ವಿವಾದಿತ ಸ್ಥಳವಾಗಿರುವ ಕನಕಗಿರಿ ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಸಮಾಧಿಗೆ ಭಾನುವಾರ ರಾತ್ರೋರಾತ್ರಿ ಅಪರಿಚಿತರು ಕಮಾನಿನಾಕಾರದ ಬೃಹತ್ ಮಂಟಪವನ್ನಿರಿಸಿ ಪೂಜೆ ಸಲ್ಲಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಕನಕಗಿರಿ: ವಿವಾದಿತ ಸ್ಥಳವಾಗಿರುವ ಇಲ್ಲಿನ ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಸಮಾಧಿಗೆ ಭಾನುವಾರ ರಾತ್ರೋರಾತ್ರಿ ಅಪರಿಚಿತರು ಕಮಾನಿನಾಕಾರದ ಬೃಹತ್ ಮಂಟಪವನ್ನಿರಿಸಿ ಪೂಜೆ ಸಲ್ಲಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಮುಸ್ಲಿಂ ಸಮುದಾಯದವರು ಈ ಸಮಾಧಿಯನ್ನು ದರ್ಗಾ ಎಂದು ಹೇಳುತ್ತಿದ್ದರು. ಆದರೆ, ಈ ಸಮಾಧಿಯು ಶಿವಾಜಿ ಸಹೋದರ ಸಾಂಭಾಜಿಯದ್ದು ಎಂದು ಮರಾಠಿಗರು ಹಾಗೂ ಹಿಂದೂಪರ ಸಂಘಟನೆಯವರ ವಾದವಾಗಿದೆ.ಶಿವಾಜಿ ಜಯಂತಿಯಂದು ಈ ಸಮಾಧಿಗೆ ಮರಾಠಿ ಸಮುದಾಯದವರು ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಆದರೆ, ಈ ನಡುವೆ ಸಮಾಧಿ ನಮ್ಮ ಪೂರ್ವಜರದ್ದು, ಇದು ದರ್ಗಾವಾಗಲಿ, ಸಾಂಭಾಜಿ ಸಮಾಧಿಯಾಗಲಿ ಅಲ್ಲ. ನೈಜತೆ ತಿಳಿಯಲು ಪುರಾತತ್ವ ಇಲಾಖೆ ಸಂಶೋಧನೆಗೆ ಮುಂದಾಗಬೇಕು ಎಂದು ಬೆಂಗಳೂರಿನಲ್ಲಿ ನೆಲೆಸಿರುವ ಜಮೀನಿನ ವಾರಸುದಾರರ ಒಂದು ಕುಟುಂಬ ತಹಸೀಲ್ದಾರರಿಗೆ ಈ ಹಿಂದೆ ಮನವಿ ಸಲ್ಲಿಸಿತ್ತು. ಅದಾದ ಬಳಿಕ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬಂದಾಗಲೂ ಸಮಾಧಿ ವೀಕ್ಷಣೆಗೂ ಅವಕಾಶ ನೀಡಿರಲಿಲ್ಲ. ಇದೀಗ ಭಾನುವಾರ ತಡರಾತ್ರಿ ಅಪರಿಚಿತರು ಏಕಾಏಕಿ ೬ ಕಂಬದ ಕಮಾನಿನಾಕಾರದ ಬೃಹತ್ ಮಂಟಪ ತಂದಿರಿಸಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಮಂಟಪದಲ್ಲಿ ಶ್ರೀ ಸ್ವಾಮಿ ಓಂ ಮಲ್ಹಾರಿ ಎಂದು ಹಿಂದಿಯಲ್ಲಿ ಬರೆಯಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು, ಪಪಂ ಅಧಿಕಾರಿಗಳು ಮಂಟಪ ತೆರವುಗೊಳಿಸಿ ವಶ ಪಡೆದಿದ್ದಾರೆ.
ಸರ್ವೇ ನಂ. ೭/೨ರಲ್ಲಿನ ನನ್ನ ಜಮೀನಿನಲ್ಲಿನ ಸಂಭಾಜಿಯದ್ದು ಎನ್ನಲಾಗಿರುವ ಸಮಾಧಿಗೆ ರಾತ್ರೋರಾತ್ರಿ ಮಂಟಪವಿಟ್ಟು ಪೂಜೆ ಸಲ್ಲಿಸಿದ್ದಾರೆ. ಇದು ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನವಾಗಿದೆ. ಕಿಡಿಗೇಡಿಗಳ ವಿರುದ್ದ ಕ್ರಮವಾಗಬೇಕು ಎಂದು ಸ್ಥಳೀಯ ಠಾಣೆಯಲ್ಲಿ ಸೋಮವಾರ ಜಾಗದ ಮಾಲೀಕರು ಪ್ರಕರಣ ದಾಖಲಿಸಿದ್ದಾರೆ.ಡಿವೈಎಸ್‌ಪಿ ಜೆ.ಎಸ್. ನ್ಯಾಮಗೌಡರ ಸ್ಥಳಕ್ಕೆ ಧಾವಿಸಿ ಪಟ್ಟಣವು ಸೂಕ್ಷ್ಮ ಪ್ರದೇಶವಾಗುತ್ತಿದ್ದು, ಸಿಸಿ ಕ್ಯಾಮೆರಾಗಳಿಲ್ಲದ ಕಡೆಗಳಲ್ಲಿ ಹೊಸದಾಗಿ ಅಳವಡಿಸಲು ಪಪಂ ಮುಖ್ಯಾಧಿಕಾರಿ ಕೆ. ರಾಜಶೇಖರ್ ಅವರಿಗೆ ಕೋರಿದರು. ಅಲ್ಲದೇ, ಮಂಟಪ ಅಳವಡಿಸಿದವರ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು. ವಿವಾದಿತ ಸ್ಥಳಗಳ ಶಾಶ್ವತ ಪರಿಹಾರ ಒದಗಿಸುವುದಾಗಿ ತಿಳಿಸಿದರು.
ಪಿಐ ವೀರಣ್ಣ ಹಳ್ಳಿ, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹ ಸಂಚಾಲಕ ಅಯ್ಯನಗೌಡ ಅಳ್ಳಳ್ಳಿ, ಕಾರ್ಯಕರ್ತರಾದ ಹನುಮೇಶ ಡಿಶ್, ಸಂಪತ್ ಕುಮಾರ, ಮರಾಠ ಸಮಾಜದ ಹನುಮೇಶ ಗಾಯಕವಾಡ್, ಶರಣಪ್ಪ ಮಹಿಪತಿ, ಕುಮಾರ ದುಮ್ಮಾಳ್ ಇದ್ದರು.