- ಬಲಗೈ ಸಮುದಾಯದಿಂದ ವರದಿ ವಿರೋಧಕ್ಕೆ ಎಡಗೈ ಮುಖಂಡರ ಆಕ್ಷೇಪ - - -
ಕನ್ನಡಪ್ರಭ ವಾರ್ತೆ ದಾವಣಗೆರೆನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗದ ವರದಿ ತಿರಸ್ಕರಿಸುವಂತೆ ಹಾಗೂ ಆಯೋಗದ ವರದಿ ಸುಟ್ಟು ಹಾಕಿದ ಬಲಗೈ ಸಮುದಾಯಗಳ ವರ್ತನೆ ಖಂಡಿಸಿ ಆ.18ರಂದು ಬೆಳಗ್ಗೆ 11 ಗಂಟೆಗೆ ದಾವಣಗೆರೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಎಡಗೈ ಸಮುದಾಯ, ದಲಿತ ಸಂಘಟನೆಗಳು, ವಿವಿಧ ಪಕ್ಷಗಳ ಮುಖಂಡರು ಪಕ್ಷಾತೀತ ತೀರ್ಮಾನ ಕೈಗೊಂಡರು.
ನಗರದ ಹಳೇ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಮಾದಿಗ ಸಮುದಾಯದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಳಗ್ಗೆ 11 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಉಪ ವಿಭಾಗಾಧಿಕಾರಿ ಕಚೇರಿ, ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ವರದಿಯನ್ನು ಯಥಾವತ್ ಜಾರಿ ಹಾಗೂ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಹೋರಾಟ ನಡೆಯಲಿದೆ. ಎಡಗೈ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಲಾಯಿತು.ಸಭೆಯಲ್ಲಿ ಮುಖಂಡರು ಮಾತನಾಡಿ, ನ್ಯಾ.ನಾಗಮೋಹನ ದಾಸ್ ಆಯೋಗ ಎಡಗೈ ಸಮುದಾಯಕ್ಕೆ ಶೇ.6 ಮೀಸಲಾತಿಗೆ ಶಿಫಾರಸು ಮಾಡಿರುವುದು ನ್ಯಾಯಸಮ್ಮತವಾಗಿದೆ. ಇದುವರೆಗೂ ನಮ್ಮೊಂದಿಗೆ ಒಳ ಮೀಸಲಾತಿಗಾಗಿ ಧ್ವನಿಯೆತ್ತಿ ಹೋರಾಟ ನಡೆಸಿಕೊಂಡು ಬಂದಿದ್ದ ಸೋದರ ಸಮಾಜ ಈಗ ಶೇ.6 ಮೀಸಲಾತಿ ನೀಡುವುದಕ್ಕೆ ವಿರೋಧ ಸಮಂಜಸವಲ್ಲ ಎಂದರು.
ಬಲಗೈ ಸಮುದಾಯದ ಡಾ. ಎಚ್.ಸಿ. ಮಹದೇವಪ್ಪ, ಡಾ. ಜಿ.ಪರಮೇಶ್ವರ, ಪ್ರಿಯಾಂಕ ಖರ್ಗೆ ಸಂಪುಟದಲ್ಲಿ ಮುಖ್ಯ ಸಚಿವರಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಇದ್ದಾರೆ. ಇಡೀ ಸರ್ಕಾರದಲ್ಲಿ ರಾಜ್ಯದಿಂದ ದೆಹಲಿಯಲ್ಲೂ ಪ್ರಭಾವಿ ಸಮುದಾಯವಾಗಿ ಬಲಗೈನವರೇ ಇದ್ದರು. ಸರ್ಕಾರದ ಭಾಗವೇ ಈ ಸಮುದಾಯವಾಗಿದೆ. ಆದ್ದರಿಂದ ಎಡಗೈ ಸಮುದಾಯದ ಶೇ.6 ಮೀಸಲಾತಿ ವಿಚಾರದ ಬಗ್ಗೆ ಆಕ್ಷೇಪಿಸುವುದು ಬೇಡ ಎಂದು ತಿಳಿಸಿದರು.ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಈವರೆಗೆ ಸದಾಶಿವ ಆಯೋಗದ ರದಿ ಜಾರಿಗೊಳ್ಳಬೇಕೆಂದಿದ್ದರು. ಈಗ ನಾಗಮೋಹನ ದಾಸ್ ಆಯೋಗದ ಒಳ ಮೀಸಲಾತಿ ಶಿಫಾರಸು ವರದಿ ಸರಿಯಿಲ್ಲ, ವರದಿ ತಿರಸ್ಕರಿಸುವಂತೆ ಆಯೋಗದ ವರದಿಯನ್ನೇ ಸುಟ್ಟು ಹಾಕಿದ್ದಾರೆ. ಇದು ಸರಿಯಲ್ಲ. ಸರ್ವೋಚ್ಛ ನ್ಯಾಯಾಲಯ ಆದೇಶದ ಉಲ್ಲಂಘನೆ ಎಂದರು.
ಅತ್ಯಂತ ಹಿಂದುಳಿದ ವರ್ಗ ಅಲೆಮಾರಿಗೆ ಶೇ.1 ಮಾತ್ರ ಮೀಸಲಾತಿಗೆ 59 ಅಲೆಮಾರಿ ಜಾತಿಗೆ ನೀಡಿದೆ. ಶೇ.6 ಮೀಸಲಾತಿಯನ್ನು ಮಾದಿಗ ಸಂಬಂಧಿತ 18 ಜಾತಿಗೆ ನೀಡಲಾಗಿದೆ. ಶೇ.5 ಮೀಸಲಾತಿಯನ್ನು 17 ಜಾರಿ ಒಳಗೊಂಡ ಬಲಗೈ ಸಮುದಾಯಕ್ಕೆ ನೀಡಿದೆ. ಹೀಗಿರುವಾಗ ಭೋವಿ, ಕೊರಚ, ಕೊರಮ, ಲಂಬಾಣಿಗೆ ಶೇ.4 ಮೀಸಲಾತಿ ಹಂಚಿಕೆ ಮಾಡಿದ್ದಕ್ಕೆ ಆಕ್ಷೇಪ ಏಕೆ ಎಂದು ಪ್ರಶ್ನಿಸಿದರು.ಬಲಗೈ ಸಮುದಾಯದಿಂದಲೇ ಕಾಂಗ್ರೆಸ್ 136 ಕ್ಷೇತ್ರ ಗೆದ್ದು ಅಧಿಕಾರಕ್ಕೆ ಬಂದಿದೆ. ಮಾದಿಗರು ಎಂದಿಗೂ ಹೋರಾಟ ಮಾಡಿಲ್ಲ, ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಮಾದಿಗರಿಗೆ ಗೊತ್ತಿಲ್ಲ, ತಾವು ಅಂಬೇಡ್ಕರ್ ಮೊಮ್ಮಕ್ಕಳು, ವಂಶಸ್ಥರೆಂಬ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿಕೆ ಸರಿಯಲ್ಲ. ತಮ್ಮನ್ನು ವಿರೋಧ ಹಾಕಿಕೊಂಡರೆ ಕಾಂಗ್ರೆಸ್ಸನ್ನೇ ನಾಶಪಡಿಸುವುದಾಗಿ ಬೆದರಿಕೆ ಶ್ರೀಗಳಿಗೆ ಶೋಭೆ ತರುವುದಿಲ್ಲ ಎಂದರು.
ಡಿಎಸ್‌ಎಸ್ ಸಂಸ್ಥಾಪಕ, ಹರಿಹರದ ಮಾದಿಗ ಸಮುದಾಯದ ಪ್ರೊ.ಕೃಷ್ಣಪ್ಪ ಇಲ್ಲದೇ ಇದ್ದಿದ್ದರೆ ಡಿಎಸ್‌ಎಸ್ ಹುಟ್ಟುತ್ತಲೇ ಇರಲಿಲ್ಲ. ದಲಿತಪರ ಹೋರಾಟಗಳೇ ಆಗುತ್ತಿರಲಿಲ್ಲ. ಮೈಸೂರು, ಚಾಮರಾಜ ನಗರದಲ್ಲಿ ಬಲಗೈ ಸಮುದಾಯದ ಹೋರಾಟ ಹುಟ್ಟಿಕೊಳ್ಳುವುದಕ್ಕೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರೇ ಕಾರಣ. ಹಿಂದೆಂದೂ ಹೋರಾಟ ಮಾಡದ ಬಲಗೈ ಸಮುದಾಯ ಹಂಚಿಕೊಂಡು ತಿನ್ನೋಣ ಎಂದಿತ್ತು. ಈಗ ಸಣ್ಣಪುಟ್ಟ ಸಮಸ್ಯೆಯನ್ನೇ ದೊಡ್ಡದು ಮಾಡುವುದು ಸರಿಯಲ್ಲ. ರಾಜಕೀಯ ಉದ್ದೇಶಕ್ಕಾಗಿ ಡಾ.ಮಹದೇವಪ್ಪ, ಡಾ. ಜಿ.ಪರಮೇಶ್ವರ, ಪ್ರಿಯಾಂಕ ಖರ್ಗೆ ರಾಜ್ಯದಲ್ಲಿ ಬಲಗೈ ಧ್ವನಿ ಸಮುದಾಯಕ್ಕೆ ಹೋರಾಟಕ್ಕೆ ಬಿಟ್ಟು, ತಮ್ಮ ರಾಜಕೀಯ ಹಿತಾಸಕ್ತಿಗಾಗಿ ವರದಿ ವಿರುದ್ಧ ಅಪಸ್ವರಕ್ಕೆ ಕಾರಣವಾಗಿದ್ದಾರೆ ಎಂದು ಆರೋಪಿಸಿದರು.ಸಭೆಯಲ್ಲಿ ಸಮಾಜದ ಮುಖಂಡರಾದ ನಿವೃತ್ತ ಪೊಲೀಸ್ ಅಧೀಕ್ಷಕ ರವಿನಾರಾಯಣ, ವಿವಿಧ ಪಕ್ಷ, ಸಂಘಟನೆಗಳ ಮುಖಂಡರಾದ ಬಿ.ಎಚ್. ವೀರಭದ್ರಪ್ಪ, ಆಲೂರು ನಿಂಗರಾಜ, ಹೆಗ್ಗೆರೆ ರಂಗಪ್ಪ, ಎಚ್.ಸಿ.ಗುಡ್ಡಪ್ಪ, ಬಿ.ದುಗ್ಗಪ್ಪ, ಎಚ್.ಸಿ.ಮಲ್ಲಪ್ಪ, ಸೋಮಲಾಪುರ ಹನುಮಂತಪ್ಪ, ಎಂ.ಹಾಲೇಶ, ಎಚ್.ಮಲ್ಲೇಶ, ಎಲ್.ಡಿ.ಗೋಣೆಪ್ಪ, ಎನ್.ನೀಲಗಿರಿಯಪ್ಪ, ಕೆ.ಎಸ್.ಗೋವಿಂದರಾಜ, ಬಿ.ಹನುಮಂತಪ್ಪ ಚಿಕ್ಕನಹಳ್ಳಿ, ನಿಂಗಪ್ಪ, ಜಿಗಳಿ ಹಾಲೇಶ, ಎಸ್.ಮಲ್ಲಿಕಾರ್ಜುನ, ಡಿ.ದುರ್ಗಪ್ಪ, ಕುಂದವಾಡ ಮಂಜುನಾಥ, ನಿರಂಜನ ಮೂರ್ತಿ, ರಾಘವೇಂದ್ರ ಕಡೆಮನಿ, ಬೇತೂರು ಮಂಜುನಾಥ ಇತರರು ಇದ್ದರು.
- - ---17ಕೆಡಿವಿಜಿ1, 2, 3.ಜೆಪಿಜಿ:ದಾವಣಗೆರೆ ಹಳೇ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಎಡಗೈ ಸಮುದಾಯಗಳ ಸಭೆಯಲ್ಲಿ ಮಾದಿಗ ಸಮಾಜದ ಮುಖಂಡರು ಮಾತನಾಡಿದರು.