ಕುಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ: ಪ್ರಕಾಶ್‌

KannadaprabhaNewsNetwork | Published : Mar 15, 2025 1:04 AM

ಸಾರಾಂಶ

ಹನೂರಿನಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.

ಕನ್ನಡಪ್ರಭ ವಾರ್ತೆ ಹನೂರು ಮಲೆಮಾದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕುಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಲೆಮಹದೇಶ್ವರ ಬೆಟ್ಟಕ್ಕೆ ಬರುವ ಮುನ್ನ ಕಾಮಗಾರಿಗಳಿಗೆ ಚಾಲನೆ ನೀಡಬೇಕು. ತಾಲೂಕಿನ ಬಹುತೇಕ ಸಮಸ್ಯೆಗಳನ್ನು ಅಧಿಕಾರಿಗಳು ಪರಿಹರಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಲೆಮಾದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಕುಗ್ರಾಮಗಳಾದ ತುಳಸಿಕೆರೆ, ಇಂಡಿಗನತ್ತ, ಮೆಂದರೆ, ಮೇದಗನಣೆ, ನಾಗಮಲೆ, ಪಡಸಲನಾಥ ಸೇರಿದಂತೆ ವಿವಿಧ ಗ್ರಾಮಗಳಿಗೆ ಮೂಸೌಲಭ್ಯಗಳಾದ ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಮತ್ತು ರಸ್ತೆ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಅನುಮತಿ ನೀಡಿರುವುದಿಲ್ಲ ಎಂದು ಜನ ಸಾಮಾನ್ಯರಿಗೆ ಮತ್ತು ಆ ಭಾಗದ ಜನತೆಗೆ ಹೇಳುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾದೇಶ್ವರ ಬೆಟ್ಟಕ್ಕೆ ಬರುವ ಮುನ್ನ ಕುಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವ ನೆಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ದೇಸಿ ತಳಿ ಉಳಿಸಿ:

ಅಳಿವಿನಂಚಿನಲ್ಲಿರುವ ಜಾನುವಾರುಗಳಾದ ಹಳ್ಳಿಕಾರ್, ಆಲಂಬಡಿ, ಅಮೃತ್ ಮಾಲ್ ನಾಟಿ ತಳಿಯ ಜಾನುವಾರಗಳನ್ನು ಉಳಿಸಿ ಸಂರಕ್ಷಿಸಲು ತಾಲೂಕು ಕೇಂದ್ರದಲ್ಲಿ ತಳಿ ಸಂರಕ್ಷಣಾ ಕೇಂದ್ರ ಮತ್ತು ಹಾಲಿನ ಕೇಂದ್ರವನ್ನು ತೆರೆದು ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾರಂಗಕ್ಕೆ ತಡೆ ಒಡ್ಡುವುದು ಬೇಡ:

ತಾಲೂಕಿನಲ್ಲಿ ಪತ್ರಕರ್ತರು ಉತ್ತಮವಾಗಿ ಕೆಲಸ ನಿರ್ವಹಿಸುವ ಮೂಲಕ ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿರುವ ಮಾಧ್ಯಮದವರಿಗೆ ಜಿಲ್ಲಾಧಿಕಾರಿಗಳೇ ಭವನ ನಿರ್ಮಾಣ ಮಾಡಿಕೊಳ್ಳಲು ನಿವೇಶನ ಗುರುತಿಸಿ ನೀಡಿದ್ದಾರೆ. ಜನಪ್ರತಿನಿಧಿಗಳು ಸಹ ಅನುದಾನ ನೀಡಿ ಕಟ್ಟಡ ಸಹ ಪ್ರಾರಂಭವಾಗಿರುವುದು ಶ್ಲಾಘನೀಯ. ಆರ್‌ಟಿಐ ಕಾರ್ಯಕರ್ತ ಅಪ್ಪಾಜಿ ಪತ್ರಕರ್ತರ ಭವನ ನಿರ್ಮಾಣ ಮಾಡಿಕೊಳ್ಳಲು ತಡೆಗಟ್ಟುವುದು ಬೇಡ ಅವರು ಬೇಕಾದರೆ ಸಂಸ್ಥೆಯನ್ನು ನಿರ್ಮಾಣ ಮಾಡಿ ಅವರು ಪಡೆಯಲಿ ಪತ್ರಕರ್ತರಿಗೆ ಪ್ರತಿಯೊಬ್ಬರೂ ಸಹಕಾರ ನೀಡಿದರೆ ಸಮಾಜದಲ್ಲಿ ಉತ್ತಮ ಸನ್ಮಾರ್ಗದಲ್ಲಿ ನಡೆಯಲು ಅನುಕೂಲದಾಯಕವಾಗಲಿದೆ. ಹೀಗಾಗಿ ಭವನ ನಿರ್ಮಾಣಕ್ಕೆ ತಡೆಗಟ್ಟುವುದು ಬೇಡ ಎಂದು ಗೋಷ್ಠಿಯಲ್ಲಿ ಹೇಳಿದರು.

ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಿ:

ತಾಲೂಕಿನ ಬಹುತೇಕ ಗುಡ್ಡಗಾಡು ಪ್ರದೇಶವಿರುವದರಿಂದ ರೈತರಿಗೆ ಕಾಡುಪ್ರಾಣಿಗಳ ಹಾವಳಿಗೆ ಹೆಚ್ಚಾಗಿ ಬೆಳೆ ಹಾಳಾಗುತ್ತಿದೆ. ಜೊತೆಗೆ ಅರಣ್ಯ ಇಲಾಖೆ ವಿಭಾಗದ ಡಿಸಿಎಫ್ ಅರಣ್ಯ ಪ್ರದೇಶದ ಭಾಗಗಳನ್ನು ಕಾಡ್ಗಿಚ್ಚಿನಿಂದ ಸಂರಕ್ಷಿಸಲು ಅವರ ಹೊಣೆಯಾಗಿರುತ್ತದೆ. ಅರಣ್ಯ ಪ್ರದೇಶ ನಮ್ಮದು, ನಮ್ಮ ರೈತರಿಂದ ಅರಣ್ಯ ಪ್ರದೇಶ ಉಳಿವು ಇದೆ. ಹೀಗಾಗಿ ಜಾನುವಾರುಗಳನ್ನು ಮೇಯಲು ಅರಣ್ಯ ಇಲಾಖೆ ಬಿಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ತಾಲೂಕಿನ ಬಹುತೇಕ ಸರ್ಕಾರಿ ಕಚೇರಿಗಳಲ್ಲೂ ಜನಸಾಮಾನ್ಯರಿಗೆ ಕೆಲಸ ಕಾರ್ಯಗಳು ನಿಗದಿತ ಸಮಯದಲ್ಲಿ ಆಗುತ್ತಿಲ್ಲ. ಒಟ್ಟಾರೆ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿರುವ ತಾಲೂಕಿನಲ್ಲಿ ಜನಪ್ರತಿನಿಧಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸಿಎಂ ಮಾದೇಶ್ವರ ಬೆಟ್ಟಕ್ಕೆ ಬರುವ ಮುನ್ನ ತಾಲೂಕಿನ ಸಮಗ್ರ ಚಿತ್ರಣ ಸಮಸ್ಯೆಗಳನ್ನು ಗುರುತಿಸಬೇಕು ಎಂದರು.

ತಾಲೂಕು ಘಟಕದ ಅಧ್ಯಕ್ಷ ಕರಿಯಪ್ಪ ಮಾತನಾಡಿ, ತಾಲೂಕಿನ ಕೌದಳ್ಳಿ, ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಉಡುತೊರೆ ಜಲಾಶಯದಿಂದ ಬಿಡುತ್ತಿರುವ ನೀರು. ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದರು.

ರೈತ ಮುಖಂಡ ಮಾದಪ್ಪ ಮಾತನಾಡಿ, ಪಪಂ ವ್ಯಾಪ್ತಿಯ 13 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ ಮಾ.24 ರಿಂದ ಗ್ರಾಮದೇವತೆ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವ ಇರುವುದರಿಂದ ನೀರಿನ ಸಮಸ್ಯೆ ತಲೆ ದೂರದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಿ, ಬೀದಿ ದೀಪಗಳನ್ನು ಪ್ರತಿ ವಾರ್ಡ್‌ಗಳಲ್ಲಿ ಅಳವಡಿಸಬೇಕು. ತಹಸೀಲ್ದಾರ್‌ ಆವರಣದಲ್ಲಿರುವ ಶೌಚಾಲಯ ನಿರ್ಮಾಣ ಮಾಡಿ 2 ವರ್ಷಗಳು ಕಳೆದಿದೆ. ಇನ್ನು ಸಾರ್ವಜನಿಕರಿಗೆ ಬಳಸಿಕೊಳ್ಳಲು ಮುಕ್ತಾವಕಾಶ ನೀಡಿರುವುದಿಲ್ಲ. ಜಿಲ್ಲಾಡಳಿತ, ತಾಲೂಕು ಆಡಳಿತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.ಈ ವೇಳೆ ರೈತ ಮುಖಂಡರಾದ ಚೆನ್ನೂರು ಶಾಂತಕುಮಾರ್, ಎಂಟಿ ದೊಡ್ಡಿ ನಂದೀಶ್, ನಂಜೇಗೌಡನ ದೊಡ್ಡಿ ಶಶಿಧರ್, ಬೆಳ್ತೂರು ಶ್ರೀಧರ್, ಮಹದೇವ ಶೆಟ್ಟಿ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು.

Share this article