ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ಸಮಿತಿ ನಡೆಸುತ್ತಿರುವ ಕಾರ್ಖಾನೆಯ ವಿರುದ್ಧದ ಧರಣಿ ಸತ್ಯಾಗ್ರಹ 200 ದಿನ ಪೂರೈಕೆಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಕೊಪ್ಪಳ ನಗರದ ಪ್ರಾದೇಶಿಕ ಪರಿಸರ ಕಚೇರಿಯ ಎದುರು ತಮಟೆ ಬಾರಿಸುತ್ತಾ, ವಿಶೇಷ ರೀತಿ ಪ್ರತಿಭಟನೆ ನಡೆಸಲಾಯಿತು.
ಕೊಪ್ಪಳ: ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ಸಮಿತಿ ನಡೆಸುತ್ತಿರುವ ಕಾರ್ಖಾನೆಯ ವಿರುದ್ಧದ ಧರಣಿ ಸತ್ಯಾಗ್ರಹ 200 ದಿನ ಪೂರೈಕೆಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಕೊಪ್ಪಳ ನಗರದ ಪ್ರಾದೇಶಿಕ ಪರಿಸರ ಕಚೇರಿಯ ಎದುರು ತಮಟೆ ಬಾರಿಸುತ್ತಾ, ವಿಶೇಷ ರೀತಿ ಪ್ರತಿಭಟನೆ ನಡೆಸಲಾಯಿತು.
ಕೊಪ್ಪಳ ಪರಿಸರ ಇಲಾಖೆ ಪ್ರಾದೇಶಿಕ ಅಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಹಿರೇಬಗನಾಳ, ಅಲ್ಲಾನಗರ ಸುತ್ತಲಿನ ಐದು ಕಾರ್ಖಾನೆಗಳ ಕ್ಲೋಸರ್ ಆರ್ಡರ್ ಇದುವರೆಗೆ ಜಾರಿಯಾಗಿಲ್ಲ. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಶಿಫಾರಸಿನಂತೆ ಇಲ್ಲಿರುವ ಮಾಲಿನ್ಯಕಾರಿ ಕಾರ್ಖಾನೆಗಳನ್ನು ಸ್ಥಳಾಂತರ ಮಾಡುವ ಕ್ರಮ ಆರಂಭವಾಗಿಲ್ಲ. ತುಂಗಭದ್ರಾ ಜಲಾಶಯ ವಿಷವಾಗುತ್ತಿರುವುದನ್ನು ತಡೆಯಲಾಗಿಲ್ಲ. ಎಐಐಎಂಸ್ ಮತ್ತು ಐಐಎಸ್‌ಸಿ ಸಂಸ್ಥೆಗಳಿಂದ ಆರೋಗ್ಯ ಮತ್ತು ಪರಿಸರ ಹಾನಿಯಾದ ಕುರಿತು ಸಮೀಕ್ಷೆ ಇದುವರೆಗೆ ಮಾಡಿಸುತ್ತಿಲ್ಲ. ಎರಡು ದಶಕದಿಂದಲೂ ಇಲ್ಲಿರುವ ಕಾರ್ಖಾನೆಗಳ ಮಾಲಿನ್ಯ ನಿಯಂತ್ರಣಕ್ಕೆ ಬಂದಿಲ್ಲ. ಕೇವಲ ಐದು ಕಿ.ಮೀ. ಸುತ್ತಳತೆಯಲ್ಲಿ 20ಕ್ಕೂ ಹೆಚ್ಚು ಬೃಹತ್ ಕಾರ್ಖಾನೆಗಳು ಕೇಂದ್ರೀಕೃತವಾದಾಗಲೂ ಇಲ್ಲಿನ ಧಾರಣ ಸಾಮರ್ಥ್ಯ ಮೀರಿದೆ ಎಂದು ವಾಸ್ತವಾಂಶದ ವರದಿ ಮಾಡಿಲ್ಲ. ಇಲ್ಲಿ ಒಂದೆರಡು ಚಿಮಣಿಯಿಂದ ಆರಂಭವಾಗಿ ಈಗ ನೂರರ ಸಂಖ್ಯೆಯಲ್ಲಿ ಚಿಮಣಿ ಎದ್ದು ನಿಂತರೂ ಕಾರ್ಖಾನೆ ಸ್ಥಾಪನೆ ಮಾಡಲು ಪರವಾನಗಿ ಕೊಡುವುದು ನಿಲ್ಲಿಸಿಲ್ಲ. ಹಾಲಿನಂತಿದ್ದ ಅಂತರ್ಜಲ ವಿಷಗೊಳಿಸಿದಾಗಲೂ ಪರಿಸರ ಇಲಾಖೆ ಮೌನವಹಿಸಿದ್ದು ಯಾಕೆಂದು ಜಂಟಿ ಕ್ರಿಯಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಕೊಪ್ಪಳ ತಾಲೂಕಿನ 28 ಬೃಹತ್ ಮಾಲಿನ್ಯಕಾರಿ ಕಾರ್ಖಾನೆಗಳು ಸಂಸ್ಕರಿಸದ ತ್ಯಾಜ್ಯ ನೀರನ್ನು ಹೊರಹಾಕುವುದು, ವಿಷಾನಿಲಯುಕ್ತ ಹೊಗೆಯನ್ನು ಹೊರಹಾಕುವುದು, ಕಪ್ಪು, ಕಂದು ಧೂಳು ಹೊರಹಾಕುವುದು, ಆಸಿಡ್, ರಸಾಯನ ಭೂಗರ್ಭಕ್ಕೆ ಇಳಿಸುವುದು ಮಾಮಾಲಿಯಾಗಿದೆ. ಇದರಿಂದ ಸುತ್ತಲಿನ 22 ಹಳ್ಳಿಗಳ ಕೃಷಿ ಭೂಮಿಗಳ ಬಳಿ ಸರಿಯಾದ ಬಫರ್ ವಲಯಗಳನ್ನು ಹೊಂದಿರದ ಕಾರಣ ಬೆಳೆ ಇಳುವರಿ, ಗುಣಮಟ್ಟ, ಭೂಫಲವತ್ತತೆ, ಅಂತರ್ಜಲ, ಗಂಭೀರ ಕಾಯಿಲೆಗಳಿಂದ ಜನರ ಆರೋಗ್ಯ ಹಾಳಾಗುತ್ತಿದೆ. ಕೃಷಿ ಬೆಳೆಗೆ ಅನಿವಾರ್ಯವಾಗಿ ಹಾನಿ ಮಾಡುವ ತ್ಯಾಜ್ಯನೀರು ಬಿಡುವುದರಿಂದ ಸಂಪೂರ್ಣ ಬೆಳೆ, ಪರಿಸರ (ಗಾಳಿ, ನೀರು ಅಥವಾ ಭೂಮಿ, ಅಂತರ್ಜಲ) ಮಾಲಿನ್ಯಗೊಳ್ಳುತ್ತಿದೆ. ತುಂಗಭದ್ರಾ ಜಲಾಶಯ ಸಂಪೂರ್ಣ ವಿಷವಾಗಿದೆ. ಇದರ ಮೇಲೆ ತಕ್ಷಣದ ಕ್ರಮ ಜರುಗಿಸದಿದ್ದರೆ ಬೆಂಗಳೂರು ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಗೊಂಡಬಾಳ, ಡಾ. ಮಂಜುನಾಥ ಸಜ್ಜನ್ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.