ಕಬ್ಬು ಖರೀದಿಸಲು ಆಗ್ರಹಿಸಿ 29ರಂದು ಪ್ರತಿಭಟನೆ: ಅಬ್ದುಲ್‌ ಬಾಸೀತ

KannadaprabhaNewsNetwork |  
Published : Oct 23, 2024, 12:51 AM IST
ಚಿಂಚೋಳಿ ತಾಲೂಕಿನ ಕಬ್ಬು ಬೆಳೆಗಾರರ ಕಬ್ಬು ಖರೀದಿಸಲು ಅಗ್ರಹ | Kannada Prabha

ಸಾರಾಂಶ

ಚಿಂಚೋಳಿಯಲ್ಲಿ ರೈತ ಹಿತರಕ್ಷಣಾ ಸಮಿತಿಯಿಂದ ಬೃಹತ್‌ ಹೋರಾಟ. ಪ್ರತಿಭಟನೆಯಲ್ಲಿ ಯಾವುದೇ ಪಕ್ಷಪಾತ ಇರುವುದಿಲ್ಲ, ರೈತರ ನೆರವಿಗಾಗಿ ಸರ್ಕಾರದ ಗಮನಸೆಳೆಯಲು ಪಟ್ಟಣದ ಬಸವೇಶ್ವರ ವೃತ್ತದಲ್ಲಿ 29ರಂದು ಬೆಳಗ್ಗೆ ೧೧ ಗಂಟೆಗೆ ಹೋರಾಟ ನಡೆಸಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಅಬ್ದುಲ್ ಬಾಸೀತ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕಿನಲ್ಲಿ ಸಾಕಷ್ಟು ರೈತರು ಪ್ರಸಕ್ತ ಸಾಲಿನಲ್ಲಿ ಅಧಿಕ ಕಬ್ಬು ಬೆಳೆದಿದ್ದಾರೆ. ಕೆಲವೆ ದಿನಗಳಲ್ಲಿ ಕಬ್ಬು ಕಟಾವಿಗೆ ಬರಲಿದೆ. ಆದರೆ ಕಬ್ಬು ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಕಬ್ಬು ಖರೀದಿಸುವಂತೆ ಅಗ್ರಹಿಸಿ ಪಟ್ಟಣದಲ್ಲಿ ನ.೨೯ರಂದು ತಾಲೂಕು ರೈತ ಹಿತರಕ್ಷಣಾ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಮಿತಿ ಅಧ್ಯಕ್ಷ ಅಬ್ದುಲ್ ಬಾಸೀತ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಹೊರವಲಯದಲ್ಲಿ ಕಳೆದೆರಡು ವರ್ಷಗಳಿಂದ ಸಿದ್ಧಸಿರಿ ಎಥೆನಾಲ್ ಪವರ್‌ ಘಟಕ ಪ್ರಾರಂಭಿಸಲು ಸುಪ್ರಿಂಕೋರ್ಟ್‌ನಲ್ಲಿ ದಾವೆ ಇರುವುದರಿಂದ ಅದು ಇತ್ಯರ್ಥ ಆಗಿರುವುದಿಲ್ಲ. ಸಿದ್ಧಸಿರಿ ಎಥೆನಾಲ್ ಪವರ್‌ ಘಟಕ ನಂಬಿಕೊಂಡು ಚಿಂಚೋಳಿ-ಕಾಳಗಿ ತಾಲೂಕಗಳಲ್ಲಿ ೬ ಸಾವಿರ ಹೆಕ್ಟೇರ್‌ ಕಬ್ಬು ಬೆಳೆದಿದ್ದಾರೆ. ಸೇಡಂ, ಚಿತ್ತಾಪೂರ, ಕಮಲಾಪೂರ ಮತ್ತು ನೆರೆಯ ಹುಮನಾಬಾದ ತಾಲೂಕಿನ ಅನೇಕ ರೈತರು ಕಬ್ಬು ಬೆಳೆದಿದ್ದಾರೆ. ಇದೀಗ ಕಬ್ಬು ಕಟಾವಿಗೆ ಬಂದಿದೆ. ಕಬ್ಬನ್ನು ಖರೀದಿಸಲು ಸರ್ಕಾರ ಮುಂದಾಗಬೇಕೆಂಬ ಬೇಡಿಕೆ ನಮ್ಮದಾಗಿದೆ. ಪ್ರತಿಭಟನೆಯಲ್ಲಿ ಯಾವುದೇ ಪಕ್ಷಪಾತ ಇರುವುದಿಲ್ಲ, ರೈತರ ನೆರವಿಗಾಗಿ ಸರ್ಕಾರದ ಗಮನಸೆಳೆಯಲು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅಂದು ಬೆಳಗ್ಗೆ ೧೧ ಗಂಟೆಗೆ ಹೋರಾಟ ನಡೆಸಲಾಗುತ್ತಿದೆ ಎಂದರು.

ಕಬ್ಬು ಬೆಳೆಗಾರರ ಸಮಿತಿ ಮುಖಂಡ ನಂದಿಕುಮಾರ ಪಾಟೀಲ ಮಾತನಾಡಿ, ಸಚಿವರಾದ ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ, ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಸಿದ್ಧಸಿರಿ ಎಥೆನಾಲ್ ಕುರಿತು ಸುಪ್ರಿಂ ಕೋರ್ಟಿನಲ್ಲಿರುವ ದಾವೆ ಹಿಂಪಡೆಯಲು ಅಗ್ರಹಿಸಲಾಗಿದೆ ಎಂದರು.

ಬಸವರಾಜ ಸಜ್ಜನಶೆಟ್ಟಿ, ಲಕ್ಷ್ಮಣ ಆವಂಟಿ, ಚಿತ್ರಶೇಖರ ಪಾಟೀಲ, ಶರಣು ಪಾಟೀಲ, ನಂದಿಕುಮಾರ ಪಾಟೀಲ, ಆರ್.ಗಣಪತರಾವ, ರೇವಣಸಿದ್ದಪ್ಪ ಅಣಕಲ, ಶಬ್ಬೀರ ಅಹೆಮದ, ಮತಿನ ಸೌದಾಗರ ಕಬ್ಬು ಬೆಳೆಗಾರರ ಸ್ಥಿತಿಗತಿ ಕುರಿತು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಕೀಲ ಶ್ರೀನಿವಾಸ ಬಂಡಿ, ಖಲೀಲ ಪಟೇಲ, ಅನಸಾರಿ ಮಹಮ್ಮದ ನಾಯಕೋಡಿ, ಶೇಖ ಫರೀದ, ಗುಂಡಯ್ಯಸ್ವಾಮಿ, ಜಗನ್ನಾಥ ಗುತ್ತೆದಾರ ಇನ್ನಿತರಿದ್ದರು.

PREV

Recommended Stories

ಧರ್ಮಸ್ಥಳ ಪ್ರಕರಣ ಮುಚ್ಚಿ ಹಾಕುವ ಯತ್ನ
ತಾಲೂಕು ಆಡಳಿತದ ಬೇಜವಾಬ್ದಾರಿಯಿಂದ ನೀರು ಕಲುಷಿತ