ನರಗುಂದ: ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿರುವ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಮನ್ಸೂರ್ ಅಲಿ ಹೊಸಪೇಟ ಖಾಜಿ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಸೋಮವಾರ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಎಬಿವಿಪಿ ತಾಲೂಕು ಸಹ ಸಂಚಾಲಕ ಮಲ್ಲನಗೌಡ ಹಿರೇಗೌಡ್ರ ಮಾತನಾಡಿ, ವಿದ್ಯಾರ್ಥಿಗಳಿಗೆ ಅಶ್ಲೀಲ ಪದ ಬಳಸುವುದು, ಸಮಯಪ್ರಜ್ಞೆ ಇಲ್ಲದೇ ಕಾಲೇಜಿಗೆ ಬರುವುದು, ಪ್ರಶ್ನೆ ಮಾಡಿದ ಪ್ರಾಂಶುಪಾಲರಿಗೆ ಅಸಹ್ಯ ರೀತಿಯಲ್ಲಿ ಮಾತನಾಡುತ್ತಾ ಅವರ ಘನತೆ, ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ.
ಅವರು ಹೇಳುವ ಪಾಠ ಯಾರಿಗೂ ಅರ್ಥವಾಗಲ್ಲ. ಇಂಥದ್ದರಲ್ಲಿ ಕಾಲೇಜಿಗೆ ಚಕ್ಕರ್ ಹೊಡೆಯುವುದು ಅವರ ಖಯ್ಯಾಲಿಯಾಗಿದೆ. ವಿದ್ಯಾರ್ಥಿನಿಯರೊಂದಿಗೆ ಅವರ ವರ್ತನೆ ಸರಿಯಿಲ್ಲ. ವಿದ್ಯಾರ್ಥಿನಿಯರು ಕಾಲೇಜಿಗೆ ಬರಲು ಭಯಪಡುತ್ತಿದ್ದಾರೆ. ಮನ್ಸೂರ್ ಅಲಿ ಖಾಜಿ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ನಗರ ಕಾರ್ಯದರ್ಶಿ ಅಭಿಷೇಕ ನವಲಗುಂದ ಮಾತನಾಡಿ, ಪಾಠ ಹೇಳದ ಉಪನ್ಯಾಸಕನನ್ನು ವಿದ್ಯಾರ್ಥಿನಿಯರು ಪ್ರಶ್ನೆ ಮಾಡಿದರೆ, ಹಣೆಗೆ ಹಚ್ಚುವ ಕುಂಕುಮ, ಹೂವು, ಬಳೆ, ಕಾಲ್ಗೆಜ್ಜೆ ಇವುಗಳ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡುತ್ತಾರೆ. ಈ ಬಗ್ಗೆ ಕಳೆದ ಆ. 11ರಂದು ಶಾಸಕ ಸಿ. ಸಿ. ಪಾಟೀಲ ಅವರ ಮನೆಗೆ ತೆರಳಿದ ನೂರಾರು ವಿದ್ಯಾರ್ಥಿಗಳು ಉಪನ್ಯಾಸಕನ ವಿರುದ್ಧ ಆರೋಪ ಮಾಡುತ್ತಾ ಶೀಘ್ರ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಆದರೆ 20 ದಿನ ಗತಿಸಿದರೂ ಉಪನ್ಯಾಸಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ರೊಚ್ಚಿಗೆದ್ದ ವಿದ್ಯಾರ್ಥಿಗಳು ಮತ್ತೆ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ. ವಿದ್ಯಾರ್ಥಿಗಳ ಶಕ್ತಿ ಪರೀಕ್ಷೆ ಮಾಡಬೇಡಿ. ತಾಳ್ಮೆ ಕಳೆದುಕೊಳ್ಳುವ ಮೊದಲೇ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಉಪನ್ಯಾಸಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದರು.