2ಎ ಮೀಸಲು ಲಾಠಿ ಚಾರ್ಜ್ ತೀವ್ರ ಆಕ್ರೋಶ

KannadaprabhaNewsNetwork |  
Published : Dec 13, 2024, 12:50 AM IST
2ಎ ಮೀಸಲಾತಿಗಾಗಿ ಪಂಚಮಸಾಲಿ ಹೋರಾಟ. | Kannada Prabha

ಸಾರಾಂಶ

2ಎ ಮೀಸಲಾತಿಗಾಗಿ ಬೆಳಗಾವಿಯಲ್ಲಿ ಮಂಗಳವಾರ ನಡೆದ ಪಂಚಮಸಾಲಿ ಸಮಾಜದ ಹೋರಾಟಗಾರರ ಮೇಲೆ ನಡೆದ ಲಾಠಿ ಚಾರ್ಜ್‌ ಘಟನೆ ಖಂಡಿಸಿ ಗುರುವಾರ ರಾಜ್ಯಾದ್ಯಂತ ಲಿಂಗಾಯತ ಪಂಚಮಸಾಲಿ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

2ಎ ಮೀಸಲಾತಿಗಾಗಿ ಬೆಳಗಾವಿಯಲ್ಲಿ ಮಂಗಳವಾರ ನಡೆದ ಪಂಚಮಸಾಲಿ ಸಮಾಜದ ಹೋರಾಟಗಾರರ ಮೇಲೆ ನಡೆದ ಲಾಠಿ ಚಾರ್ಜ್‌ ಘಟನೆ ಖಂಡಿಸಿ ಗುರುವಾರ ರಾಜ್ಯಾದ್ಯಂತ ಲಿಂಗಾಯತ ಪಂಚಮಸಾಲಿ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕೆಲವಡೆ ರಸ್ತೆ ನಡೆಸಿದ್ದಾರೆ. ಟೈರ್‌ಗೆ ಬೆಂಕಿ ಹಚ್ಚಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಯವರು ಪಂಚಮಸಾಲಿ ಸಮುದಾಯ ಹಾಗೂ ಸ್ವಾಮೀಜಿ ಕ್ಷಮೆ ಕೇಳಬೇಕು. ಪ್ರತಿಭಟನಾಕಾರರ ಮೇಲೆ ಹಾಕಿದ ಕೇಸ್‌ ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಬೆ‍ಳಗಾವಿಯಲ್ಲಿ ಬಸವ ಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಟೋಲ್‌ ನಾಕಾ ಬಳಿ ಹೆದ್ದಾರಿ ಮೇಲೆ ಕುಳಿತು ಕೆಲಕಾಲ ರಸ್ತೆ ತಡೆ ನಡೆಸಲಾಯಿತು. ಇದರಿಂದ ಕೆಲ ಗಂಟೆ ರಸ್ತೆ ಸಂಚಾರ ವ್ಯತ್ಯಯ ಉಂಟಾಗಿತ್ತು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಸಂಚಾರ ಸುಗಮಗೊಳಿಸಿದರು. ಹಾಗೆಯೇ ಜಿಲ್ಲೆಯ ಬೈಲಹೊಂಗಲ, ಹುಕ್ಕೇರಿ, ಗೋಕಾಕ, ಸವದತ್ತಿಯಲ್ಲೂ ಪ್ರತಿಭಟನೆಗಳು ನಡೆದವು.

ವಿಜಯಪುರ ಜಿಲ್ಲೆಯ ಇಂಡಿ, ಮುದ್ದೇಬಿಹಾಳ, ದೇವರಹಿಪ್ಪರಗಿ, ತಾಳಿಕೋಟೆ, ಬ.ಬಾಗೇವಾಡಿ, ಬಾಗಲಕೋಟೆ ಹಾಗೂ ಜಿಲ್ಲೆಯ ಗುಳೇದಗುಡ್ಡ, ಲೋಕಾಪುರ, ಜಮಖಂಡಿ, ಮುಧೋಳ, ರಬಕವಿ-ಬನಹಟ್ಟಿ ಸೇರಿ ಹಲವೆಡೆ ಪ್ರತಿಭಟನೆ ನಡೆಸಲಾಗಿದೆ. ಬಾಗಲಕೋಟೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ನಿರಾಣಿ ಮಾತನಾಡಿ, ನಾನು ಕೈಗಾರಿಕಾ ಸಚಿವನಾಗಿದ್ದಾಗ 2ಎ ಮೀಸಲಾತಿ ಸಮಾಜಕ್ಕೆ ಒದಗಿಸಿಕೊಟ್ಟರೆ ಬೆಳಗಾವಿಯಿಂದ ಕುಂದಾ ತಂದು, ಬಂಗಾರದ ಕಿರೀಟ ಹಾಕುವುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿಕೆ ನೀಡಿದ್ದರು. ನೀವು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಒದಗಿಸಿಕೊಟ್ಟರೆ ನಾನು 1 ಕೇಜಿ ಬಂಗಾರ ನೀಡುವ ಜೊತೆಗೆ ಬೆಳಗಾವಿ ಜಿಲ್ಲೆಯಾದ್ಯಂತ ರಥದ ಮೇಲೆ ಮೆರವಣಿಗೆ ಮಾಡುತ್ತೇನೆಂದು ವಾಗ್ದಾನ ಮಾಡಿದರು.ಗದಗದ ಜನರಲ್‌ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ವೇಳೆ ಟೈರ್‌ಗೆ ಹಚ್ಚಿದ ಬೆಂಕಿ ಪಂಚಮಸಾಲಿ ಸಮಾಜದ ಯುವ ಮುಖಂಡ ಶಿವರಾಜಗೌಡ ಹಿರೇಮನಿ ಪಾಟೀಲ ಪ್ಯಾಂಟಿಗೆ ತಗುಲಿ ಸ್ವಲ್ಪ ಸಮಯ ಆತಂಕ ಉಂಟಾಗಿತ್ತು. ಸುತ್ತಮುತ್ತ ಇದ್ದ ಜನ ಅದನ್ನು ನಂದಿಸಿದರು. ಅವರ ಕೈ ಮತ್ತು ಕಾಲಿಗೆ ಸ್ವಲ್ಪ ಗಾಯವಾಗಿದೆ. ಜಿಲ್ಲೆಯ ಲಕ್ಷ್ಮೇಶ್ವರ, ರೋಣ, ಶಿರಹಟ್ಟಿ, ಮುಂಡರಗಿಯಲ್ಲೂ ಪ್ರತಿಭಟನೆಗಳು ನಡೆದವು. ಕೊಪ್ಪಳ, ಯಲಬುರ್ಗಾ, ಗಂಗಾವತಿ, ಕುಷ್ಟಗಿ, ಕನಕಗಿರಿಯಲ್ಲೂ ಪ್ರತಿಭಟನೆ ನಡೆಸಲಾಯಿತು.

ಧಾರವಾಡದಲ್ಲಿ ನಡೆದ ಹೋರಾಟದಲ್ಲಿ ಕೂಡಲಸಂಗಮದ ಪಂಚಮಸಾಲಿ ಮಠದ ಜಯ ಮೃತ್ಯುಂಜಯ ಸ್ವಾಮೀಜಿ ಪಾಲ್ಗೊಂಡಿದ್ದರು. ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರು, ಬ್ಯಾಡಗಿ, ಹಾನಗಲ್ಲ, ಹಿರೇಕೆರೂರು, ಶಿಗ್ಗಾಂವಿಯಲ್ಲಿ ಮತ್ತು ಬಳ್ಳಾರಿ, ವಿಜಯನಗರ, ಕಲಬುರಗಿ, ದಾವಣಗೆರೆಯಲ್ಲೂ ಲಿಂಗಾಯತ ಪಂಚಮಸಾಲಿ ಸಂಘಟನೆಗಳು ಪ್ರತಿಭಟನೆ ನಡೆಸಿದವು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...