ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

KannadaprabhaNewsNetwork |  
Published : Jun 19, 2026, 02:30 AM IST
ಹೆಸ್ಕಾಂ ನೌಕರರು ಕಾರವಾರ ನಗರದ ಬಾಂಡಿಶಿಟ್ಟಾದಲ್ಲಿರುವ ಪ್ರಧಾನ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ವಿದ್ಯುತ್‌ ಖಾಸಗೀಕರಣ ವಿರೋಧಿಸಿ ಜೂ. 19ರಂದು ಹಳಿಯಾಳದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ವಿದ್ಯುತ್ ವ್ಯವಸ್ಥೆಯನ್ನು ಖಾಸಗೀಕರಣ ಮಾಡಿದರೆ ಕೃಷಿಕರ ಹಾಗೂ ಕೃಷಿ ಕ್ಷೇತ್ರದ ಸರ್ವನಾಶ ನಿಶ್ಚಿತ ಎಂದು ಕಬ್ಬು ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವೋಜಿ ಹೇಳಿದರು.

ಕಾರವಾರ: ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ವಿತರಣೆ ಪರವಾನಗಿ ಪಡೆಯಲು ಟಾಟಾ ಪವರ್ ಕಂಪನಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿರುವುದು ನೌಕರರು, ರೈತರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಅಪಾಯಕಾರಿ ಸಂಗತಿಯಾಗಿದ್ದು, ಟಾಟಾ ಕಂಪನಿಯ ಅರ್ಜಿಯನ್ನು ತಿರಸ್ಕರಿಸಬೇಕೆಂದು ಗುರುವಾರ ಹೆಸ್ಕಾಂ ನೌಕರರು ನಗರದ ಬಾಂಡಿಶಿಟ್ಟಾದಲ್ಲಿರುವ ಪ್ರಧಾನ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

ಹೆಸ್ಕಾಂ ನೌಕರರ ಸಂಘದ ರಾಜ್ಯ ಸಮಿತಿ ಸದಸ್ಯ ರಾಘು ನಾಯ್ಕ, ವಿದ್ಯುತ್ ಖಾಸಗೀಕರಣವಾದರೆ ನೌಕರರ ಉದ್ಯೋಗದಲ್ಲಿ ಅಭದ್ರತೆ ಉಂಟಾಗಲಿದೆ. ಸರ್ಕಾರದಿಂದ ಅನುಷ್ಠಾನಗೊಳ್ಳುತ್ತಿರುವ ವಿವಿಧ ಕಲ್ಯಾಣ ಯೋಜನೆಗಳು ಬಂದಾಗಲಿವೆ. ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಬಂದಾಗಲಿದೆ. ವಿದ್ಯುತ್ ಗ್ರಾಹಕರಿಗೆ ವಿದ್ಯುತ್ ದರ ಏರಿಕೆಯಿಂದ ಆರ್ಥಿಕ ಹೊರೆ ಹೆಚ್ಚಾಗಲಿದೆ ಎಂದು ಹೇಳಿದರು.

ಹೋರಾಟವನ್ನು ಬೆಂಬಲಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶಾಂತಾರಾಮ ನಾಯಕ ಮಾತನಾಡಿ, ಟಾಟಾ ಕಂಪನಿಯು ಉತ್ತರ ಕನ್ನಡ ಜಿಲ್ಲೆ ಸೇರಿ ರಾಜ್ಯದ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗೆ ಪರವಾನಗಿ ಕೋರಿದೆ. ಈ ಕಂಪನಿಯು ಯಾವುದೇ ವಿಶ್ವಾಸಾರ್ಹ ಅಂಶಗಳನ್ನು ಹೊಂದಿರದೆ ಇರುವುದರಿಂದ ಅವರ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.

ದೇಶದಲ್ಲೇ ಅತ್ಯಂತ ಹೆಚ್ಚು ಕೃಷಿ ಹವಾಮಾನ ವೈವಿಧ್ಯಕ್ಕೆ ಹೆಸರಾಗಿರುವ ಕರ್ನಾಟಕ ರಾಜ್ಯವು ಹಲವು ಪ್ರಮುಖ ಬೆಳೆಗಳನ್ನು ಬೆಳೆಯುತ್ತದೆ. 40 ಲಕ್ಷಕ್ಕೂ ಹೆಚ್ಚು ನೀರಾವರಿ ಪಂಪ್‌ಸೆಟ್ ಬಳಸುತ್ತಿದ್ದಾರೆ. ಖಾಸಗೀಕರಣದಿಂದ ನೇರ ನಗದು ವರ್ಗಾವಣೆ ಹಾಗೂ ಸ್ಮಾರ್ಟ್ ಮೀಟರ್ ಅಳವಡಿಕೆಯಂತಹ ರೈತ ವಿರೋಧಿ ಕ್ರಮಗಳಿಗೆ ತುತ್ತಾಗಿ, ಕೃಷಿ ಕ್ಷೇತ್ರ ಕುಂಠಿತವಾಗಿ ಆಹಾರ ಭದ್ರತೆಗೆ ತೊಂದರೆ ಉಂಟಾಗಬಹುದು. ನೌಕರರ ಉದ್ಯೋಗ ಭದ್ರತೆಗೆ ಕಂಟಕವಾಗಲಿದೆ ಎಂದು ಶಾಂತಾರಾಮ ನಾಯಕ ಹೇಳಿದರು.

ಕೇಂದ್ರ ಸಮಿತಿ ಸದಸ್ಯ ರಾಘವೇಂದ್ರ ನಾಯ್ಕ, ಕಾರ್ಯನಿರ್ವಾಹಕ ಎಂಜಿನಿಯರ್ ರೋಷನಿ ಪೆಡ್ನೇಕರ್, ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ ಗುನಗಿ, ಎಂಜಿನಿಯರ್ ಸಂಘದ ಪದಾಧಿಕಾರಿ ರಾಜು ಕಟ್ಟಿಮನಿ, ಕಾರವಾರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಶಾಂತ ನಾಯ್ಕ, ನೌಕರರ ಸಂಘದ ಅಧ್ಯಕ್ಷ ಶಿವಮಲ್ಲು, ಕಾರ್ಯದರ್ಶಿ ರವಿ ಚಾಪೋಲೀಕರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೋಣದಲ್ಲಿ ಶೇ. 40 ಜನರಿಗೆ ಬಯಲು ಶೌಚವೇ ಗತಿ!
ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಆಯೋಗ ಬದ್ಧ: ನಿಸಾರ್ ಅಹಮದ್