ಕನ್ನಡಪ್ರಭವಾರ್ತೆ ಪಾವಗಡ
ಯಾರಿಂದಾರೂ ಹಣ ವಸೂಲಾತಿ ಮಾಡಿದ್ದು ಸಾಬೀತುಪಡಿಸಿದರೆ ದಂಡಕಟ್ಟಿ ತಲೆತಗ್ಗಿಸುವೆ. ಇಲ್ಲವಾದರೆ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ತಾ.ಘಟಕದ ಅಧ್ಯಕ್ಷ ಪೂಜಾರಪ್ಪ ವಾಗ್ದಾಳಿ ನಡೆಸಿದರು.ಇತ್ತೀಚೆಗೆ ಜಿಲ್ಲಾ ರೈತ ಸಂಘದ ವತಿಯಿಂದ ತೆಂಗು ಬೆಳೆಗಾರರ ಸಮಸ್ಯೆ ಕುರಿತು ತುಮಕೂರಿನ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸಭೆಯೊಂದರಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ ಅವರು, ಅಧಿಕಾರಿಗಳಿಂದ ಹಣ ವಸೂಲಾತಿ ಹಾಗೂ ಹೊಸ ಮನೆಕಟ್ಟಿದ್ದಾರೆಂದು ಪಾವಗಡ ತಾಲೂಕು ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ವಿರುದ್ದ ಸಭೆಯಲ್ಲಿ ಅಪಾಧನೆ ಮಾಡಿದ್ದರು. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಆಕ್ರೋಶ ಭರಿತರಾದ ತಾಲೂಕು ರೈತ ಘಟಕದ ಮುಖಂಡರು ಶುಕ್ರವಾರ ಪಟ್ಟಣದ ರೋಟರಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶಂಕರಪ್ಪ ನಡೆ ಖಂಡಿಸಿದರು.ಈ ವೇಳೆ ಪೂಜಾರಪ್ಪ ಮಾತನಾಡಿ, ಅಮಾಯಕ ರೈತರ ಮೇಲೆ ಪೊಲೀಸ್ ದೌರ್ಜನ್ಯ ಹಾಗೂ ಬಡವರಿಗೆ ನ್ಯಾಯ ಕಲ್ಪಿಸುವ ಹಿನ್ನೆಲೆಯಲ್ಲಿ ಕಳೆದ 18 ವರ್ಷಗಳ ಹಿಂದೆ ಇಲ್ಲಿ ರೈತ ಸಂಘ ಕಟ್ಟಲಾಗಿತ್ತು. ಅಲ್ಲಿಂದ ಇಲ್ಲಿಯ ವರೆಗೆ ಆನೇಕ ಹೋರಾಟಗಳ ಮೂಲಕ ಅನ್ಯಾಕ್ಕೊಳಪಟ್ಟವರಿಗೆ ನ್ಯಾಯ ಕಲ್ಪಿಸಲಾಗಿದೆ. ನನ್ನ ಜಮೀನು ಮತ್ತು ತೋಟದಿಂದ ಆದಾಯವಿದ್ದು, ಸಂಸಾರ ಹಾಗೂ ಜನಪರವಾದ ಹೋರಾಟಕ್ಕೆ ವಿನಿಯೋಗಿಸುತ್ತಿದ್ದೇನೆ. ನನ್ನ ಜನಪರ ಹೋರಾಟಕ್ಕೆ ಸರ್ಕಾರದಿಂದ ಪ್ರಶಸ್ತಿ ಲಭಿಸಿವೆ. ಕಪ್ಪುಚುಕ್ಕೆಯಿಲ್ಲದೇ ನಡೆದು ಬಂದಿದ್ದೇನೆ. ಕಳೆದ ಒಂದು ವರ್ಷದಿಂದ ನನ್ನ ಸಂಪರ್ಕಕ್ಕೆ ಸಿಗದ ಶಂಕರಪ್ಪ ಅವರು ಇಲ್ಲಿನ ನನ್ನ ವಿರೋಧಿಗಳ ಜತೆ ಕೈಜೋಡಿಸಿ ಹೊಂದಾಣಿಕೆ ಮಾಡಿಕೊಂಡಿದ್ದು, ಈ ಬಗ್ಗೆ ನಮ್ಮ ಬಳಿ ಸಾಕ್ಷ್ಯಿಗಳಿವೆ. ಹೋರಾಟ ಸಹಿಸಿದೇ ನನ್ನ ವಿರುದ್ಧ ಪಿತೂರಿ ನಡೆಸುತ್ತಿರುವುದಾಗಿ ಆರೋಪಿಸಿದರು.ನಂಜುಂಡಸ್ವಾಮಿ ಹಾಗೂ ಪುಟ್ಟಣ್ಣಯ್ಯ ಕಟ್ಟಿದ್ದ ರೈತ ಸಂಘ ಇದು. ಇದಕ್ಕೆ ಸಿದ್ಧಾತಗಳಿವೆ. ಬಾಯಿಗೆ ಬಂದ ಹಾಗೆ ಮಾತನಾ ಡುವುದು ಬಿಡಿ. ನಾನು ಯಾರ ಬಳಿಯಾದರೂ ಹಣ ಪಡೆದಿದ್ದರೆ ಸಾಬೀತುಪಡಿಸಿ. ಇಲ್ಲದಿದ್ದರೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೊಡುವೆ. ನನ್ನ ಪರಿಸ್ಥಿತಿ ಬೇರೆ ಯಾವ ತಾಲೂಕು ರೈತ ಸಂಘದ ಪದಾಧಿಕಾರಿಗಳಿಗೆ ಬರಬಾರದು ಎಂದರು.ಹಿರಿಯ ರೈತ ಮುಖಂಡ ಈರಪ್ಪ ಮಾತನಾಡಿ, ಅಧ್ಯಕ್ಷ ಪೂಜಾರಪ್ಪ ಬಗ್ಗೆ ಶಂಕರಪ್ಪ ಅಪಾದನೆ ಖಂಡನೀಯ. ಆರೋಪ ಸಾಬೀತುಪಡಿಸಬೇಕು. ಸಾಬೀತಾದರೆ ನಾನು ಸಹ 1 ಲಕ್ಷ ದಂಡಕಟ್ಟುತ್ತೇನೆ ಎಂದರು.ಯುವ ಘಟಕದ ಬ್ಯಾಡನೂರು ಶಿವು ಮಾತನಾಡಿದರು. ರೈತ ಸಂಘದ ಖಚಾಂಚಿ ಹನುಮಂತರಾಯಪ್ಪ ಕೂಡಾ ಶಂಕರಪ್ಪ ವಿರುದ್ಧ ಕಿಡಿಕಾರಿದರು. ರೈತ ಸಂಘದ ಉಪಾಧ್ಯಕ್ಷ ಸಿದ್ದಪ್ಪ ಹಾಗೂ ಮುಖಂಡರಾದ ವೆಂಕಟಸ್ವಾಮಿ, ನರಸಪ್ಪ, ಕೃಷ್ಣಗಿರಿ ಚಿತ್ತಯ್ಯ ಗುಂಡ್ಲಹಳ್ಳಿ ರಾಮಾಂಜಿನಪ್ಪ, ರಮೇಶ್ ಸಿದ್ದಪ್ಪ ಉಪ್ಪಾರಹಳ್ಳಿ ರಾಮಾನಾಯ್ಕ್, ಗುಡಿಪಲ್ಲಪ್ಪ, ಹನುಮಂತರಾಯಪ್ಪ ಸೇರಿ ಇತರರಿದ್ದರು.