ವಸತಿ ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸಿ: ಶಾಸಕ ಶ್ರೀನಿವಾಸ ಮಾನೆ

KannadaprabhaNewsNetwork |  
Published : Jun 02, 2025, 12:55 AM IST
 ಫೋಟೊ: 1ಎಚ್‌ಎನ್‌ಎಲ್1ಎ | Kannada Prabha

ಸಾರಾಂಶ

ಮೆಟ್ರಿಕ್ ಪೂರ್ವ, ನಂತರದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ವಸತಿನಿಲಯಗಳಲ್ಲಿಯೂ ಮೂಲ ಸೌಲಭ್ಯಗಳು ಇರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು.

ಹಾನಗಲ್ಲ: ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ವಸತಿ ಶಾಲೆಗಳಿಗೆ ಅಗತ್ಯ ಮೂಲ ಸೌಲಭ್ಯ ದೊರಕಿಸುವ ಮೂಲಕ ಯಾವುದೇ ಲೋಪವಾಗದಂತೆ ಕ್ರಮ ಜರುಗಿಸಲು ಇಲಾಖೆಯ ಸಹಾಯಕ ನಿರ್ದೇಶಕಿ ಗಂಗಮ್ಮ ಹಿರೇಮಠ ಅವರಿಗೆ ಶಾಸಕ ಶ್ರೀನಿವಾಸ ಮಾನೆ ಸೂಚಿಸಿದ್ದಾರೆ.ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಮೆಟ್ರಿಕ್ ಪೂರ್ವ, ನಂತರದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ವಸತಿನಿಲಯಗಳಲ್ಲಿಯೂ ಮೂಲ ಸೌಲಭ್ಯಗಳು ಇರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ತಾಲೂಕಿನ ವಿವಿಧ ಭವನಗಳಲ್ಲಿ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದ್ದು, ಕಾಲ ಕಾಲಕ್ಕೆ ಸಭೆಗಳನ್ನು ನಡೆಸಿ ಲೋಪವಾಗದಂತೆ ಕ್ರಮ ವಹಿಸಿ ಎಂದು ಸೂಚಿಸಿದರು.ವಸತಿನಿಲಯ ಹಾಗೂ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಪರಿಶೀಲಿಸಿ, ಅಚ್ಚುಕಟ್ಟಾಗಿ ಮೇಲ್ವಿಚಾರಣೆ ನಡೆಸುವಂತೆ ಸೂಚಿಸಿದ ಅವರು ಹಾನಗಲ್ಲ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಬಾಲಕಿಯರ ವಸತಿನಿಲಯದ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯ ಕುರಿತು ಮಾಹಿತಿ ಪಡೆದು, ಗುಣಮಟ್ಟದ ಕಾಮಗಾರಿಗೆ ಕಾಳಜಿ ವಹಿಸಿ ಎಂದರು.ಪುರಸಭೆಗೆ ಸೂಚನೆ: ಇ- ಸ್ವತ್ತು ಮಾಡಿಕೊಡಲು ವಿಳಂಬ ಮಾಡಲಾಗುತ್ತಿದೆ ಎನ್ನುವ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಈ ಕುರಿತು ಪರಿಶೀಲಿಸಿ, ಸಂಬಂಧಿಸಿದ ವಿಷಯ ನಿರ್ವಾಹಕರಿಗೆ ಎಚ್ಚರಿಸಿ ವಿಳಂಬಕ್ಕೆ ಅವಕಾಶ ನೀಡದಂತೆ ಕ್ರಮ ವಹಿಸುವಂತೆ ಶಾಸಕ ಶ್ರೀನಿವಾಸ ಮಾನೆ ಅವರು ಸ್ಥಳೀಯ ಪುರಸಭೆಯ ಮುಖ್ಯಾಧಿಕಾರಿ ಜಗದೀಶ ಅವರಿಗೆ ಸೂಚಿಸಿದರು.ಇಲ್ಲಿನ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಪುರಸಭೆ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು. ಪೂರ್ವಾನುಮತಿ ಪಡೆಯದೇ ನಿರ್ಮಾಣವಾಗುತ್ತಿರುವ ಕಟ್ಟಡಗಳಿಗೆ ನೋಟಿಸ್ ನೀಡಿ, ಕಡ್ಡಾಯವಾಗಿ ಪೂರ್ವಾನುಮತಿ ಪಡೆದು ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲು ತಿಳಿಸುವಂತೆ ಸೂಚಿಸಿದರು.ರಾಜ್ಯ ವಿಪತ್ತು ಉಪಶಮನ ನಿಧಿಯಡಿ 1.30 ಕಿಮೀ ಕಚ್ಚಾ ಕಾಲುವೆ ದುರಸ್ತಿ ಕೈಗೊಳ್ಳಲು ಅನುದಾನ ಲಭ್ಯವಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಹಾಗೂ ಬಿ ಖಾತಾ ಅಭಿಯಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಲಾಭ ಪಡೆದುಕೊಳ್ಳುವಂತೆ ಪ್ರಚಾರ ಕೈಗೊಂಡು ಮಾಹಿತಿ ಒದಗಿಸುವಂತೆ ಸೂಚಿಸಿದರು.ರುದ್ರಭೂಮಿಯಲ್ಲಿ ಸಸಿ ನೆಟ್ಟು ಪರಿಸರ ದಿನಾಚರಣೆ

ಹಾವೇರಿ: ನಗರದ ಹೆಗ್ಗೇರಿ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಲಯನ್ಸ್ ಕ್ಲಬ್‌ನ ವತಿಯಿಂದ ಸಸಿಗಳನ್ನು ನೆಡುವ ಮೂಲಕ ವಿಶಿಷ್ಟವಾಗಿ ಪರಿಸರ ದಿನವನ್ನು ಆಚರಿಸಲಾಯಿತು.

ಈ ವೇಳೆ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಸುಭಾಸ್ ಹುಲ್ಯಾಳದ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಲವು ಕಾರಣಕ್ಕೆ ಮರಗಳನ್ನು ಕಡಿಯಲಾಗುತ್ತಿದೆ. ಇದರಲ್ಲಿ ಕೈಗಾರಿಕೆಗಳಿಗೆ ಅಗತ್ಯವಾದ ಮರಗಳು, ರಸ್ತೆ ಅಗಲೀಕರಣ, ಮನೆ ನಿರ್ಮಾಣ, ಭೂಮಿ ಸಮತಟ್ಟು ಹೀಗೆ ಹಲವು ಕಾರಣಗಳಿವೆ. ಆದರೆ ಮರಗಳನ್ನು ನೆಡುವಲ್ಲಿ ಇಂಥ ಕಾಳಜಿ ತೋರುತ್ತಿಲ್ಲ. ಇದರಿಂದ ಜಾಗತಿಕ ತಾಪಮಾನ ಸಮಸ್ಯೆ ಎದುರಾಗಿದೆ. ಇದರ ನೇರ ಪರಿಣಾಮವನ್ನು ದೆಹಲಿ ಮತ್ತು ನಮ್ಮ ಬೆಂಗಳೂರಿನಲ್ಲಿ ಕಾಣಬಹುದಾಗಿದೆ ಎಂದರು.ಇನ್ನು ಹಾವೇರಿ ನಗರದಲ್ಲಿ ರುದ್ರಭೂಮಿಗೆ ಬರುವ ನಾಗರಿಕರು ಪ್ರತಿ ವ್ಯಕ್ತಿಯ ಅಂತಿಮ ನಮನ ಮತ್ತು ವಿಧಿವಿಧಾನಗಳನ್ನು ಪೂರ್ಣಗೊಳಿಸುವವರೆಗೆ ಬಿಸಿಲಲ್ಲಿ ಕಾಯುವಂತಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಜತೆಗೆ ಪರಿಸರದ ಕಾಳಜಿ ತೋರುವ ಈ ಕಾರ್ಯಕ್ರಮವನ್ನು ಇಲ್ಲಿ ಹಮ್ಮಿಕೊಂಡಿದ್ದು, ಇದು ಹೆಚ್ಚು ಅರ್ಥಪೂರ್ಣ ಮತ್ತು ಸಾಮಾಜಿಕ ಕಳಕಳಿಯ ಕಾರ್ಯ ಎಂಬ ನೆಮ್ಮದಿ ನೀಡಿದೆ ಎಂದರು.ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳ ಜತೆಗೆ ಹತ್ತಾರು ಸಾರ್ವಜನಿಕರು ಈ ಪರಿಸರ ದಿನದ ವಿಶೇಷ ಕಾರ್ಯಕ್ಕೆ ಸಾಥ್ ನೀಡಿ ಶ್ರಮದಾನ ಮಾಡಿದರು.ಈ ವೇಳೆ ವಿರುಪಾಕ್ಷಪ್ಪ ಹಾವನೂರ, ಗಿರೀಶ ಬಣಕಾರ, ವಿ.ಜಿ. ಬಣಕಾರ, ಎಸ್.ಎಚ್. ಕಬ್ಬಿಣಕಂತಿಮಠ, ಎ.ಎಚ್. ಕಬ್ಬಿಣಕಂತಿಮಠ, ನಿರಂಜನ ಹೇರೂರ, ಎಂ.ಎಸ್. ಹಿರೇಮಠ, ನಗರಸಭೆಯ ಉಪಾಧ್ಯಕ್ಷ ಮಲ್ಲಣ್ಣ ಸಾತೇನಹಳ್ಳಿ, ಡಾ. ವಿಜಯಕುಮಾರ ಬಳಿಗಾರ, ಎಂ.ಸಿ. ಮಳೀಮಠ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ