ನಟ ಕಮಲ್‌ ಹಾಸನ್ ಹೇಳಿಕೆ ಖಂಡಿಸಿ ಪ್ರತಿಕೃತಿ ದಹಿಸಿ ಪ್ರತಿಭಟನೆ

KannadaprabhaNewsNetwork |  
Published : Jun 02, 2025, 12:28 AM IST
1ಕೆಎಂಎನ್ ಡಿ24 | Kannada Prabha

ಸಾರಾಂಶ

ಕಮಲ್ ಹಾಸನ್ ರವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ಹಾಗೂ ತಮಿಳು ಜನರ ಮತಗಳ ಮೇಲೆ ಕಣ್ಣಿಟ್ಟು ತಮ್ಮ ಹೊಸ ಚಲನಚಿತ್ರ ಥಗ್ ಲೈಫ್ ಧ್ವನಿಸುರುಳಿ ಬಿಡುಗಡೆ ವೇ‍ಳೆ ಕನ್ನಡ ಭಾಷೆ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ್ದಾರೆ.

ಕನ್ನಡ ಪ್ರಭ ವಾರ್ತೆ ಮದ್ದೂರು

ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ ಎಂಬ ನಟ ಕಮಲಹಾಸನ್ ಹೇಳಿಕೆ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಭಾನುವಾರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ನೇತೃತ್ವದಲ್ಲಿ ರೈತ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ಕಾರ್ಯಕರ್ತರು ವೇದಿಕೆ ಕಚೇರಿ ಬಳಿ ತಮಿಳು ನಟ ಕಮಲ ಹಾಸನ್ ಪ್ರತಿಕೃತಿಯೊಂದಿಗೆ ಪ್ರವಾಸಿ ಮಂದಿರ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದ ವರೆಗೆ ಮೆರವಣಿಗೆ ನಡೆಸಿದರು. ನಂತರ ಬೆಂಗಳೂರು, ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಕೆಲಕಾಲ ಧರಣಿ ನಡೆಸಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು.

ನಟ ಕಮಲ ಹಾಸನ್ ವಿರುದ್ಧ ಘೋಷಣೆ ಕೂಗಿದ ಸಂಘಟನೆಗಳ ಕಾರ್ಯಕರ್ತರು ಕಮಲ್ ಪ್ರತಿಕೃತಿ ಗೆ ಬೆಂಕಿ ಹಚ್ಚಿ ದಹನ ಮಾಡಿದರು. ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.

ಕಮಲ್ ಹಾಸನ್ ರವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ಹಾಗೂ ತಮಿಳು ಜನರ ಮತಗಳ ಮೇಲೆ ಕಣ್ಣಿಟ್ಟು ತಮ್ಮ ಹೊಸ ಚಲನಚಿತ್ರ ಥಗ್ ಲೈಫ್ ಧ್ವನಿಸುರುಳಿ ಬಿಡುಗಡೆ ವೇ‍ಳೆ ಕನ್ನಡ ಭಾಷೆ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ್ದಾರೆ ಎಂದು ಉಮಾ ಶಂಕರ್ ಆರೋಪಿಸಿದರು.

ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಥಗ್ ಲೈಫ್ ಚಿತ್ರದ ಬಿಡುಗಡೆಗೆ ಅವಕಾಶ ನೀಡಬಾರದು. ಒಂದು ವೇಳೆ ಚಿತ್ರ ಬಿಡುಗಡೆ ಮಾಡಿದರೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಚಿತ್ರಮಂದಿರಗಳನ್ನು ಜಖಂಗೊಳಿಸಿ ಬೆಂಕಿ ಹಾಕಲಾಗುವುದು ಎಂದು ಎಚ್ಚರಿಸಿದರು.

ವೇದಿಕೆ ರಾಜ್ಯ ಯುವ ಘಟಕದ ಅಧ್ಯಕ್ಷ ಸಿಂಹ ಶ್ರೀನಿವಾಸ್ ಮಾತನಾಡಿ, ತಮ್ಮ ಕನ್ನಡ ವಿರೋಧಿ ಹೇಳಿಕೆ ಕುರಿತಂತೆ ಕ್ಷಮೆ ಕೇಳುವಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಕಮಲ್ ಹಾಸನ್ ಅವರಿಗೆ ಎಚ್ಚರಿಕೆ ನೀಡಿದ್ದರು ಸಹ ಕ್ಷಮೆ ಕೇಳದೆ ದುರಂಕಾರದ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ವೇದಿಕೆ ಪ್ರಧಾನ ಕಾರ್ಯದರ್ಶಿ ಉಮೇಶ, ರೈತ ಸಂಘದ ಸೋ.ಶಿ.ಪ್ರಕಾಶ್, ಕುದುರಗುಂಡಿ ನಾಗರಾಜು, ರಾಮಲಿಂಗಯ್ಯ, ತಮ್ಮಯ್ಯ, ತೂಬಿನಕೆರೆ ರಾಜು, ಮಹೇಂದ್ರ, ಯರಗನಹಳ್ಳಿ ಮಹಾಲಿಂಗ, ಸೆಲ್ವಿ ಮುರುಗೇಶ್, ಎಂ.ಬಸವರಾಜು ಶಶಿಕುಮಾರ್ , ಕೆ.ಟಿ.ಶಿವಕುಮಾರ್, ಚಿಕ್ಕಣ್ಣ, ಸುಜಾತ ಕೃಷ್ಣ, ಶಿವಲಿಂಗಯ್ಯ, ಆಲೂರು ಚೆನ್ನಪ್ಪ, ಕಸಾಪ ಅಧ್ಯಕ್ಷ ಕೆ.ಎಸ್. ಸುನಿಲ್ ಕುಮಾರ್, ಮಾಜಿ ಅಧ್ಯಕ್ಷ ಅಪೂರ್ವಚಂದ್ರ ಹಲವರು ಭಾಗವಹಿಸಿದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ