ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರಿಗೆ ಸೌಲಭ್ಯ ನೀಡಿ: ಎಚ್.ಎನ್. ರಮೇಶ

KannadaprabhaNewsNetwork | Published : Jul 16, 2024 12:37 AM

ಸಾರಾಂಶ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಆರೋಗ್ಯ ಇಲಾಖೆಯ ವಿವಿಧ ವೃಂದದ ಹೊರಗುತ್ತಿಗೆ ನೌಕರರ ಸಂಘದಿಂದ ಗದಗ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಗದಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಆರೋಗ್ಯ ಇಲಾಖೆಯ ವಿವಿಧ ವೃಂದದ ಹೊರಗುತ್ತಿಗೆ ನೌಕರರ ಸಂಘದಿಂದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೂಲಕ ಮುಖ್ಯಮಂತ್ರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಕಾನೂನು ಸಲಹೆಗಾರ, ನಿವೃತ್ತ ಕಾರ್ಮಿಕ ಅಧಿಕಾರಿ ಎಚ್.ಎನ್. ರಮೇಶ ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಹತ್ತಾರು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ 9,000 ನೌಕರರು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರವು ಒಂದು ರಾಜಕೀಯ ಸಂಸ್ಥೆಗೆ ಟೆಂಡರ್ ನೀಡಿ ನೌಕರರನ್ನು ಶೋಷಿಸುತ್ತಿದೆ. ರಾಜ್ಯದಲ್ಲಿ ಸುಮಾರು 2.50 ಲಕ್ಷ ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡದೇ ಗುತ್ತಿಗೆ ಪದ್ಧತಿ ಮುಂದುವರಿಸಿದೆ. ಇದರಿಂದ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ದೊರೆಯದೇ ಜೀವನ ಸಾಗಿಸಲು ತುಂಬಾ ತೊಂದರೆಯಾಗುತ್ತಿದೆ. ಕೋವಿಡ್‌ನಂತಹ ಮಹಾಮಾರಿ ಸಮಯದಲ್ಲಿ ಪ್ರಾಣದ ಹಂಗು ತೊರೆದು ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಸರ್ಕಾರವು ಇತ್ತೀಚಿಗೆ ಹೊರಗುತ್ತಿಗೆ ಪದ್ಧತಿಯಲ್ಲಿಯೂ ಮೀಸಲಾತಿ ತಂದಿರುವುದು ನಮ್ಮೆಲ್ಲರ ವಿರೋಧವಿದೆ. ಈ ಧೋರಣೆಯಿಂದ ಎಷ್ಟೋ ಕುಟುಂಬಗಳು ಬೀದಿಪಾಲಾಗಿವೆ. ಹೊರಗುತ್ತಿಗೆದಾರರಿಗೆ ಸರ್ಕಾರದಿಂದ ಯಾವುದೇ ಪಿಂಚಣಿ, ಭವಿಷ್ಯ ನಿಧಿ ಇಂತಹ ಸೌಲಭ್ಯಗಳಿಂದ ವಂಚಿತರಾಗಿರುತ್ತೇವೆ. ಹೊರಗುತ್ತಿಗೆದಾರರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡರೆ ಈ ವರೆಗೂ ಆರೋಗ್ಯ ಸಚಿವರು ಅದನ್ನು ಪರಿಗಣಿಸದೇ ಇರುವುದು ನಮ್ಮೆಲ್ಲರ ದುರ್ದೈವ ಎಂದು ವಿಷಾದ ವ್ಯಕ್ತಪಡಿಸಿದರು.

ನಮ್ಮ ನ್ಯಾಯಯುತ ಬೇಡಿಕೆಗಳಾದ ಸಮಾನ ಕೆಲಸಕ್ಕೆ ಸಮಾನ ವೇತನ, ಖಾಸಗಿ ಸಂಸ್ಥೆ ಬದಲಾಗಿ ಸರ್ಕಾರಿ ಸಂಸ್ಥೆ ಅಥವಾ ನಿಗಮ ಮಂಡಳಿ ಮೂಲಕ ವೇತನ ಪಾವತಿ ಮಾಡುವ ವ್ಯವಸ್ಥೆ ಕಲ್ಪಿಸುವುದು, ಸೇವಾ ಭದ್ರತೆ ನೀಡುವುದು, ಮೀಸಲಾತಿ ಹೆಸರಿನಲ್ಲಿ ಹಳೆಯ ನೌಕರರನ್ನು ಕೆಲಸದಿಂದ ತೆಗೆಯಬಾರದು ಮತ್ತು ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ಎಲ್ಲ ನೌಕರರನ್ನು ಮುಂದುವರಿಸುವುದು ಈ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.

ಅಕ್ಷಯ ಡಿ.ಎಂ. ಗೌಡ, ಶಿವಕುಮಾರ ಆರ್., ಸಿದ್ದಪ್ಪ ಬಿ., ಶ್ರೀಶೈಲ, ಮಂಜುಳಾ, ಸಾವಿತ್ರಿ ಇಪ್ಪರಗಿ, ರವೀಂದ್ರ ಬಿ., ನವೀನಕುಮಾರ ಬಿ., ಪ್ರವೀಣ ಶಿಗ್ಲಿಯವರ, ಶ್ರೀಶೈಲ ಕರಿಬೀಮಗೋಳ, ಕೇದಾರೇಶ್ವರ ದೊಡ್ಡಮನಿ, ಸುರೇಶ ಜೋಗಿನ, ಕೆ.ಎಚ್. ಅಮೀರಅಲಿ, ರಂಜಾನ್‌ಸಾಬ್‌ ಹಳ್ಯಾಳ, ಶರಣಪ್ಪಗೌಡ ಗೌಡ್ರ, ಗುರುಪಾದಪ್ಪ ಪಟ್ಟಣಶೆಟ್ಟಿ, ಮಂಜು ಮಡಿವಾಳರ, ಆನಂದ ದೊಡ್ಮನಿ, ಹೇಮಣ್ಣ ಪೂಜಾರ ಹಾಗೂ ಸರ್ವ ಸದಸ್ಯರು ಇದ್ದರು.

Share this article