ಇಂದು ಎಲ್‌ಆರ್‌ಎಸ್ ನಿವಾಸದ ಎದುರು ಪ್ರತಿಭಟನೆ: ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್

KannadaprabhaNewsNetwork |  
Published : Jan 30, 2026, 01:30 AM IST
೨೯ಕೆಎಂಎನ್‌ಡಿ-೨ಮಂಡ್ಯದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ಮಾತನಾಡಿದರು. | Kannada Prabha

ಸಾರಾಂಶ

ಪಕ್ಷೇತರರಾಗಿ ಎರಡು ಬಾರಿ ನಾಗಮಂಗಲ ಕ್ಷೇತ್ರದಿಂದ ಆಯ್ಕೆಯಾಗಿದ್ದ ಶಿವರಾಮೇಗೌಡರು ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡಿದ್ದರೆ ಒಳ್ಳೆಯ ರಾಜಕಾರಣಿಯಾಗಬಹುದಿತ್ತು. ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಹೋಗಿ ಅಲ್ಲಿಂದ ಮತ್ತೆ ಕಾಂಗ್ರೆಸ್ ಸೇರಿ ಸಂಸದರಾಗಿ, ಆನಂತರ ಬಿಜೆಪಿ ಸೇರಿ ಇದೀಗ ಮತ್ತೆ ಕಾಂಗ್ರೆಸ್ ಸೇರಿ ತಮ್ಮ ಹರಕಲು ಬಾಯಿಯನ್ನು ಮನಸೋಇಚ್ಛೆ ಬಿಟ್ಟಿದ್ದಾರೆ. ಇವರ ಅಶ್ಲೀಲ ಹೇಳಿಕೆಗಳು ಪ್ರಚೋಧನಾಕಾರಿಯಾಗಿದ್ದು ಶಿವರಾಮೇಗೌಡರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಅವರನ್ನು ಬಂಧಿಸಬೇಕು. ಶಿವರಾಮೇಗೌಡ ಕೂಡ ಅಂಬರೀಶ್ ಅಭಿಮಾನಿಗಳಲ್ಲಿ ಕ್ಷಮೆ ಕೋರುವಂತೆ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಇತ್ತೀಚೆಗೆ ವೈರಲ್ ಆಗಿರುವ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಆಡಿಯೋದಲ್ಲಿ ಮಾಜಿ ಸಚಿವ ಅಂಬರೀಶ್, ಮಾಜಿ ಸಂಸದ ಜಿ.ಮಾದೇಗೌಡರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಶುಕ್ರವಾರ (ಜ.೩೦) ಬೆಂಗಳೂರಿನ ಎಲ್.ಆರ್.ಶಿವರಾಮೇಗೌಡರ ಮನೆ ಎದುರು ಪ್ರತಿಭಟನೆ ನಡೆಸುವುದಾಗಿ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ತಿಳಿಸಿದರು.

ಶಿವರಾಮೇಗೌಡ ಅವರದ್ದು ಬಚ್ಚಲು ಬಾಯಿ. ಅವರಿಗೆ ಅಂಬರೀಶ್ ಮತ್ತು ಮಾದೇಗೌಡರ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಅವರ ಬಗ್ಗೆ ಲಘುವಾಗಿ ಮಾತನಾಡಿರುವುದು ಹಿರಿಯ ನಾಯಕರಿಗೆ ಮಾಡಿದ ಅವಮಾನವಷ್ಟೇ ಅಲ್ಲ, ಮಂಡ್ಯಕ್ಕೆ ಮಾಡಿದ ಅವಮಾನ ಕೂಡ. ಅದಕ್ಕಾಗಿ ಕೂಡಲೇ ಶಿವರಾಮೇಗೌಡ ಅವರು ಜಿಲ್ಲೆಯ ಜನರ ಕ್ಷಮೆಯಾಚಿಸುವಂತೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಎಲ್.ಆರ್.ಶಿವರಾಮೇಗೌಡರಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ಕೊಡಿಸಿದ್ದು ಅಂಬರೀಶ್. ಅದನ್ನೂ ಉಳಿಸಿಕೊಳ್ಳಲಿಲ್ಲ. ದುಡ್ಡಿನ ಅಹಂಕಾರದಿಂದ ಪದೇ ಪದೇ ನಾಲಿಗೆಯನ್ನು ಹರಿಯಬಿಡುತ್ತಿದ್ದಾರೆ. ಅವರ ಮಾತುಗಳೇ ಅವರ ರಾಜಕೀಯ ಏಳ್ಗೆಗೆ ಮುಳುವಾಗಿವೆ. ಬಹುಶಃ ಅದಿನ್ನೂ ಅವರಿಗೆ ಅರ್ಥವಾಗಿಲ್ಲ ಎಂದು ಮೂದಲಿಸಿದರು.

ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಅಂಬರೀಶ್ ಕಾಲು ಹಿಡಿದು ಮೈತ್ರಿ ಪಕ್ಷದ ಅಭ್ಯರ್ಥಿಯಾದರು. ಅಂಬರೀಶ್ ಅವರು ಜಿಲ್ಲಾದ್ಯಂತ ಸುತ್ತಿ ಶಿವರಾಮೇಗೌಡರ ಪರ ಪ್ರಚಾರ ಮಾಡಿದರು. ದಾಖಲೆಯ ಅಂತರದಿಂದ ಗೆಲುವನ್ನೂ ಸಾಧಿಸಿದರು. ಆದರೂ ಕೃತಜ್ಞತೆ ಇಲ್ಲದೆ ಅಂಬರೀಶ್ ವಿರುದ್ಧ ಮಾತನಾಡಿದ್ದಾರೆ. ಅಷ್ಟೊಂದು ಜನಪ್ರಿಯತೆ ಇರುವವರು ನಾಗಮಂಗಲದಲ್ಲಿ ಪತ್ನಿಯನ್ನು ಅಖಾಡಕ್ಕಿಳಿಸಿ ೭ ಸಾವಿರ ಮತಗಳನ್ನು ಪಡೆದು ಸೋತಿದ್ದೇಕೆ ಎಂದು ಪ್ರಶ್ನಿಸಿದರು.

ಪ್ರಚೋಧನಕಾರಿ ಭಾಷಣ ಮಾಡಿದವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿರುವ ಕಾಂಗ್ರೆಸ್ಸಿಗರು ಇದುವರೆಗೂ ಶಿವರಾಮೇಗೌಡರಿಗೆ ಒಂದು ನೋಟೀಸ್ ಕೊಟ್ಟಿಲ್ಲ. ಕಾಂಗ್ರೆಸ್ ನಾಯಕರನ್ನೇ ನಿಂದಿಸಿದ್ದರೂ ಕ್ರಮ ಕೈಗೊಳ್ಳಲಾಗದಷ್ಟು ಪಕ್ಷ ದುರ್ಬಲವಾಗಿರುವಂತೆ ಕಂಡುಬರುತ್ತಿದೆ ಎಂದು ನುಡಿದರು.

ಪಕ್ಷೇತರರಾಗಿ ಎರಡು ಬಾರಿ ನಾಗಮಂಗಲ ಕ್ಷೇತ್ರದಿಂದ ಆಯ್ಕೆಯಾಗಿದ್ದ ಶಿವರಾಮೇಗೌಡರು ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡಿದ್ದರೆ ಒಳ್ಳೆಯ ರಾಜಕಾರಣಿಯಾಗಬಹುದಿತ್ತು. ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಹೋಗಿ ಅಲ್ಲಿಂದ ಮತ್ತೆ ಕಾಂಗ್ರೆಸ್ ಸೇರಿ ಸಂಸದರಾಗಿ, ಆನಂತರ ಬಿಜೆಪಿ ಸೇರಿ ಇದೀಗ ಮತ್ತೆ ಕಾಂಗ್ರೆಸ್ ಸೇರಿ ತಮ್ಮ ಹರಕಲು ಬಾಯಿಯನ್ನು ಮನಸೋಇಚ್ಛೆ ಬಿಟ್ಟಿದ್ದಾರೆ. ಇವರ ಅಶ್ಲೀಲ ಹೇಳಿಕೆಗಳು ಪ್ರಚೋಧನಾಕಾರಿಯಾಗಿದ್ದು ಶಿವರಾಮೇಗೌಡರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಅವರನ್ನು ಬಂಧಿಸಬೇಕು. ಶಿವರಾಮೇಗೌಡ ಕೂಡ ಅಂಬರೀಶ್ ಅಭಿಮಾನಿಗಳಲ್ಲಿ ಕ್ಷಮೆ ಕೋರುವಂತೆ ಆಗ್ರಹಿಸಿದರು.

ಗೋಷ್ಠಿಯಲ್ಲಿ ಪುಟ್ಟೇಗೌಡ, ನಾಗಣ್ಣ, ಶಶಿಕುಮಾರ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನಿತ ಪಿಯು ಕಾಲೇಜು ನಿವೃತ್ತರ ಗಳಿಕೆ ರಜೆಗೆ 30 ಕೋಟಿ ರು.
ಮೇಲ್ಮನೆಗೆ ಪತ್ರಕರ್ತರ ಕರೆತರಲು ಎಂಎಲ್‌ಸಿ ಆಫರ್‌!