ಕನ್ನಡಪ್ರಭ ವಾರ್ತೆ ಬೇಲೂರುಇತ್ತೀಚೆಗೆ ದೆಹಲಿಯಲ್ಲಿ ಉಗ್ರರು ಸಂಚು ನಡೆಸಿ ಬಾಂಬ್ ಸ್ಫೋಟಗೊಳಿಸುವ ಮೂಲಕ ವಿದ್ವಂಸಕ ಕೃತ್ಯ ನಡೆಸಿದ್ದನ್ನು ಖಂಡಿಸಿ ಅರೇಹಳ್ಳಿಯಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಈ ಹೇಯಕೃತ್ಯದಲ್ಲಿ ಸ್ವರ್ಗಸ್ಥರಾದವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ತಾಲೂಕಿನ ಅರೇಹಳ್ಳಿ ಹೋಬಳಿ ವ್ಯಾಪ್ತಿಯ ವಿವಿಧ ಹಿಂದೂಪರ ಸಂಘಟನೆಗಳ ವತಿಯಿಂದ ಪಟ್ಟಣದ ಬಸ್ ನಿಲ್ದಾಣದಿಂದ ಅಂಬೇಡ್ಕರ್ ವೃತ್ತದವರೆಗೆ ಮೇಣದಬತ್ತಿ ಹಿಡಿದು ಮೆರವಣಿಗೆ ನಡೆಯಿತು. ನಂತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಮಾತನಾಡಿ, ಭಯೋತ್ಪಾದಕ ಚಟುವಟಿಗಳನ್ನು ಬುಡಸಮೇತ ಕಿತ್ತೊಗೆಯುವುದು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದಿಟ್ಟ ನಿರ್ಧಾರವಾಗಿದೆ. ಅವರ ನಾಯಕತ್ವದಲ್ಲಿ ಬಹಳಷ್ಟು ದೇಶದ್ರೋಹಿ ಚಟುವಟಿಕೆಗಳಿಗೆ ಕಡಿವಾಣ ಹಾಕುತಿದ್ದಾರೆ. ಅದಕ್ಕಾಗಿ ಭಾರತೀಯರಾದ ನಾವೆಲ್ಲರೂ ಸಹ ಸಹಕರಿಸುವುದು ಅಗತ್ಯವಾಗಿದೆ. ನಮ್ಮ ಅರೇಹಳ್ಳಿ ಭಾಗದಲ್ಲಿಯೂ ಇತ್ತೀಚೆಗೆ ದಿನದಿಂದ ದಿನಕ್ಕೆ ವಲಸಿಗರ ಸಂಖ್ಯೆ ಜಾಸ್ತಿಯಾಗಿ ಅಕ್ರಮ ಚಟುವಟಿಕೆಗಳಲ್ಲಿ ಬಾಗಿಯಾಗುತ್ತಿದ್ದಾರೆಂಬ ಸಂಶಯವೂ ಮೇಲ್ನೋಟಕ್ಕೆ ಕಾಣುತ್ತಿದೆ ಎಂದರು. ಅಂತಹ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ಹಾಗೂ ಬಾಂಗ್ಲಾ ಅಥವಾ ಇನ್ನಿತರ ಪರದೇಶದ ಅಕ್ರಮ ವಲಸಿಗರು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಆಗಬಹುದಾದ ಹೆಚ್ಚಿನ ಅನಾಹುತಗಳನ್ನು ತಪ್ಪಿಸಲು ನಾವೆಲ್ಲರೂ ಪಣತೊಡಬೇಕಿದೆ. ಮೊದಲೆಲ್ಲಾ ಅವಿದ್ಯಾವಂತ ಅಥವಾ ನಿರುದ್ಯೋಗ ಯುವ ಸಮೂಹ ದೇಶದ್ರೋಹಿ ದುಷ್ಕೃತ್ಯಗಳನ್ನು ಎಸೆಗುತ್ತಾರೆ ಎಂಬುದು ನಮ್ಮೆಲ್ಲರ ತಿಳುವಳಿಕೆಯಾಗಿತ್ತು. ಆದರೆ ಇತ್ತೀಚೆಗೆ ನಡೆಯುತ್ತಿರುವ ಅಮಾನುಷ ದೇಶದ್ರೋಹಿ ಕೃತ್ಯಗಳನ್ನು ಗಮನಿಸಿದರೆ ಹೆಚ್ಚಿನದಾಗಿ ಉನ್ನತ ಮಟ್ಟದ ವ್ಯಾಸಂಗ ಪಡೆದ ವಿದ್ಯಾವಂತರು ಹಾಗು ಜ್ಞಾನವಂತ ಉದ್ಯೋಗಸ್ಥರೇ ಭಾಗಿಯಾಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.ಈ ವೇಳೆ ವಿವಿದ ಹಿಂದೂಪರ ಸಂಘಟನೆಗಳ ಮುಖಂಡರಾದ ವಾಟೆಹಳ್ಳಿ ಚಂದ್ರಣ್ಣ, ಸೋಮನಾಥ್, ಆಶೋಕ್, ಶಿವಾನಂದ್, ಮಂಜು ನಾಯಕ್, ಪ್ರಕಾಶ್, ಭರತ್, ಯೋಗೇಶ್, ಅವಿನ್, ಸಚ್ಚಿನ್ ರೈ, ಶಶಿಕುಮಾರ್ ಇನ್ನಿತರರು ಪಾಲ್ಗೊಂಡಿದ್ದರು