ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ಸುಸಜ್ಜಿತ ಕಟ್ಟಡ ನಿರ್ಮಿಸಲು ಶೀಘ್ರ ಅನುಮೋದನೆ ನೀಡಲಾಗುವುದು.
ತಂಝೀಂನಿಂದ ಯು.ಟಿ. ಖಾದರ್, ಉಪಸಭಾಧ್ಯಕ್ಷ ಮಂಕಾಳ ವೈದ್ಯರಿಗೆ ಗೌರವ
ಕನ್ನಡಪ್ರಭ ವಾರ್ತೆ ಭಟ್ಕಳ
ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ಸುಸಜ್ಜಿತ ಕಟ್ಟಡ ನಿರ್ಮಿಸಲು ಶೀಘ್ರ ಅನುಮೋದನೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.ಇಲ್ಲಿನ ಮಜ್ಲಿಸೆ ಇಸ್ಲಾಹ ವ ತಂಝೀಂ ಸಂಸ್ಥೆಯಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದೊಡ್ಡ ಕಟ್ಟಡ, ಸೇತುವೆ ನಿರ್ಮಾಣವಷ್ಟೇ ಸಮಾಜದ ಅಭಿವೃದ್ಧಿಯಲ್ಲ. ಬದಲಾಗಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ದಲಿತ ಸಮುದಾಯಗಳ ಮಕ್ಕಳು ಜಾತಿ-ಮತಭೇದ ಮರೆತು ಪರಸ್ಪರ ಕೈಕೈ ಹಿಡಿದು ಸೌಹಾರ್ದತೆಯಿಂದ ಜೀವಿಸುವ ವಾತಾವರಣ ಸೃಷ್ಟಿಸುವುದೇ ನಿಜವಾದ ಅಭಿವೃದ್ಧಿಯಾಗಿದೆ ಎಂದರು.ಬೆಂಗಳೂರಿನ ಹಜ್ ಭವನದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಇಸ್ಲಾಮಿಕ್ ಮ್ಯೂಸಿಯಂ ಸ್ಥಾಪಿಸಲಾಗುವುದು. ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಚರಿತ್ರೆ ಹಾಗೂ ಮಾನವೀಯ ಸಂದೇಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಾದರಿ ಪ್ರದರ್ಶನಗಳನ್ನು ಇಲ್ಲಿ ಅಳವಡಿಸಲಾಗುವುದು. ಹಜ್ ಸಮಿತಿಯ ಮೂಲಕ ಕಡಿಮೆ ವೆಚ್ಚದಲ್ಲಿ ಸುರಕ್ಷಿತ ಉಮ್ರಾ ಯಾತ್ರೆ ಮತ್ತು ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣದ ಬಗ್ಗೆಯೂ ಅವರು ಭರವಸೆ ನೀಡಿದರು. ಸನ್ಮಾನ ಸ್ವೀಕರಿಸಿದ ಉಪ ಸಭಾಧ್ಯಕ್ಷ ಮಂಕಾಳ ವೈದ್ಯ ಮಾತನಾಡಿ, ಕ್ಷೇತ್ರದ ದೀರ್ಘಕಾಲದ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ₹32 ಕೋಟಿ ವೆಚ್ಚದ ಕಾಮಗಾರಿ ಮಂಜೂರಾಗಿದ್ದು, ಈಗಾಗಲೇ ಶೇ. 90ರಷ್ಟು ಕೆಲಸ ಮುಗಿದಿದೆ. ಮುಂದಿನ 2ರಿಂದ 3 ತಿಂಗಳಲ್ಲಿ ಇದು ಪೂರ್ಣಗೊಂಡು ಕ್ಷೇತ್ರದ ಜನತೆಗೆ ನಿರಂತರ ವಿದ್ಯುತ್ ಸಿಗಲಿದೆ. ಭಟ್ಕಳದ ಮುಂದಿನ 20 ವರ್ಷಗಳ ಜನಸಂಖ್ಯೆಯ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ₹37 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್ ಮತ್ತು ಅಂಜುಮನ್ ಗುಡ್ಡದ ಮೇಲೆ ಬೃಹತ್ ಟ್ಯಾಂಕ್ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಭಟ್ಕಳದ ಜನರ ಬಹುದಿನಗಳ ಬೇಡಿಕೆಯಾಗಿದ್ದ ನಗರಸಭೆ ರಚನೆಯಾಗಿದ್ದು, ಹೆಬಳೆ ಮತ್ತು ಜಾಲಿಯನ್ನು ಸೇರಿಸಿ ಪೂರ್ಣಪ್ರಮಾಣದ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ನಗರಸಭೆಯ ಸರ್ವಾಂಗೀಣ ಅಭಿವೃದ್ಧಿಗೆ ಸುಮಾರು ₹200 ಕೋಟಿಗಳ ಕ್ರಿಯಾ ಯೋಜನೆ ರೂಪಿಸಲಾಗಿದೆ. ಮಳೆಗಾಲದಲ್ಲಿ ಉಂಟಾಗುವ ಪ್ರವಾಹ ತಪ್ಪಿಸಲು ಸಣ್ಣ ನೀರಾವರಿ ಇಲಾಖೆಯಡಿ ₹10 ಕೋಟಿ ವೆಚ್ಚದಲ್ಲಿ ಸರಾಬಿ ಹೊಳೆಯ ಹೂಳೆತ್ತಲು ಟೆಂಡರು ಆಗಿದ್ದು, ಮಳೆ ಕಡಿಮೆಯಾದ ತಕ್ಷಣ ಕೆಲಸ ಆರಂಭವಾಗಲಿದೆ ಎಂದರು.ತಂಝೀಮ್ ಅಧ್ಯಕ್ಷ ಇನಾಯುಲ್ಲಾ ಶಾಬಂದ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೊಹ್ಮದ್ ಯನೂಸ್ ಕಾಜೀಯಾ ಪ್ರಾಸ್ತಾವಿಕ ಮಾತನಾಡಿದರು. ಇಮ್ರಾನ್ ಲಂಕಾ ನಿರೂಪಿಸಿದರು. ತಂಝೀಂ ಪ್ರಧಾನ ಕಾರ್ಯದರ್ಶಿ ಅಝೀಝುರ್ರೆಹಮಾನ ವಂದಿಸಿದರು.