ಎನ್.ಆರ್.ಪುರ, ಮುತ್ತಿನಕೊಪ್ಪ ಬಂದ್ । ಮೃತರ ಕುಟುಂಬಕ್ಕೆ 20 ಲಕ್ಷ ಪರಿಹಾರ । ಶಾಸಕ ಟಿ.ಡಿ.ರಾಜೇಗೌಡ, ಡಿಸಿ ಭನ್ವರ್ ಸಿಂಗ್ ಮೀನ ಬೇಟಿ.
ಬುಧವಾರ ಸಂಜೆ ಬಾಳೆ ಗ್ರಾಪಂ ಹೆನ್ನಂಗಿಯಲ್ಲಿ ರೈತ ಕೃಷ್ಣಮೂರ್ತಿ ಕಾಡಾನೆ ದಾಳಿಗೆ ಬಲಿಯಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಗುರುವಾರ ಎನ್.ಆರ್.ಪುರ- ಬಾಳೆಹೊನ್ನೂರು ರಾಜ್ಯ ಹೆದ್ದಾರಿ ರಸ್ತೆ ತಡೆದು ರೈತರು ಪ್ರತಿಭಟನೆ ನಡೆಸಿದರು.
ಕಾಡಾನೆ ದಾಳಿ ಸುದ್ದಿ ತಿಳಿಯುತ್ತಲೇ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ಗದ್ದೇಮನೆ ವಿಶ್ವನಾಥ ಹಾಗೂ ಪದಾಧಿ ಕಾರಿಗಳು, 200 ಕ್ಕೂ ರೈತರು, ಗ್ರಾಮಸ್ಥರು ಆಗಮಿಸಿ ಸರ್ಕಾರ, ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಮೃತ ದೇಹವಿದ್ದ ಆ್ಯಂಬುಲೆನ್ಸ್ ತಡೆದು ಮೂಡಬಾಗಿಲು ರಸ್ತೆ ಹಾಗೂ 8 ನೇ ಮೈಲಿಕಲ್ಲಿನ ರಸ್ತೆಯ ಸರ್ಕಲ್ ನಲ್ಲಿ ರಾತ್ರಿ 12 ಗಂಟೆವರೆಗೂ ರಸ್ತೆ ತಡೆ ನಡೆಸಿದರು.ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದಲೇ ರೈತರು ಕಾಡಾನೆಗೆ ಬಲಿಯಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಸ್ಥಳಕ್ಕೆ ಅರಣ್ಯ ಸಚಿವರು, ಜಿಲ್ಲಾಧಿಕಾರಿ, ಶಾಸಕರು, ಲೋಕಸಭಾ ಸದಸ್ಯರು ಬಂದು ರೈತರ ಸಮಸ್ಯೆ ಬಗೆಹರಿಸುವವರೆಗೂ ಮೃತ ದೇಹ ಮುಂದಕ್ಕೆ ಹೋಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ರಸ್ತೆ ತಡೆ ಮುಂದುವರಿಸಿದ್ದರು. ಸ್ಥಳಕ್ಕೆ ಶಾಸಕ ಟಿ.ಡಿ.ರಾಜೇಗೌಡ ಆಗಮಿಸಿ ರೈತರೊಂದಿಗೆ ಚರ್ಚೆ ನಡೆಸಿದಾಗ ಬೆಳಿಗ್ಗೆ 11 ಗಂಟೆವರೆಗೆ ಕಾಯುತ್ತೇವೆ. ಸ್ಥಳಕ್ಕೆ ಜಿಲ್ಲಾಧಿಕಾರಿ, ಶಾಸಕರು, ಲೋಕ ಸಭಾ ಸದಸ್ಯರು, ವನ್ಯಜೀವಿ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ನಮ್ಮ ಕೆಲವು ಬೇಡಿಕೆ ಈಡೇರಿಸಬೇಕು. ಬರದಿದ್ದರೆ ಗುರುವಾರ ರಸ್ತೆ ತಡೆ ಮುಂದುವರಿಸಲು ತೀರ್ಮಾನಿಸಿ ರಸ್ತೆ ತಡೆ ಹಿಂಪಡೆದರು. ನಂತರ ಮೃತ ದೇಹವನ್ನು ಹೆನ್ನಂಗಿ ಮೃತರ ಮನೆಗೆ ತೆಗೆದುಕೊಂಡು ಹೋಗಲಾಯಿತು.
ಗುರುವಾರ ರಾಜ್ಯ ಹೆದ್ದಾರಿ 8 ನೇ ಮೈಲಿಕಲ್ಲಿನ ಸರ್ಕಲ್ ನಲ್ಲಿ ಮತ್ತೆ ಸೇರಿದ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ 200 ಕ್ಕೂ ಹೆಚ್ಚು ರೈತರು 11.30ವರೆಗೂ ಕಾದರು. ಜಿಲ್ಲಾಧಿಕಾರಿ, ಶಾಸಕರು, ಅರಣ್ಯ ಇಲಾಖೆ ಅಧಿಕಾರಿಗಳು ಬಾರದ ಹಿನ್ನೆಲೆ ಮತ್ತೆ ರಸ್ತೆ ತಡೆ ಪ್ರಾರಂಭಿಸಿದರು.ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ಗದ್ದೇಮನೆ ವಿಶ್ವನಾಥ ಮಾತನಾಡಿ ಬೇಲೂರು ಭಾಗದಿಂದ 56 ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಬಿಡುವುದಾಗಿ ಸಚಿವ ಶಿವಲಿಂಗೇಗೌಡ ಹೇಳಿದ್ದಾರೆ. ಈ ಆದೇಶ ವಾಪಸ್ ಪಡೆಯಬೇಕು. ಕಾಡಾನೆಗಳು ನಾಡಿಗೆ ಬಾರದಂತೆ ರೇಲ್ವೆ ಬ್ಯಾರಿಕೇಡ್ ಹಾಕಬೇಕು. ಮೃತರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಿ, ರಸ್ತೆ ಬದಿಯ ಜಂಗಲ್ ಕ್ಲಿಯರ್ ಮಾಡಬೇಕು ಮುಂತಾದ ಬೇಡಿಕೆ ಇಟ್ಟರು. ಹಲವು ಸುತ್ತು ಮಾತುಕತೆ, ಪರಸ್ಪರ ವಾಗ್ವಾದ ನಡೆಯಿತು.
ಜಿಲ್ಲಾಧಿಕಾರಿ ಭೇಟಿ: ಮಧ್ಯಾಹ್ನ 2 ಗಂಟೆ ಸುಮಾರಿಗೆ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನ ಆಗಮಿಸಿ ರೈತರೊಂದಿಗೆ ಮಾತುಕತೆ ನಡೆಸಿದಾಗ ರೈತರು ವಿವಿಧ ಬೇಡಿಕೆ ಮುಂದಿಟ್ಟರು. ಹೆನ್ನಂಗಿಯಲ್ಲಿ ರೈತರನ್ನು ಸಾಯಿಸಿದ ಕಾಡಾನೆಯನ್ನು ಹಿಡಿಯಬೇಕು. ರೇಲ್ಪೆ ಬ್ಯಾರಿಕೇಡ್ ಹಾಕಲು ₹12.50 ಕೋಟಿ ಮಂಜೂರಾಗಿದ್ದರೂ ಅರಣ್ಯ ಇಲಾಖೆ ಒಪ್ಪಿಗೆ ಕೊಡುತ್ತಿಲ್ಲ. ಮೃತರ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕು. ನಮ್ಮ ಎಲ್ಲಾ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
--ಬಾಕ್ಸ್--
ಜಿಲ್ಲಾಧಿಕಾರಿ ಹಾಗೂ ಶಾಸಕ ರಾಜೇಗೌಡರು ಹೆನ್ನಂಗಿಯಲ್ಲಿನ ಮೃತರ ಮನೆಗೆ ತೆರಳಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿ ₹20 ಲಕ್ಷದ ಚೆಕ್ ವಿತರಿಸಿದರು.
ನರಸಿಂಹರಾಜಪುರ ಬಂದ್
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಕರೆಯಿಂದ ಎನ್.ಆರ್.ಪುರ ಪಟ್ಟಣದ, ಮುತ್ತಿನಕೊಪ್ಪ, ಶೆಟ್ಟಿಕೊಪ್ಪದಲ್ಲಿ ಬಹುತೇಕ ಅಂಗಡಿಗಳು ಬಂದ್ ಆಗಿದ್ದವು. ಕೆಲವು ಅಂಗಡಿ, ಹೋಟೆಲ್ ತೆರೆದಿದ್ದವು. ಬಸ್ಸುಗಳು, ಆಟೋಗಳು ಓಡಾಡಿದವು. ಸರ್ಕಾರಿ ಕಚೇರಿ, ಶಾಲಾ ಕಾಲೇಜು ತೆರೆದಿದ್ದವು.