ಲೇಬರ್‌ ಕೋಡ್‌ ರದ್ದುಗೊಳಿಸಲು ಆಗ್ರಹ

KannadaprabhaNewsNetwork |  
Published : Feb 13, 2026, 02:15 AM IST
ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಪದಾಧಿಕಾರಿಗಳು ಧಾರವಾಡದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. | Kannada Prabha

ಸಾರಾಂಶ

ಕೇಂದ್ರ ಸರ್ಕಾರವು 29 ಕಾರ್ಮಿಕ ಕಾನೂನು ರದ್ದುಗೊಳಿಸಿ ನಾಲ್ಕು ಕಾರ್ಮಿಕ ಸಂಹಿತೆ ಜಾರಿ ಮಾಡಿರುವುದು ಕೇವಲ ಆರ್ಥಿಕ ದಾಳಿ ಮಾತ್ರವಲ್ಲದೆ ರಾಜಕೀಯ ದಾಳಿಯೂ ಆಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡ:

ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿಯ ವಿರುದ್ಧ ಹಾಗೂ ರಾಜ್ಯ ಸರ್ಕಾದ ರೈತ-ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಪದಾಧಿಕಾರಿಗಳು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬ್ಯಾಂಕ್-ವಿಮಾ ನೌಕರರು, ಆಶಾ-ಅಂಗನವಾಡಿ-ಬಿಸಿಯೂಟ ಸ್ಕೀಂ ಕಾರ್ಯಕರ್ತೆಯರು, ಪಂಚಾಯಿತಿ ನೌಕರರು, ಕಟ್ಟಡ ಕಾರ್ಮಿಕರು, ವಿವಿಧ ಇಲಾಖೆಗಳ ಗುತ್ತಿಗೆ ಕಾರ್ಮಿಕರು-ರೈತರು ಕಡಪಾ ಮೈದಾನದಿಂದ ಸುಭಾಸ ರಸ್ತೆ, ಕೆಸಿಸಿ ಬ್ಯಾಂಕ್ ವೃತ್ತ, ವಿವೇಕಾನಂದ ವೃತ್ತ, ಜ್ಯುಬಿಲಿ ವೃತ್ತದ ಮೂಲಕ ಮುಖಂಡರ ನಿಯೋಗವು ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿತು.

ಕೇಂದ್ರ ಸರ್ಕಾರವು 29 ಕಾರ್ಮಿಕ ಕಾನೂನು ರದ್ದುಗೊಳಿಸಿ ನಾಲ್ಕು ಕಾರ್ಮಿಕ ಸಂಹಿತೆ ಜಾರಿ ಮಾಡಿರುವುದು ಕೇವಲ ಆರ್ಥಿಕ ದಾಳಿ ಮಾತ್ರವಲ್ಲದೆ ರಾಜಕೀಯ ದಾಳಿಯೂ ಆಗಿದೆ. ಕನಿಷ್ಠ ವೇತನ ಖಾತ್ರಿಯ ಬದಲಿಗೆ ತಳಹಂತದ ₹ 178 ಕೂಲಿಯನ್ನು ಹೊಸದಾಗಿ ಪರಿಷ್ಕರಿಸಲಾಗಿದೆ. ಇನ್ನು ಯಾವುದೇ ವಲಯದ ವೇತನಗಳ ಹೆಚ್ಚಳಕ್ಕೆ ಆಧಾರವಿಲ್ಲದಂತೆ ಮಾಡಲಾಗಿದೆ. ಈಗಾಗಲೇ ಮಾಲೀಕರ ಹೆಚ್ಚುವರಿ ಮೌಲ್ಯ ಶೇ.23.39 ರಿಂದ ಶೇ.51.01ಕ್ಕೆ ಹೆಚ್ಚಳವಾಗಿದೆ. ಕಾರ್ಮಿಕರ ವೇತನದ ಪಾಲು ಶೇ.30.27 ರಿಂದ ಶೇ.15.97ಕ್ಕೆ ಇಳಿದಿದೆ. ಕಾರ್ಮಿಕರಿಂದ ಪ್ರಾಥಮಿಕವಾಗಿ ಸಂಘ ರಚಿಸಿಕೊಳ್ಳುವ ಹಕ್ಕುಗಳನ್ನು ನಿರ್ಬಂಧಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾರ್ಮಿಕರ ಹಕ್ಕೊತ್ತಾಯಗಳು ಈಡೇರದೆ ಇದ್ದಾಗ ಮಾಡುತ್ತಿದ್ದ ಮುಷ್ಕರಕ್ಕೆ ದಂಡ, ಜೈಲು, ಮತ್ತು ಅನಿರ್ದಿಷ್ಟ ವೇತನ ಕಡಿತ ಮಾಡಲಾಗುತ್ತದೆ. 300ಕ್ಕಿಂತ ಕಡಿಮೆ ಕಾರ್ಮಿಕರಿರುವ ಕಾರ್ಖಾನೆಗಳು ಯಾವುದೇ ಸಮಯದಲ್ಲಿ ಮುಚ್ಚಲು ಅವಕಾಶ ಕೊಡಲಾಗಿದೆ. ಇದರೊಂದಿಗೆ ವಿಬಿ-ಜಿ ರಾಮ್‌ ಜಿ ಮೂಲಕ ಕೆಲಸದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರವನ್ನು ದೂರಿದ ಪ್ರತಿಭಟನಾಕರರು, ಇನ್ನು, ನುಡಿದಂತೆ ನಡೆಯುತ್ತೀವೆ ಎಂದು ಹೇಳುವ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ತರುತ್ತಿರುವ ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ತಾನೂ ಮುಂದುವರಿಸುತ್ತಿದೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ಈ ನೀತಿಗಳನ್ನು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಸ್ಪಷ್ಟವಾಗಿ ಘೋಷಿಸಬೇಕೆಂದು ಪ್ರತಿಭಟನೆ ಮೂಲಕ ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿ ಮುಖಂಡರಾದ ಗಂಗಾಧರ ಬಡಿಗೇರ, ಬಿ.ಐ ಈಳಗೇರ, ಸ್ಟೆಫೆನ್ ಜಯಚಂದ್ರ, ಸಂದೀಪ ಮೇತ್ರಿ, ಉದಯ ಗದಗಕರ್, ಪೀರಸಾಬ್ ನದಾಫ್, ಯೋಗಪ್ಪ ಜೋತೆಪ್ಪನವರ, ರುದ್ರಕಾಂತ, ಸ್ವಪ್ನಾ ಸುಳ್ಳದ, ರತ್ನಾ ಶಿರೂರ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿಯವರಿಗೆ ಕಾಂಗ್ರೆಸ್ಸಿನ ಅಭಿವೃದ್ಧಿ ಕಾರ್ಯಗಳು ಕಾಣಿಸ್ತಿಲ್ಲ-ಸಂಜೀವಕುಮಾರ ನೀರಲಗಿ
ಕಂಪ್ಲಿ ಉತ್ಸವದಲ್ಲಿ ರಂಗಿನ ರಂಗೋಲಿ- ಮೆಹೆಂದಿ ಸಂಭ್ರಮ