ಪಿ.ಎಸ್. ಪಾಟೀಲ

ರೋಣ: ಬಯಲು ಬಹಿರ್ದೆಸೆ ಮುಕ್ತವಾಗಿಸಲು ಸರ್ಕಾರ ಸ್ಥಳೀಯ ಸಂಸ್ಥೆಗಳಿಂದ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಲು ಸಹಾಯಧನ ನೀಡಿದೆ. ಇದರ ಹೊರತಾಗಿಯೂ ಪ್ರತಿ ವಾರ್ಡನಲ್ಲೂ ಮಹಿಳಾ ಸಮುದಾಯ ಶೌಚಾಲಯಗಳನ್ನು ಕಟ್ಟಿಸಲಾಗಿದೆ. ಆದರೆ ಅವುಗಳ್ಯಾವು ಉಪಯೋಗವಾಗುತ್ತಿಲ್ಲ. ಹೆಸರಿಗೆ ಮಾತ್ರ ಶೌಚಾಲಯಗಳು. ಹೀಗಾಗಿ ರೋಣ ಪಟ್ಟಣದಲ್ಲಿ ಶೇ. 40ರಷ್ಟು ಜನರಿಗೆ ಬಯಲು ಬಹಿರ್ದೆಸೆಯೇ ಗತಿಯಾಗಿದೆ.

ಬೆಳಗಾದರೆ ಸಾಕು, ಚೊಂಬು ಹಿಡಿದು ಬಯಲನ್ನೇ ಹುಡುಕುತ್ತಾ ಹೋಗುವ ದೃಶ್ಯ ನಿತ್ಯ ಸಾಮಾನ್ಯವಾಗಿ ಕಂಡುಬರುತ್ತಿದೆ. ಮುಜುಗರ ಎನಿಸಿದರೂ ಇಲ್ಲಿನ ಜನರಿಗೆ ಅನಿವಾರ್ಯವಾಗಿದೆ. ತಿಪ್ಪೆಗುಂಡಿ, ಜಾಲಿ ಕಂಟೆ, ಗಟಾರ ಆಶ್ರಯಿಸುತ್ತಿರುವುದರಿಂದ ಹಂದಿ, ನಾಯಿ, ಹಾವು, ಚೇಳು ಕಾಟ ಎದುರಿಸುತ್ತಿದ್ದಾರೆ.

ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ, 16ನೇ ವಾರ್ಡನ ಸಿದ್ಧಾರೂಢ ಮಠದ ಹಿಂದೆ, 10ನೇ ವಾರ್ಡನ ಹಲಗಿಯವರ ಓಣಿಯಲ್ಲಿ ಮಹಿಳೆಯರಿಗಾಗಿ ನಿರ್ಮಿಸಲಾದ ಸಮುದಾಯ ಶೌಚಾಲಯಗಳು ನೀರು ಮತ್ತು ವಿದ್ಯುತ್ ಪೂರೈಕೆ ವ್ಯತ್ಯಯ ಹಾಗೂ ನಿರ್ವಹಣೆ ಕೊರತೆಯಿಂದ ಬೀಗ ಹಾಕಿವೆ. ಇದರಿಂದ ಈ ಭಾಗದ ಮಹಿಳೆಯರು ನಿತ್ಯ ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

ಸಮುದಾಯ ಶೌಚಾಲಯಕ್ಕೆ ನೀರು, ವಿದ್ಯುತ್ ಕಲ್ಪಿಸುವಂತೆ ಸ್ಥಳೀಯ ಪುರಸಭೆಗೆ ಸಾಕಷ್ಟು ಬಾರಿ ಮಹಿಳೆಯರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಸಮುದಾಯ ಶೌಚಾಲಯಗಳಿಗೆ ನೀರು, ವಿದ್ಯುತ್ ವ್ಯವಸ್ಥೆ ಕಲ್ಪಿಸಿ ಉಪಯೋಗವಾಗುವಂತೆ ಪುರಸಭೆ ಅಧಿಕಾರಿಗಳು ಮುಂದಾಗಬೇಕು ಎಂದು ಪಟ್ಟಣದ ಲಲಿತಾ ಹಿರೇಮಠ, ಪ್ರೇಮಾ ಕಲೆಗಾರ, ದೇವಕ್ಕ ತಳವಾರ ಸೇರಿದಂತೆ ಅನೇಕ ಮಹಿಳೆಯರ ಆಗ್ರಹವಾಗಿದೆ.


ಪಟ್ಟಣದಲ್ಲಿ 6ರಿಂದ 11ನೇ ವಾರ್ಡಗಳ ಪೈಕಿ 10ನೇ ವಾರ್ಡನಲ್ಲಿ 1 ಶೌಚಾಲಯ, 11ನೇ ವಾರ್ಡನಲ್ಲಿ 3 ಶೌಚಾಲಯ ನಿರ್ಮಿಸಲಾಗಿದೆ. ಆದರೆ ನೀರಿನ ಸಮಸ್ಯೆಯಿಂದ ಬಳಕೆ ನಿರುಪಯುಕ್ತವಾಗಿವೆ. ಇದರಿಂದ ಮಹಿಳೆಯರು ನಿತ್ಯ ಚೊಂಬು ಹಿಡಿದು ಗಟಾರ, ಜಾಲಿ ಕಂಟೆ, ತಿಪ್ಪೆಗುಂಡಿ, ಪಾಳು ಬಿದ್ದ ಮನೆಗಳು, ಊರಾಚೆಗಿನ ಹೊಲಗಳನ್ನೆ ಆಶ್ರಯಿಸುತ್ತಿದ್ದಾರೆ.

10ನೇ ವಾರ್ಡನ ಹಲಗಿಯವರ ಓಣಿಯಲ್ಲಿ 6, 7,8, 9 ಮತ್ತು 10 ನೇ ವಾರ್ಡಗಳ ಕಂಬಿಯವರ ಓಣಿ, ಬಸವೇಶ್ವರ ನಗರ, ಸಂತೋಜಿಯವರ ಓಣಿ, ಜಿಡ್ಡಿಬಾಗಿಲ ಓಣಿ, ಧರ್ಮಾಯತರ ಓಣಿ, ಹಕಾರಿಯವರ ಓಣಿ, ಜನತ ಪ್ಲಾಟ್, ರೋಣಮ್ಮದೇವಿ ದೇವಸ್ಥಾನ ಬಡಾವಣೆ ನಿವಾಸಿಗಳು, ಹಲಗಿಯರ ಓಣಿ, ಆಶ್ರಯ ಕಾಲನಿಯಲ್ಲಿ ಶೌಚಾಲಯಗಳನ್ನು ಮಹಿಳೆಯರ ಅನುಕೂಲಕ್ಕೆ ನಿರ್ಮಿಸಲಾಗಿದೆ‌. ಆದರೆ ಸಮರ್ಪಕ ನೀರು, ವಿದ್ಯುತ್ ಕೊರತೆಯಿಂದ ನಿರುಪಯುಕ್ತವಾಗಿದೆ. ಇನ್ನು 7 ಮತ್ತು 8 ನೇ ವಾರ್ಡನ ಮಹಿಳೆಯರಿಗೆ 10 ಮತ್ತು 11ನೇ ವಾರ್ಡನಲ್ಲಿರುವ ಶೌಚಾಲಯ ದೂರವಾಗುವುದರಿಂದ ಮಹಿಳೆಯರು ಜಾಲಿಕಂಟೆ, ಬಯಲನ್ನೆ ಅವಲಂಬಿಸಿದ್ದಾರೆ. ಇಲ್ಲಿನ‌ ಬಹುತೇಕ ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಜಾಗ ಸಮಸ್ಯೆಯಿದ್ದು, ಸಮುದಾಯ ಶೌಚಾಲಯ ಅಥವಾ ಬಯಲೆ ಅನಿವಾರ್ಯವಾಗಿದೆ.

ಪಟ್ಟಣದ ಶ್ರೀನಗರ, ಕಲ್ಯಾಣನಗರ, ಶಿವಾನಂದ ನಗರ, ಶಿವಪೇಟಿ, ಜಗ್ಗಲರ ಓಣಿ, ಗಾಂಧಿನಗರ, ಸಾಯಿನಗರ, ಲಕ್ಷ್ಮೀ ನಗರಗಳಲ್ಲಿ ಸಮುದಾಯ ಶೌಚಾಲಯ ಇಲ್ಲದ್ದರಿಂದ ಮಹಿಳೆಯರಿಗೆ ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

ಅಗತ್ಯ ಕ್ರಮ: ಸಂತೆ ಮಾರುಕಟ್ಟೆ, ಸಿದ್ಧಾರೂಢ ಮಠದ ಹಿಂದೆ ಇರುವ ಮಹಿಳಾ ಸಮುದಾಯ ಶೌಚಾಲಯಗಳಿಗ ನೀರು, ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಮಹಿಳಾ ಶೌಚಾಲಯಕ್ಕೆ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಲಾಗುವುದು. ಮನೆಗೊಂದು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಜನ ಮುಂದೆ ಬರಬೇಕು. ಶೌಚಾಲಯ ನಿರ್ಮಾಣಕ್ಕೆ ₹35 ಸಾವಿರ ಸಹಾಯಧನ ನೀಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ರಮೇಶ ಹೊಸಮನಿ ತಿಳಿಸಿದರು.