಂಭವಾಗಿರುವ ಅಸಂಘಟಿತ ಕಾರ್ಮಿಕರ ವಿವಿಧ ಮಂಡಳಿಗಳಿಗೆ ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸಬೇಕು ಮತ್ತು ಸೆಸ್‌ನ್ನು ಸಂಗ್ರಹಿಸಿ ಸಾಮಾಜಿಕ ಭದ್ರತಾ ಸೌಲಭ್ಯ ಕೊಡಬೇಕು ಸೇರಿದಂತೆ ಅನೇಕ ಬೇಡಿಕೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಎಂ.ಬಿ. ನಾಡಗೌಡ, ಸಿಐಟಿಯು ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಸಿಐಟಿಯು ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಡಗ್ಗಿ, ಸಿಐಟಿಯು ಜಿಲ್ಲಾ ಖಜಾಂಚಿ ಲಕ್ಷ್ಮಿ ದೇವಿ ಸೋನಾರ, ಎ.ರಮೇಶ್, ಚಂದ್ರಶೇಖರಗೌಡ ಹೇರೂರು, ದುರ್ಗಮ್ಮ ಹೊಸಕೇರಾ, ಗಂಗಮ್ಮ ಸಿದ್ದಾಪುರ, ಕೃಷ್ಣಪ್ಪ ನಾಯಕ್, ಅಂಬರೀಶ್ ಡಾಣಿ, ಇಮಾಮ್ ಗಂಗಾವತಿ, ಮಹಾರಾಜ್ ಭಾಗವಹಿಸಿದ್ದರು.