ಹುಡುಗಿ ತನ್ನನ್ನು ಪ್ರೀತಿಸುತ್ತಿಲ್ಲ, ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿದ್ದಾಳೆ ಎನ್ನುವ ಕಾರಣಕ್ಕೆ ಶನಿವಾರ ರಾಯಚೂರು ತಾಲೂಕಿನ ದೇವದುರ್ಗದಲ್ಲಿ ಮೊಬೈಲ್‌ ಟವರ್‌ ಏರಿ ಹುಚ್ಚಾಟ ನಡೆಸಿದ್ದ ವ್ಯಕ್ತಿ ಸೋಮವಾರ ಗಂಗಾವತಿಯಲ್ಲೂ ಮೊಬೈಲ್‌ ಟವರ್‌ ಏರಿ ಹುಚ್ಚಾಟ ಮೆರೆದಿದ್ದಾನೆ.

ಗಂಗಾವತಿ: ಹುಡುಗಿ ತನ್ನನ್ನು ಪ್ರೀತಿಸುತ್ತಿಲ್ಲ, ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿದ್ದಾಳೆ ಎನ್ನುವ ಕಾರಣಕ್ಕೆ ಶನಿವಾರ ರಾಯಚೂರು ತಾಲೂಕಿನ ದೇವದುರ್ಗದಲ್ಲಿ ಮೊಬೈಲ್‌ ಟವರ್‌ ಏರಿ ಹುಚ್ಚಾಟ ನಡೆಸಿದ್ದ ವ್ಯಕ್ತಿ ಸೋಮವಾರ ಗಂಗಾವತಿಯಲ್ಲೂ ಮೊಬೈಲ್‌ ಟವರ್‌ ಏರಿ ಹುಚ್ಚಾಟ ಮೆರೆದಿದ್ದಾನೆ.

ಕೊನೆಗೆ ಐದು ಗಂಟೆ ಹರಸಾಹಸ ನಡೆಸಿ ಪೊಲೀಸರು ಆತನ ಪೋಷಕರು, ಇನ್ನಿತರರು ಆಗಮಿಸಿ ಮನವೊಲಿಸಿ ಟವರ್‌ನಿಂದ ಕೆಳಕ್ಕಿಳಿಸಿದ್ದಾರೆ.

ಘಟನೆ ವಿವರ: ಗಂಗಾವತಿ ತಾಲೂಕಿನ ಹಣವಾಳ ಗ್ರಾಮದ ರಾಜು ಎನ್ನುವ ಯುವಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ದೇವದುರ್ಗ ತಾಲೂಕಿನ ಯುವತಿ ಪರಿಚಯವಾಗಿ ಪ್ರೀತಿಸುತ್ತಿದ್ದ. ದೇವದುರ್ಗಕ್ಕೆ ನಾಗರಪಂಚಮಿ ಹಬ್ಬಕ್ಕೆ ಬಂದಿದ್ದ ಯುವತಿಗೆ ಮೊಬೈಲ್ ಕರೆ ಮಾಡಿದರೂ ಸ್ವೀಕರಿಸದ ಕಾರಣ ಎರಡು ದಿನಗಳ ಹಿಂದೆ ದೇವದುರ್ಗಕ್ಕೆ ತೆರಳಿ ಮೊಬೈಲ್‌ ಟವರ್ ಹತ್ತಿದ್ದ. ಕೆಳಗೆ ಇಳಿಸಲು ಪೊಲೀಸರು ಮತ್ತು ಅಗ್ನಿ ಶಾಮಕ ತಂಡದವರು ಹರಸಾಹಸ ಮಾಡಿದರು. ಕೊನೆಗೆ ಯುವತಿಯನ್ನು ಕರೆಸಿದಾಗ, ಯುವಕ ಕೆಳಗೆ ಇಳಿದಿದ್ದಾನೆ. ಆನಂತರ ಯುವತಿಯನ್ನು ತಮ್ಮ ಮನೆಗೆ ಕಳುಹಿಸಿಕೊಟ್ಟ ನಂತರ ರಾಜುನನ್ನು ಪೊಲೀಸರು ಹಣವಾಳ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದಾರೆ.

ಗಂಗಾವತಿಯಲ್ಲೂ ಹುಚ್ಚಾಟ: ರಾಜು ಸೋಮವಾರ ಮತ್ತೆ ಗಂಗಾವತಿ ನಗರದ ಎಪಿಎಂಸಿ ಚರ್ಚ್ ಹಿಂಭಾಗದ ಟವರ್ ಏರಿ ಆತ್ಮಹತ್ಯೆ ಬೆದರಿಕೆ ಹಾಕಿದ್ದಾನೆ. ಮಧ್ಯಾಹ್ನ 2 ಗಂಟೆಯಿಂದ ಟವರ್ ಏರಿ ಕುಳಿತಿದ್ದ ಆತನನ್ನು ಕೆಳಗೆ ಇಳಿಸಲು ಪೊಲೀಸರು ಹರಸಾಹಸ ಮಾಡಿದರು. ಕೊನೆಗೆ ಆತನ ಪಾಲಕರನ್ನು ಕರೆಸಿ, ಮನವಲಿಸಿದ ಮೇಲೆ ಸಂಜೆ 7ಕ್ಕೆ ಕೆಳಗೆ ಇಳಿದಿದ್ದಾನೆ.

ಯುವತಿಗೆ ಪ್ರೀತಿಸುವ ಇಚ್ಛೆ ಇಲ್ಲದಿದ್ದರೂ ರಾಜು ಪದೇ ಪದೇ ಫೊನ್ ಮಾಡಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಹೀಗಾಗಿ ಬೇಸತ್ತ ಯುವತಿ ಫೋನ್ ಸ್ವಿಚ್ಡ್ ಆಫ್‌ ಮಾಡಿದ್ದಳು. ಅದರಿಂದ ಬೇಸತ್ತು ಟವರ್ ಮೇಲೆ ನಿಂತು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾನೆ. ಪ್ರಸ್ತುತ ರಾಜು ನಗರ ಪೊಲೀಸರ ವಶದಲ್ಲಿದ್ದು, ವಿಚಾರಣೆ ಕೈಗೊಂಡಿದ್ದಾರೆ.