ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ ಶಿಕಾರಿಪುರ ತಾಲೂಕಿನಲ್ಲಿ 32 ಸಾವಿರಕ್ಕೂ ಅಧಿಕ ಕೊಳವೆಬಾವಿಗಳಿವೆ. ಈ ಹಿನ್ನೆಲೆ ತಾಲೂಕಿನ ರೈತರ ಹಿತದೃಷ್ಟಿಯಿಂದ ಕೆಟ್ಟುಹೋದ ಟ್ರಾನ್ಸ್‌ಫಾರ್ಮರ್ ದುರಸ್ತಿ ಕೇಂದ್ರವನ್ನು ಶಿರಾಳಕೊಪ್ಪದಲ್ಲಿ ಪ್ರಾರಂಭಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಶುಕ್ರವಾರ ಪಟ್ಟಣದ ನೂತನ ಎಪಿಎಂಸಿ ಗೋಡೌನ್‌ನಲ್ಲಿ ಟ್ರಾನ್ಸ್‌ಫಾರ್ಮರ್ ದುರಸ್ತಿ ಕೇಂದ್ರಕ್ಕೆ ಚಾಲನೆ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು. ಈ ಹಿಂದೆ ಕೆಟ್ಟುಹೋದ ಟ್ರಾನ್ಸ್‌ಫಾರ್ಮರ್‌ಗಳ ರಿಪೇರಿ ಕೇಂದ್ರ ಸಾಗರದಲ್ಲಿ ಮಾತ್ರ ಇತ್ತು. ಅನಂತರ ಶಿಕಾರಿಪುರದಲ್ಲಿ ಪ್ರಾರಂಭಿಸಲಾಯಿತು. ಆದರೆ ಪದೇಪದೆ ಬಳಕೆ ಹಾಗೂ ವಿದ್ಯುತ್ ಏರುಪೇರಿನಿಂದಾಗಿ ಟಿ.ಸಿ.ಗಳು ಹೆಚ್ಚಾಗಿ ಸುಟ್ಟು ರೈತರಿಗೆ ತೀವ್ರ ತೊಂದರೆ ಆಗುತ್ತಿದೆ. ತಕ್ಷಣ ಟಿ.ಸಿ.ಗಳ ರಿಪೇರಿಯಾದರೆ ರೈತರಿಗೆ ಟ್ರಾನ್ಸ್‌ಫಾರ್ಮರ್ ಬದಲಾವಣೆ ಮಾಡಲು ಅನುಕೂಲ ಆಗುತ್ತದೆ. ಆದ್ದರಿಂದ ಟ್ರಾನ್ಸ್‌ಫಾರ್ಮರ್ ದುರಸ್ತಿ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ ಎಂದರು. ಈ ಹಿಂದೆ ಯಡಿಯೂರಪ್ಪ ಅವರು ರಾಜಕೀಯಕ್ಕೆ ಬಂದಾಗ ಶಿಕಾರಿಪುರದಲ್ಲಿ ಕೇವಲ 35 ಕೆ.ವಿ. ಸ್ಟೇಷನ್ ಇತ್ತು. ಈಗ ತಾಲೂಕಿನಲ್ಲಿ 110 ಕೆ.ವಿ. 12 ಸ್ಟೇಷನ್ ಹಾಗೂ ಬಳ್ಳಿಗಾವಿಯಲ್ಲಿ 220 ಕೆ.ವಿ. ಸ್ಟೇಷನ್ ಅನ್ನು ಯಡಿಯೂರಪ್ಪನವರು ಅಧಿಕಾರದಲ್ಲಿ ಇದ್ದಾಗ ಸ್ಥಾಪನೆ ಮಾಡಿಸಿದ್ದಾರೆ. ಆದರೆ ಅತಿಯಾದ ಅನಧಿಕೃತ ಬೋರ್‌ವೆಲ್‌ನಿಂದ ಟ್ರಾನ್ಸ್‌ಫಾರ್ಮರ್‌ಗಳ ಮೇಲೆ ಒತ್ತಡ ಬೀಳುತ್ತಿದೆ. ಪರಿಣಾಮ ಅವು ದುರಸ್ತಿಗೆ ಈಡಾಗುತ್ತಿವೆ. ಆದ್ದರಿಂದ ಇನ್ನು ಮುಂದೆ ಶೀಘ್ರವಾಗಿ ಟಿ.ಸಿ.ಗಳ ದುರಸ್ತಿ ಆಗಲಿದೆ ಎಂದು ತಿಳಿಸಿದರು. ತಾಲೂಕಿನ ಕೆರೆ ತುಂಬಿಸುವ ಏತ ನೀರಾವರಿ ಯೋಜನೆಯನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದನಾದ ನಾನು ಹಾಗೂ ವಿಜಯೇಂದ್ರ ಶ್ರಮದಿಂದ ಮಾಡಲಾಗಿದೆ. ಈ ಯೋಜನೆಯಿಂದ ಬರಿದಾದ ಉಡಗಣಿ, ತಾಳಗುಂದ ಹಾಗೂ ಹೊಸೂರು ಹೋಬಳಿಯ ಕೆರೆಗಳನ್ನು ತುಂಬಿಸುವ ಕಾರ್ಯ ಪ್ರಾರಂಭವಾಗಿದೆ. ಈ ಬಾರಿ ಅತಿ ಕಡಿಮೆ ಮಳೆ ಆಗಿರುವುದರಿಂದ ಸಾಕಷ್ಟು ಕೆರೆಗಳು ತುಂಬಲಿಲ್ಲ, ಅವುಗಳನ್ನು ತುಂಬಿಸಿದಾಗ ರೈತರು ನೀರನ್ನು ಪೋಲು ಮಾಡದೇ ಬೇಸಿಗೆಯಲ್ಲಿ ಕುಡಿಯಲು ಉಪಯೋಗಿಸಲು ಸಹಕಾರಿ ಆಗುತ್ತದೆ ಎಂದರು. ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಬಳಿಗಾರ ಅರಣ್ಯ ನಿಗಮದ ಉಪಾಧ್ಯಕ್ಷ ಕೆ.ರೇವಣಪ್ಪ, ಸಣ್ಣ ಹನುಮಂತಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚೆನ್ನವೀರಪ್ಪ, ತಡಗಣಿ ಮಂಜಣ್ಣ, ಶಂಭು ಸೇರಿದಂತೆ ಹಲವಾರು ಪ್ರಮುಖರು ಹಾಜರಿದ್ದರು. - - - -6ಕೆಎಸ್‌ಎಚ್‌ಆರ್1: ಶಿರಾಳಕೊಪ್ಪ ಎಪಿಎಂಸಿ ಗೋಡನ್‌ನಲ್ಲಿ ಟ್ರಾನ್ಸ್‌ಫಾರ್ಮರ್ ದುರಸ್ತಿ ಕೇಂದ್ರ ವನ್ನು ಸಂಸದ ರಾಘವೇಂದ್ರ ಉದ್ಘಾಟಿಸಿದರು. -6ಕೆಎಸ್‌ಎಚ್‌ಆರ್2: ಎಪಿಎಂಸಿ ಗೋಡೌನ್‌ನಲ್ಲಿ ನಡೆದ ಸಾವರ್ಜನಿಕ ಸಭೆಯ ಕಾಯರ್ಕ್ರಮವನ್ನು ಸಂಸದ ಬಿವೈ.ರಾಘವೇಂದ್ರ ದೀಪ ಬೆಳಗಿಸಿ ಚಾಲನೆ ನೀಡಿದರು.