ಭೂಸ್ವಾಧೀನ ಪರಿಹಾರ ಕೊಡಿ

KannadaprabhaNewsNetwork | Published : Oct 7, 2023 2:15 AM

ಸಾರಾಂಶ

ದಾಬಸ್‌ಪೇಟೆ: ಭೂಸ್ವಾಧೀನವಾಗಿರುವ ಜಮೀನುಗಳಿಗೆ ಸೂಕ್ತ ದಾಖಲೆಗಳನ್ನು ನೀಡಿದ್ದರೂ ಆರೇಳು ತಿಂಗಳಿಂದ ಪರಿಹಾರ ನೀಡದೇ ಸತಾಯಿಸುತ್ತಿದ್ದಾರೆ ಎಂದು ಸೋಂಪುರ ಹೋಬಳಿ ರೈತರು ಹಾಗೂ ಸಾರ್ವಜನಿಕರು ಪಟ್ಟಣದಲ್ಲಿರುವ ವಿಶೇಷ ಭೂಸ್ವಾಧೀನ ಕಚೇರಿಗೆ ಆಗಮಿಸಿ ವಿಶೇಷ ಭೂಸ್ವಾಧೀನಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ದಾಬಸ್‌ಪೇಟೆ: ಭೂಸ್ವಾಧೀನವಾಗಿರುವ ಜಮೀನುಗಳಿಗೆ ಸೂಕ್ತ ದಾಖಲೆಗಳನ್ನು ನೀಡಿದ್ದರೂ ಆರೇಳು ತಿಂಗಳಿಂದ ಪರಿಹಾರ ನೀಡದೇ ಸತಾಯಿಸುತ್ತಿದ್ದಾರೆ ಎಂದು ಸೋಂಪುರ ಹೋಬಳಿ ರೈತರು ಹಾಗೂ ಸಾರ್ವಜನಿಕರು ಪಟ್ಟಣದಲ್ಲಿರುವ ವಿಶೇಷ ಭೂಸ್ವಾಧೀನ ಕಚೇರಿಗೆ ಆಗಮಿಸಿ ವಿಶೇಷ ಭೂಸ್ವಾಧೀನಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಬೆಂಗಳೂರಿನ ಟ್ರಾಫಿಕ್ ನಿಯಂತ್ರಿಸಲು ಸರ್ಕಾರ 288 ಕಿ.ಮೀ. ಉದ್ದದ 17000 ಕೋಟಿ ವೆಚ್ಚದಲ್ಲಿ ಸ್ಯಾಟಲೈಟ್ ನಗರ, ರಿಂಗ್ ರಸ್ತೆ (ಎಸ್‌ಟಿಆರ್‌ಆರ್) ನಿರ್ಮಾಣಕ್ಕಾಗಿ ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ವ್ಯಾಪ್ತಿಯ ಸುಮಾರು 340 ಹೆಕ್ಟೇರ್ ಹಾಗೂ ತಮಿಳುನಾಡಿನ 1009.8 ಹೆಕ್ಟೇರ್ ಸೇರಿ ಒಟ್ಟು 1349.8 ಹೆಕ್ಟೇರ್ ಎಕರೆ ಜಮೀನು 2018ರಲ್ಲಿ ಭೂಸ್ವಾಧೀನಪಡಿಸಿಕೊಂಡಿದೆ. ಪ್ರತಿನಿತ್ಯ ಅಲೆದಾಟ: ಪಟ್ಟಣದಲ್ಲಿರುವ ವಿಶೇಷ ಭೂಸ್ವಾಧೀನ ಕಚೇರಿಗೆ ಸೋಂಪುರ ಹೋಬಳಿಯ ಕೆಂಗಲ್, ಹೊನ್ನೇನಹಳ್ಳಿ, ಬರಗೇನಹಳ್ಳಿ, ದಾಬಸ್‌ಪೇಟೆ ಗ್ರಾಮಗಳ ರೈತರು ಭೂ ಪರಿಹಾರಕ್ಕಾಗಿ ದಿನವೂ ಅಲೆದಾಡುತ್ತಿದ್ದಾರೆ. ನಾಳೆ ಬನ್ನಿ, ಅಧಿಕಾರಿಗಳು ಇಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ ಎಂದು ರೈತ ಮುಖಂಡ ಬಿಲ್ಲಿನಕೋಟೆ ನಾಗರಾಜು ಆಕ್ರೋಶ ವ್ಯಕ್ತಪಡಿಸಿದರು. ಬೇಜವಾಬ್ದಾರಿ ಉತ್ತರ: ರೈತ ಸಿದ್ದರಾಜು ಮಾತನಾಡಿ, ಭೂಸ್ವಾಧೀನಾಧಿಕಾರಿಗಳು ನನಗೇನು ಗೊತ್ತಿಲ್ಲ, ಇಲ್ಲಿಗೆ ಬರಬೇಡಿ, ಜಿಲ್ಲಾಧಿಕಾರಿಗಳನ್ನು ಕೇಳಿ ಎಂದು ಉತ್ತರ ನೀಡುತ್ತಾರೆ. ನಾವು ಅನಕ್ಷರಸ್ಥರು. ಮಾಹಿತಿ ನೀಡಬೇಕಾದವರೇ ಈ ರೀತಿ ಹೇಳುವುದು ಎಷ್ಟು ಸರಿ ಎಂದು ಅಸಮಾಧಾನ ಹೊರಹಾಕಿದರು. ಕಚೇರಿಗೆ ಬರಲ್ಲ: ರೈತ ರುದ್ರಣ್ಣ ಮಾತನಾಡಿ, ವಿಶೇಷ ಭೂಸ್ವಾಧೀನಾಧಿಕಾರಿಗಳು ಸರಿಯಾಗಿ ಕಚೇರಿಗೆ ಬರುವುದಿಲ್ಲ, ವಾರಕ್ಕೊ ಹದಿನೈದು ದಿನಗಳಿಗೊಮ್ಮೆ ಬರುತ್ತಾರೆ. ಸಿಬ್ಬಂದಿಯವರನ್ನು ಕೇಳಿದರೆ ಅಧಿಕಾರಿಗಳು ಬರಬೇಕು. ಅಲ್ಲಿಯವರೆಗೂ ಕಾಯಬೇಕು ಎಂದು ಹೇಳುತ್ತಾ ಪ್ರತಿನಿತ್ಯ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ದೂರಿದರು. ಕಮಿಷನ್ ಆರೋಪ: ಕೆಂಗಲ್ ನಿವಾಸಿ ಕುಮಾರ್ ಪ್ರತಿಕ್ರಿಯಿಸಿ ಭೂಸ್ವಾಧೀನಗೊಂಡಿರುವ ಜಮೀನುಗಳ ರೈತರಿಗೆ ಪರಿಹಾರ ನೀಡಲು ಅಧಿಕಾರಿಗಳು ಶೇ.5ರಿಂದ ಶೇ.15ರವರೆಗೂ ಕಮಿಷನ್ ಕೇಳುತ್ತಾರೆ. ಕಮಿಷನ್ ನೀಡುವವರಿಗೆ ಬೇಗ ಪರಿಹಾರ ಹಣ ನೀಡುತ್ತಾರೆ. ನಾವು ರೈತರು ಬಡವರು, ಕಮಿಷನ್ ಎಲ್ಲಿಂದ ಕೊಡೋಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೋಟೋ 1 * 2 : ದಾಬಸ್‌ಪೇಟೆ ಪಟ್ಟಣದಲ್ಲಿರುವ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಯಲ್ಲಿ ರೈತರ ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯುತ್ತಿರುವುದು.

Share this article