ರೈತರಿಗೆ ತಕ್ಷಣ ಬೆಳೆ ಹಾನಿ ಪರಿಹಾರ ನೀಡಿ

KannadaprabhaNewsNetwork |  
Published : Oct 14, 2025, 01:02 AM IST
ರೈತರ ಬೆಳೆಗಳಿಗೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಭೀಮಾ, ಕೃಷ್ಣಾ ಹಾಗೂ ಡೋಣಿ ನದಿಯ ಪ್ರವಾಹದಿಂದಾಗಿಯೂ ಸಾಕಷ್ಟು ಬೆಳೆ ಹಾನಿ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಜೂನ ತಿಂಗಳಿನಿಂದ ಇದುವರೆಗೆ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಹಾನಿಗೊಳಗಾದ ರೈತರ ಬೆಳೆಗಳಿಗೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ಬಳಿಕ ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಸಾಕಷ್ಟು ರೈತರ ಬೆಳೆಗಳು ಸಂಪೂರ್ಣ ನಷ್ಟಗೊಂಡಿವೆ ಜೊತೆಗೆ ಜಿಲ್ಲೆಯ ಭೀಮಾ, ಕೃಷ್ಣಾ ಹಾಗೂ ಡೋಣಿ ನದಿಯ ಪ್ರವಾಹದಿಂದಾಗಿಯೂ ಸಾಕಷ್ಟು ಬೆಳೆ ನಷ್ಟಗೊಂಡಿವೆ. ಜಿಲ್ಲಾಡಳಿತಕ್ಕೂ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿ ಕೂಡಲೇ ಪರಿಹಾರ ಮತ್ತು ಫಸಲ್ ಬಿಮಾ ಯೋಜನೆಯಡಿ ವಿಮೆ ನೀಡಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಜಿಲ್ಲೆಯ 13 ತಾಲೂಕಿನಲ್ಲಿ ಯಾವುದೇ ಸಮೀಕ್ಷೆ ಹೆಸರಲ್ಲಿ ವಿಳಂಬ ಮಾಡದೇ ಪ್ರತಿಯೊಂದು ಹಳ್ಳಿಯ ರೈತರಿಗೆ ಎಕರೆಗೆ ಒಣ ಬೇಸಾಯಕ್ಕೆ ₹50 ಸಾವಿರ, ನೀರಾವರಿಗೆ ₹1 ಲಕ್ಷ ಹಾಗೂ ಬಹು ವಾಷಿಕ ಬೆಳೆಗಳಿಗೆ ₹2 ಲಕ್ಷ ನಷ್ಟ ಪರಿಹಾರ ನೀಡಬೇಕು. ಜಂಟಿ ಸಮೀಕ್ಷೆ, ವೈಮಾನಿಕ ಸಮೀಕ್ಷೆ ಹೆಸರಲ್ಲಿ ತಡ ಮಾಡದೇ ಕೂಡಲೆ ಪರಿಹಾರ ನೀಡುವಂತೆ ಆಗ್ರಹಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕಲ್ಲು ಸೊನ್ನದ ಮಾತನಾಡಿ, ಈ ವರ್ಷ ಹಿಂದೆಂದೂ ಕಂಡು ಕಾಣರಿಯದಂತಹ ಮಳೆ ಹಾಗೂ ಪ್ರವಾಹ ಉಂಟಾಗಿ ಬಸವನಬಾಗೇವಾಡಿ ತಾಲೂಕಿನ ಎಲ್ಲಾ ರೈತರ ತೊಗರಿ, ಹತ್ತಿ, ಸೆಂಗಾ ಸೇರಿದಂತೆ ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಲಿಂಬೆ ಸೇರಿ ಎಲ್ಲ ಬೆಳೆಗಳು ಮಳೆಗೆ ಹಾನಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಬಂದಿದೆ. ಕೂಡಲೇ ಎಲ್ಲಾ ರೈತರಿಗೂ ಪರಿಹಾರ ನೀಡಬೇಕು ಎಂದರು.

ರೈತ ಸಂಘದ ತಾಲೂಕು ಅಧ್ಯಕ್ಷ ಮುದಕಣ್ಣ ಹೊರ್ತಿ, ಮುತ್ತು ಹಾಲ್ಯಾಳ, ರೇವಣಸಿದ್ಧ ಮಣೂರ, ಜಿಲ್ಲಾ ಸಂಚಾಲಕ ಜಕರಾಯ ಪೂಜಾರಿ, ಕೊಲ್ಹಾರ ತಾಲೂಕಾಧ್ಯಕ್ಷ ಸೋಮು ಬಿರಾದಾರ ಮಾತನಾಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಜಿಲ್ಲಾ ಸಂಚಾಲಕ ಸಂಗಪ್ಪ ಟಕ್ಕೆ, ನಗರ ಘಟಕದ ಅಧ್ಯಕ್ಷ ಸಚೀನ ಸವನಳ್ಳಿ, ತಾಲೂಕು ಉಪಾಧ್ಯಕ್ಷ ನಾಮದೇವ ರಾಠೋಡ, ಶಶಿಕಾಂತ ಬಿರಾದಾರ, ಬಸವರಾಜ ಅಂಬಲಿ, ಪರಶುರಾಮ ಗೊಳಸಂಗಿ, ರಾವುತ ಬರಗಿ, ಸಿದ್ದು ಕುಂಬಾರ, ಬಸವರಾಜ ಬಿಜಾಪುರ, ಬಸಪ್ಪ ಕಾರಜೋಳ, ಅಲ್ಲಾಭಕ್ಷ ಚಪ್ಪರಬಂದ, ದರೇಪ್ಪ ಹೊಸಮನಿ, ಕಾಶಿನಾಥ ಹಾರಿವಾಳ, ಮಲ್ಲಿಕಾರ್ಜುನ ಮೇಲ್ದಾಪುರ, ಕಲ್ಲಪ್ಪ ಉಳ್ಳಾಗಡ್ಡಿ, ದುಂಡಪ್ಪ ಗೊಳಸಂಗಿ, ಭೀರಪ್ಪ ಸಂಕನಾಳ, ಮುತ್ತಪ್ಪ ಶಟ್ಟೆಪ್ಪಗೋಳ, ವೀರಭದ್ರ ಬಡಿಗೇರ, ಮಾಳು ಬಸ್ತಾಳ, ಹಣಮಂತ ಹೊಸಮನಿ, ಶೇಕಪ್ಪ ಮಾದರ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಗಾವಿ ಅಧಿವೇಶನಕ್ಕೆ ಪೊಲೀಸರ ಸರ್ಪಗಾವಲು
ಮೆಕ್ಕೆಜೋಳ ಖರೀದಿಯ ಮಿತಿ 50 ಕ್ವಿಂಟಲ್‌ಗೇರಿಕೆ