ಸ್ವಚ್ಛತಾ ಕಾರ್ಮಿಕರು, ಪೌರ ಕಾರ್ಮಿಕರ ಕುಂದು-ಕೊರತೆಗಳ ಸಭೆಕನ್ನಡಪ್ರಭ ವಾರ್ತೆ ಕಾರವಾರ
ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದಿಂದ ನ್ಯಾಯಯುತವಾಗಿ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸುವ ಜತೆಗೆ ಅವರ ಸೇವೆಗೆ ಗೌರವ ನೀಡುವಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಚಂದ್ರಕಲಾ ಹೇಳಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆ, ಗ್ರಾಪಂಗಳಲ್ಲಿ ಮತ್ತು ಇತರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರು, ಪೌರ ಕಾರ್ಮಿಕರ ಕುಂದು-ಕೊರತೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲ ಸಫಾಯಿ ಕರ್ಮಚಾರಿಗಳಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಮಿಕ ಇಲಾಖೆಯಿಂದ ನಿಗದಿಪಡಿಸಿರುವ ವೇತನ ನೀಡಬೇಕು, ಗುತ್ತಿಗೆದಾರರು ಇಎಸ್‌ಐ ಮತ್ತು ಪಿಎಫ್ ಕಡಿತ ಮಾಡಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು. ಕೆಲಸದ ಅವಧಿಯಲ್ಲಿ ಸೂಕ್ತ ಸುರಕ್ಷತಾ ಉಪಕರಣಗಳನ್ನು ನೀಡಬೇಕು. ಉತ್ತಮ ಗುಣಮಟ್ಟದಿಂದ ಕೂಡಿದ ಬೆಳಗಿನ ಉಪಾಹಾರ ನೀಡಬೇಕು. ಕೆಲಸದ ಆನಂತರ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಯ ಸೌಲಭ್ಯ ಒದಗಿಸಬೇಕು. ನಿಯಮಿತವಾಗಿ ಅವರ ಆರೋಗ್ಯ ತಪಾಸಣೆ ಮತ್ತು ಮಾಸ್ಟರ್ ಹೆಲ್ತ್ ಚೆಕಪ್ ಮಾಡಿಸಬೇಕು ಎಂದರು.ಗುತ್ತಿಗೆದಾರರಿಂದ ಸಫಾಯಿ ಕರ್ಮಚಾರಿಗಳಿಗೆ ಯಾವುದೇ ರೀತಿಯ ಶೋಷಣೆ ನಡೆಯದಂತೆ ಅಧಿಕಾರಿಗಳು ನಿಗಾ ವಹಿಸಬೇಕು. ವಾರದ ರಜೆ ಸೇರಿದಂತೆ ಅಗತ್ಯ ರಜೆಗಳನ್ನು ಅವರಿಗೆ ನೀಡಬೇಕು. ಇಂತಹ ರಜಾ ಅವಧಿಯಲ್ಲಿ ವೇತನ ಕಡಿತಗೊಳಿಸಬಾರದು. ಪ್ರತಿ ತಿಂಗಳು ಅವರಿಗೆ ವೇತನ ಚೀಟಿಯನ್ನು ವಿತರಿಸಬೇಕು ಎಂದರು.
ಆಯೋಗದ ಸಂಶೋಧನಾ ಅಧಿಕಾರಿ ಮಹಾದೇವ ಸ್ವಾಮಿ, ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಅತ್ಯುತ್ತಮ ಶೈಕ್ಷಣಿಕ ಸೌಲಭ್ಯ ಒದಗಿಸಬೇಕು. ಸಫಾಯಿ ಕರ್ಮಚಾರಿಗಳಿಗೆ ವೇತನ ಮತ್ತು ಇತರ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿರುವ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಬೇಕು ಎಂದರು.ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಪಂ ಉಪ ಕಾರ್ಯದರ್ಶಿ ಅಲ್ಲಾ ಭಕ್ಷ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್, ನಗರಸಭೆ ಪೌರಾಯುಕ್ತ ಜಗದೀಶ್ ಹುಲಿಗೆಜ್ಜಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಉಮೇಶ್ ಇದ್ದರು.