ಹರಪನಹಳ್ಳಿ: ತಾಲೂಕಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಪ್ರಕ್ರಿಯೆ ಆರಂಭಿಸಬೇಕು ಎಂದು ಆಗ್ರಹಿಸಿ ಇಲ್ಲಿಯ ಸರ್ಕಾರಿ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಹಳೆಬಸ್ ನಿಲ್ದಾಣದಿಂದ ಹೊರಟ ಪ್ರತಿಭಟನಾಕಾರರು ಹೊಸಪೇಟೆ ರಸ್ತೆ ಮೂಲಕ ತಾಲೂಕು ಆಡಳಿತ ಸೌಧಕ್ಕೆ ತೆರಳಿ ಬಹಿರಂಗ ಸಭೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ ಮಾತನಾಡಿ, ಈಗಾಗಲೇ ರಾಜ್ಯಾದಂತ ಸರ್ಕಾರಿ ನೌಕರರ ಸಂಘದ ಸಾರ್ವತ್ರಿಕ ಚುನಾವಣೆಗಳ ಪ್ರಕ್ರಿಯೆ ಆರಂಭಗೊಂಡಿದೆ. ಆದರೆ, ಹರಪನಹಳ್ಳಿಯಲ್ಲಿ ಮಾತ್ರ ಆರಂಭಗೊಂಡಿಲ್ಲ ಎಂದು ಹೇಳಿದರು.ಈ ಬಗ್ಗೆ ವಿಜಯನಗರ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಗೌಡ ಅವರನ್ನು ವಿಚಾರಿಸಲಾಗಿ ಸರ್ಕಾರಿ ನೌಕರರ ಸಂಘದ ಹರಪನಹಳ್ಳಿ ತಾಲೂಕು ಪ್ರಭಾರಿ ಅಧ್ಯಕ್ಷರು ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ. ರಾಜ್ಯ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಹರಪನಹಳ್ಳಿ ಹಾಗೂ ಹುಮನಾಬಾದ್ ತಾಲೂಕುಗಳಲ್ಲಿ ಮಾತ್ರ ತಾಂತ್ರಿಕ ಸಮಸ್ಯೆಯಿಂದ ಚುನಾವಣೆ ನಡೆಯುತ್ತಿಲ್ಲ, ಈ ಎರಡೂ ತಾಲೂಕುಗಳಿಗೆ ಹೊಸ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ ಎಂದರು.
ಈ ಕುರಿತು ಇಲ್ಲಿಯ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ. ಸರ್ಕಾರಿ ನೌಕರರ ಸಂಘಕ್ಕೆ ಪ್ರತಿ ವರ್ಷ ₹200 ಸದಸ್ಯತ್ವ ಶುಲ್ಕ ಪಾವತಿಸಲಾಗುತ್ತಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರಾದ ಹರಪನಹಳ್ಳಿ ತಾಲೂಕಿನ ಸರ್ಕಾರಿ ನೌಕರರಿಗೆ ಸಂವಿಧಾನಾತ್ಮಕವಾಗಿ ಚುನಾವಣೆ ಪ್ರಕ್ರಿಯೆ ಕೂಡಲೇ ಆರಂಭಿಸಬೇಕು. ಇಲ್ಲದಿದ್ದರೆ ವಿವಿಧ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷೆ ಜಿ. ಪದ್ಮಲತಾ ಮಾತನಾಡಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಕೆಲವೊಂದು ಚೇಲಾಗಳನ್ನು ಇಟ್ಟುಕೊಂಡು ಹರಪನಹಳ್ಳಿ ಸಂಘದ ಚುನಾವಣೆ ನಡೆಸುತ್ತಿಲ್ಲ. ಪ್ರಜಾಸತ್ತಾತ್ಮಕವಾಗಿ ಚುನಾವಣೆ ನಡೆಯಬೇಕು ಎಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಬಿ. ರಾಜಶೇಖರ ಮಾತನಾಡಿ, ಹರಪನಹಳ್ಳಿ ತಾಲೂಕಿನಲ್ಲಿ ಮತದಾರರ ಪಟ್ಟಿ ಪ್ರಕಟವಾಗಿಲ್ಲ, ಚುನಾವಣಾಧಿಕಾರಿ ಕಚೇರಿ ಆರಂಭವಾಗಿಲ್ಲ, ಪ್ರಜಾಪ್ರಭುತ್ವ ಕಗ್ಗೊಲೆ ಆಗುತ್ತಲಿದೆ. ವಾಮ ಮಾರ್ಗದಿಂದ ಕೆಲವರು ಸಂಘದ ಚುಕ್ಕಾಣಿ ಹಿಡಿಯಲು ಹೊರಟಿದ್ದಾರೆ. ಇದಕ್ಕೆಲ್ಲ ಸರ್ವಾಧಿಕಾರಿ ಧೋರಣೆಯುಳ್ಳ ರಾಜ್ಯಾಧ್ಯಕ್ಷರೇ ಕಾರಣ ಎಂದು ದೂರಿದರು.ಎನ್‌ಪಿಎಸ್ ತಾಲೂಕು ಅಧ್ಯಕ್ಷ ಗುಂಡಗತ್ತಿ ಅಂಜಿನಪ್ಪ, ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಮೆಹಬೂಬ್ ಬಡಗಿ ಮಾತನಾಡಿ, ಕೂಡಲೇ ಸರ್ಕಾರಿ ನೌಕರರ ಸಂಘದ ಚುನಾವಣಾ ಪ್ರಕ್ರಿಯೆಯನ್ನು ತಾಲೂಕಿನಲ್ಲಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಚಂದ್ರಮೌಳಿ, ಸರ್ಕಾರಿ ನೌಕರರ ಸಂಘದ ಮುಖಂಡ ವೆಂಕಟೇಶಬಾಗಲರ್, ಶಿಕ್ಷಕರ ಹಾಗೂ ಇತರ ನೌಕರರ ಸಂಘದ ಮುಖಂಡರಾದ ಎಸ್. ರಾಮಪ್ಪ, ಪದ್ಮರಾಜ, ಎಎಸ್‌ಎಂ ಗುರುಪ್ರಸಾದ್, ಮಾದಿಹಳ್ಳಿ ಮಂಜುನಾಥ, ಹರಿಯಮ್ಮನಹಳ್ಳಿ ಅಂಜಿನಪ್ಪ, ರವೀಂದ್ರ ಹಿರೇಮಠ, ರಮೇಶ, ಪಾಂಡುಬಡಿಗೇರ, ಸಿದ್ದಪ್ಪ ಹರೀಂದ್ರಾಳ, ಕೆ.ನಟರಾಜ, ಬಂದೋಳ ಸಿದ್ದಣ್ಣ. ಆನಂದ, ಮಡ್ಡಿ ನಾಗರಾಜ, ಎಂ.ಪ್ರಭು, ಮಹದೇವಮ್ಮ, ಅರ್ಜುನಮುನ್ನೀಸಾ, ರತ್ನಮ್ಮ, ಬಂದಮ್ಮ, ಕೊಟ್ರಮ್ಮ, ಶಾಂತಮ್ಮ, ಶೈಲಶ್ರೀ ಸೇರಿದಂತೆ ಅನೇಕರು ಹಾಜರಿದ್ದರು.