ನಾಮಧಾರಿ ಶಿಕ್ಷಕ ವರ್ಗ ನೌಕರರ ಬಳಗದಿಂದ ಅಭಿನಂದನಾ ಸಮಾರಂಭ
ಕನ್ನಡಪ್ರಭ ವಾರ್ತೆ ಯಲ್ಲಾಪುರವ್ಯಕ್ತಿಯ ಬೆಳವಣಿಗೆಗೆ ಸಮಾಜದ ಆಶ್ರಯ ಅವಶ್ಯಕ ಎಂದು ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಈಶ್ವರ ನಾಯ್ಕ ಹೇಳಿದರು.
ಪಟ್ಟಣದ ಅಡಿಕೆ ಭವನದಲ್ಲಿ ತಾಲೂಕಿನ ನಾಮಧಾರಿ ಶಿಕ್ಷಕ ವರ್ಗ ಮತ್ತು ನೌಕರರ ಬಳಗ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಾವು ಒಳಿತಿಗಾಗಿ ಮಾಡುವ ಕೆಲಸ ಹಾಗೂ ಧನ್ಯತೆಗಾಗಿ ಮಾಡುವ ಕೆಲಸ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಾವು ಯಾವುದನ್ನು ಆಯ್ಕೆ ಮಾಡುತ್ತೇವೆ ಎಂಬುದು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದರು.
ನಮ್ಮ ಸಮುದಾಯದ ಸಂಖ್ಯೆ ಬಹಳ ದೊಡ್ಡದಿದ್ದರೂ, ಪ್ರತಿಭೆಗಳು ಇದ್ದರೂ ಅದು ಕೊನೆಯ ಹಂತ ತಲುಪುವಲ್ಲಿ ವಿಫಲವಾಗುತ್ತಿದೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆಯು ಸದಾ ಉತ್ತಮ ಸ್ಥಾನದಲ್ಲಿರುತ್ತದೆ. ನನ್ನದೇ ವ್ಯಾಪ್ತಿಯ ಬೀದರ್, ಬಾಗಲಕೋಟೆ ಕೆಳಗಿನ ಸ್ಥಾನದಲ್ಲಿರುತ್ತದೆ. ಆದರೆ ಕೆ.ಎ.ಎಸ್. ಪರೀಕ್ಷೆಯಲ್ಲಿ ಮಾತ್ರ ಅಲ್ಲಿನವರು ಅಧಿಕ, ನಮ್ಮ ಜಿಲ್ಲೆಯ ಬೆರಳೆಣಿಕೆಯಷ್ಟು ಇರುತ್ತಾರೆ. ಸರ್ಕಾರಿ ಕೆಲಸಗಳನ್ನು ಪಡೆಯುವತ್ತ ನಮ್ಮ ಜಿಲ್ಲೆಯ ಯುವಜನತೆ ಕಡಿಮೆ ಆಸಕ್ತಿ ತೋರುತ್ತಿರುವುದು ವಿಷಾದನೀಯ. ಎಲ್ಲರೂ ಕೇವಲ ಡಾಕ್ಟರ್, ಎಂಜಿನಿಯರ್ ಆಗುವತ್ತ ಸಾಗುತ್ತಿದ್ದಾರೆ. ನಾನು ಸಮಾಜವನ್ನು ಬಿಟ್ಟು ಬದುಕುತ್ತೇನೆ ಎಂದರೆ ಮಾನವನ ಬದುಕು ಅಸಾಧ್ಯ. ಅಧಿಕಾರ ಇರುವುದು ದರ್ಪಕ್ಕಾಗಿ ಅಲ್ಲ. ಸೇವೆಗಾಗಿ ಎನ್ನುವುದನ್ನು ಅರಿತು ನಡೆಯಬೇಕು ಎಂದರು.ಶಾಲಾ ಶಿಕ್ಷಣ ಇಲಾಖೆ ಶಿರಸಿಯ ಉಪನಿರ್ದೇಶಕ ಡಿ.ಆರ್. ನಾಯ್ಕ ಮಾತನಾಡಿ, ಕಾಲ ತುಂಬ ಬದಲಾಗಿದೆ. ಶಿಕ್ಷಕರ ಪರಿಸ್ಥಿತಿ ಮೊದಲಿನಂತಿಲ್ಲ. ಉತ್ತಮ ಶಿಕ್ಷಣ ಮಾತ್ರ ಮಕ್ಕಳಿಗೆ ಜಗತ್ತಿನ ಯಾವುದೇ ಮೂಲೆಯಲ್ಲಿ, ಯಾವುದೇ ಪರಿಸ್ಥಿತಿಯಲ್ಲಿ ಬದುಕುವ ಸಾಮರ್ಥ್ಯ ನೀಡುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಮಾತನಾಡಿ, ಬಯಸದೆ ಬಂದ ಭಾಗ್ಯವಾಗಿ ನಾನು ಯಲ್ಲಾಪುರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಬಂದಿದ್ದೇನೆ. ಎಲ್ಲರ ಸಹಕಾರದಿಂದ ಉತ್ತಮ ಸೇವೆ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಶಾಸಕರ ಆಪ್ತ ಸಹಾಯಕ ಕಮಲಾಕರ ನಾಯ್ಕ ಸಾಂದರ್ಭಿಕವಾಗಿ ಮಾತನಾಡಿದರು.
ಇದೇ ಸಂದರ್ಭ ಈಶ್ವರ ನಾಯ್ಕ, ಡಿ.ಆರ್. ನಾಯ್ಕ, ರೇಖಾ ನಾಯ್ಕ ಹಾಗೂ ನರ್ಮದಾ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಪಪಂ ಸದಸ್ಯರಾದ ಸೋಮೇಶ್ವರ ನಾಯ್ಕ, ಸತೀಶ ನಾಯ್ಕ, ರಾಜು ನಾಯ್ಕ, ಕಲ್ಪನಾ ನಾಯ್ಕ, ನಾಮಧಾರಿ ಸಂಘದ ಅಧ್ಯಕ್ಷ ನರಸಿಂಹ ನಾಯ್ಕ, ನಂದೊಳ್ಳಿ ಪಂಚಾಯಿತಿ ಉಪಾಧ್ಯಕ್ಷೆ ನಾಗರತ್ನಾ ನಾಯ್ಕ, ವಿನಾಯಕ ನಾಯ್ಕ ಉಪಸ್ಥಿತರಿದ್ದರು.
ಯಮುನಾ ನಾಯ್ಕ ಪ್ರಾರ್ಥಿಸಿದರು. ಆರ್.ಐ. ನಾಯ್ಕ ಸ್ವಾಗತಿಸಿದರು. ಭಾಸ್ಕರ್ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಹಾಸ ನಾಯ್ಕ ಮತ್ತು ವಿಜಯಾ ನಾಯ್ಕ ನಿರ್ವಹಿಸಿದರು. ಅಮಿತಾ ನಾಯ್ಕ ಗುರುವಂದನೆ ಸಲ್ಲಿಸಿದರು. ಸಂತೋಷ್ ನಾಯ್ಕ ಪ್ರತಿಭಾ ಪುರಸ್ಕಾರ ನಿರ್ವಹಿಸಿದರು. ಮಾರುತಿ ನಾಯ್ಕ ವಂದಿಸಿದರು.