ಗ್ರಾಮಾಂತರ ಪ್ರದೇಶದಲ್ಲಿ ಮೆಸ್ಕಾಂ ದಬ್ಬಾಳಿಕೆ ಹೆಚ್ಚುತ್ತಿದೆ

KannadaprabhaNewsNetwork | Updated : Sep 21 2024, 01:48 AM IST

ಸಾರಾಂಶ

ಸಾಗರ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲವೆಂದು ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಮೆಸ್ಕಾಂ ನೀತಿ ಖಂಡಿಸಿ ರೈತರು ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಸಾಗರ

ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲವೆಂದು ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಮೆಸ್ಕಾಂ ನೀತಿ ಖಂಡಿಸಿ ರೈತ ಸಂಘದ (ಡಾ.ಎಚ್.ಗಣಪತಿಯಪ್ಪ ಸ್ಥಾಪಿತ) ವತಿಯಿಂದ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮೆಸ್ಕಾಂ ದಬ್ಬಾಳಿಕೆ ಹೆಚ್ಚಾಗುತ್ತಿದ್ದು ವಿದ್ಯುತ್ ಬಳಕೆ ಗ್ರಾಹಕರು ತೀವ್ರ ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ನಿರ್ಮಾಣವಾಗಿದೆ. ಮೆಸ್ಕಾಂ ಅಧಿಕಾರಿಗಳು ತಮ್ಮ ಸಿಬ್ಬಂದಿಗಳನ್ನು ಬಳಸಿಕೊಂಡು ವಿದ್ಯುತ್ ಬಿಲ್ ವಸೂಲಿ ನೆಪವೊಡ್ಡಿ ರೈತರಿಗೆ, ಸಣ್ಣಪುಟ್ಟ ವ್ಯಾಪಾರಿಗಳಿಗೆ, ಜನರ ಮನೆ ಅಂಗಡಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ತೊಂದರೆ ಕೊಡುತ್ತಿದ್ದಾರೆ. ಜನರು ಬಾಕಿ ಬಿಲ್ ಪಾವತಿ ಮಾಡಿದ್ದಾಗ್ಯೂ ಐದಾರು ದಿನ ಕಳೆದರೂ ಪುನರ್ ಸಂಪರ್ಕ ಕೊಡದೆ ಸತಾಯಿಸುತ್ತಿದ್ದಾರೆ ಎಂದು ದೂರಿದರು.

ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಉದ್ದಟತನದ ಉತ್ತರ ನೀಡುತ್ತಿದ್ದಾರೆ. ನಾವು ವಿದ್ಯುತ್‌ಗಾಗಿ ಸರ್ವಸ್ವವನ್ನೂ ಕಳೆದುಕೊಂಡು ಬೀದಿಗೆ ಬಂದಿದ್ದೇವೆ. ಮೆಸ್ಕಾಂ ಅಧಿಕಾರಿಗಳು ನೂರು ರೂಪಾಯಿ ಬಾಕಿ ಇದ್ದರೂ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದ್ದಾರೆ. ನಮ್ಮ ಜನಪ್ರತಿನಿಧಿಗಳಿಗೆ ಮೆಸ್ಕಾಂ ದೌರ್ಜನ್ಯ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು ನಮ್ಮ ತಾಲ್ಲೂಕಿಗೆ ದಿನದ ೨೪ಗಂಟೆ ವಿದ್ಯುತ್ ನೀಡಬೇಕು, ರೈತರು ಮತ್ತು ಗ್ರಾಮಾಂತರ ಪ್ರದೇಶಗಳ ರೈತರಿಗೆ, ಜನರಿಗೆ ಲೋಡ್‌ ಶೆಡ್ಡಿಂಗ್ ಇಲ್ಲದಂತೆ ಗುಣಮಟ್ಟದ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ಈ. ಕೆಳದಿ ಮಾತನಾಡಿ, ರಾಜ್ಯ ಸರ್ಕಾರ ಐದು ಗ್ಯಾರಂಟಿಗಾಗಿ ೫೬ಸಾವಿರ ರು. ಖರ್ಚು ಮಾಡುತ್ತಿದೆ. ಆದರೆ ರೈತರು ೧೦೦ ರೂ. ವಿದ್ಯುತ್ ಬಿಲ್ ಕಟ್ಟಲಿಲ್ಲ ಎಂದು ಏಕಾಏಕಿ ವಿದ್ಯುತ್ ಬಿಲ್ ಕಡಿತ ಮಾಡುತ್ತಿರುವುದು ಖಂಡನೀಯ. ಜನಪ್ರತಿನಿಧಿಗಳು, ಅಧಿಕಾರಿಗಳು ಗ್ಯಾರಂಟಿ ಗುಂಗಿನಲ್ಲಿದ್ದಾರೆಯೆ ಹೊರತು ಜನಸಾಮಾನ್ಯರು, ರೈತರ ಏಳಿಗೆಗೆ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ದೂರಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಡಾ.ರಾಮಚಂದ್ರಪ್ಪ ಮನೆಘಟ್ಟ ಮಾತನಾಡಿದರು. ಹೊಯ್ಸಳ ಗಣಪತಿಯಪ್ಪ, ಭದ್ರೇಶ್ ಬಾಳಗೋಡು, ಕುಮಾರ ಗೌಡ, ಕೃಷ್ಣಮೂರ್ತಿ, ಆಲಳ್ಳಿ ಚಂದ್ರು, ಗಣಪತಿ ತಾಳಗುಪ್ಪ, ಹೇಮಂತ್ ಹೆನಗೆರೆ, ಬಸವರಾಜ ಬಂಡಿ, ದೇವರಾಜ ಬೆಳಂದೂರು, ಶಿವಕುಮಾರ್ ಮೈಲಾರಿಕೊಪ್ಪ ಇನ್ನಿತರರು ಹಾಜರಿದ್ದರು.

Share this article