ಕನ್ನಡಪ್ರಭ ವಾರ್ತೆ, ಚಾಮರಾಜನಗರ
ನಗರದ ಜಿಲ್ಲಾ ಪಂಚಾಯಿತಿ ಹಳೇ ಕೆ.ಡಿ.ಪಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಜಿಲ್ಲಾ ಮಾನವ ಅಭಿವೃದ್ಧಿ ವರದಿ-2025 ಮತ್ತು ಸಮಗ್ರ ಹಾಗೂ ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ-2031ರ ವರದಿ ತಯಾರಿಕೆ ಸಂಬಂಧ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಅಭಿವೃದ್ಧಿಯಲ್ಲಿ ಜನರ ಜೀವನಮಟ್ಟ, ಶಿಕ್ಷಣ, ಆರೋಗ್ಯ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ, ಕೃಷಿ, ಕೌಶಲ್ಯಾಭಿವೃದ್ಧಿ, ಕೈಗಾರಿಕೆ, ಉದ್ಯೋಗಸೃಷ್ಠಿ, ಮೂಲಸೌಕರ್ಯ, ಪೌಷ್ಠಿಕ ಆಹಾರ, ಆದಾಯ ಸೇರಿದಂತೆ ಇತರೆ ಅಂಕಿ ಅಂಶಗಳನ್ನು ಪರಿಗಣಿಸಲಾಗುತ್ತಿದೆ. ವರದಿಗಳನ್ನು ಪರಿಣಾಮಕಾರಿಯಾಗಿ ರೂಪಿಸಲು ಅಧಿಕಾರಿಗಳು ನಿಖರ ಮಾಹಿತಿ ಒದಗಿಸಬೇಕು. ಯಾವುದೇ ನಿರ್ಲಕ್ಷ್ಯ ವಹಿಸದೇ ನಿಗದಿತ ಕಾಲಮಿತಿಯಲ್ಲಿ ಮಾಹಿತಿ ನೀಡಬೇಕು. ಉತ್ತಮ ಮಾಹಿತಿ ಸಲ್ಲಿಕೆಯಿಂದ ಸಾಮಾಜಿಕ, ಪ್ರಾದೇಶಿಕ ಅಸಮಾನತೆ ತಡೆಯಬಹುದಾಗಿದೆ ಎಂದರು.ಅಭಿವೃದ್ಧಿ ಸೂಚ್ಯಂಕಗಳ ಆಧಾರದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಗುರುತಿಸಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಸರ್ಕಾರಕ್ಕೆ ಅನುಕೂಲವಾಗಲಿದೆ. ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೂ ಇದು ಪೂರಕವಾಗಲಿದೆ. ಮುಂದಿನ 5 ವರ್ಷಗಳ ಅವಧಿಗೆ ಮಾನವ ಅಭಿವೃದ್ಧಿ ವರದಿ ತಯಾರಿಕೆ ಹಿನ್ನೆಲೆಯಲ್ಲಿ ನಿಖರ, ಸ್ಪಷ್ಟ ಮಾಹಿತಿ ಸಲ್ಲಿಕೆಗೆ ವಿವಿಧ ಇಲಾಖೆಗಳ ನಡುವೆ ಸಮನ್ವಯ, ಸಹಕಾರ ಅವಶ್ಯವಾಗಿದೆ ಎಂದು ಹೇಳಿದರು.
ಮೈಸೂರಿನ ಎಸ್.ಐ.ಆರ್.ಡಿ ಸಮಾಲೋಚಕರಾದ ಡಾ. ಜಿ.ಎಸ್. ಗಣೇಶ್‌ಪ್ರಸಾದ್ ಅವರು ಮಾತನಾಡಿ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 184 ರಾಷ್ಟ್ರಗಳ ಪೈಕಿ ಭಾರತವು 130ನೇ ಸ್ಥಾನ ಪಡೆದಿದ್ದು, ದೇಶದಲ್ಲಿ ಕರ್ನಾಟಕ 11ನೇ ಸ್ಥಾನದಲ್ಲಿದೆ. ಜಿಲ್ಲಾವಾರು ಮಾಹಿತಿಯನ್ವಯ ಚಾಮರಾಜನಗರ ಜಿಲ್ಲೆ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಶಿಕ್ಷಣ ಹಾಗೂ ಆದಾಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣಬೇಕಿದೆ. ಹೀಗಾಗಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಿಂದ ವರದಿ ತಯಾರಿಸಬೇಕಿದೆ. ಯಾವುದೇ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಅಲ್ಲಿನ ಆರೋಗ್ಯ, ಶಿಕ್ಷಣ, ಜನರ ಜೀವನಮಟ್ಟ ಸುಧಾರಣೆ ಅಗತ್ಯವಾಗಿದೆ. ಕರ್ನಾಟಕ ರಾಜ್ಯ ಅಧಿಕಾರ ವಿಕೇಂದ್ರಿಕರಣ ಯೋಜನೆಯ ಆಶಯದಂತೆ ಕೆಳಹಂತದ ಜನರ ಬೇಡಿಕೆ, ಅಭಿಪ್ರಾಯ ಸಂಗ್ರಹಿಸಿ ಅಭಿವೃದ್ಧಿ ವರದಿಗಳನ್ನು ರೂಪಿಸಬೇಕಾಗಿದೆ ಎಂದರು.2011ರ ಜನಗಣತಿ ಆಧಾರದಡಿ ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ 2015ರಲ್ಲಿ ಮಾನವ ಅಭಿವೃದ್ಧಿ ಬಗ್ಗೆ ಜಿಲ್ಲಾಮಟ್ಟದಲ್ಲಿ ವರದಿ ತಯಾರಿಸಲು ಅವಕಾಶ ಮಾಡಿಕೊಡಲಾಗಿತ್ತು. 2015ರಿಂದ 2025ರವರೆಗಿನ ಅಭಿವೃದ್ಧಿ ಸೂಚ್ಯಂಕವನ್ನು ಈಗ ತಯಾರಿಸಬೇಕಾಗಿರುವ ವರದಿಯಲ್ಲಿ ದಾಖಲಿಸಬೇಕು. ಸ್ವಾತಂತ್ರ್ಯ ನಂತರ ಮಾನವ ಅಭಿವೃದ್ಧಿಗೆ ಉತ್ಪನ್ನಗಳ ಹಾಗೂ ಆದಾಯಗಳ ಮೂಲವನ್ನು ಪರಿಗಣಿಸಲಾಗುತ್ತಿತ್ತು. ಬಳಿಕ ನೊಬೆಲ್ ಪುರಸ್ಕೃತರಾದ ಡಾ. ಅಮರ್ಥ್ಯಸೇನ್ ಹಾಗೂ ಡಾ. ಎಂ.ವಿ. ಹಕ್ ಅವರು ಮಾನವ ಅಭಿವೃದ್ಧಿಗೆ ಸಾಕಷ್ಟು ಪರಿಕಲ್ಪನೆಗಳನ್ನು ಪರಿಚಯಿಸಿದ್ದಾರೆ ಎಂದು ತಿಳಿಸಿದರು.
ಯಾವುದೇ ದೇಶದ ಅಭಿವೃದ್ಧಿ ಸೂಚ್ಯಂಕವು ಅಲ್ಲಿನ ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಯನ್ನು ಅವಲಂಬಿಸಿದೆ. ನಾವು ಸಾಕಷ್ಟು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದ್ದೇವೆ. ಇತರೆ ದೇಶಗಳಗೂ ಪೈಪೋಟಿ ನೀಡುತ್ತಿದ್ದೇವೆ. ಅದಾಗ್ಯೂ ನಮ್ಮಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಕೆಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಇನ್ನೂ ಮರಿಚಿಕೆಯಾಗಿದೆ. ವರದಿ ತಯಾರಿಕೆಯಲ್ಲಿ ಯಾವುದೇ ಒಂದು ವರ್ಗದ ಅಭಿವೃದ್ಧಿಯನ್ನು ಮಾನದಂಡವಾಗಿ ಪರಿಗಣಿಸಬಾರದು. ಸಮುದಾಯದ ಸಹಭಾಗಿತ್ವದೊಂದಿಗೆ ವರದಿ ತಯಾರಿಸಲು ಅಧಿಕಾರಿಗಳು ಮುಂದಾಗಬೇಕಿದೆ. ಪ್ರಸ್ತುತ ಮಾನವ ಅಭಿವೃದ್ಧಿ ವರದಿ ತಯಾರಿಕೆ ಅಧಿಕಾರಿಗಳಿಗೆ ಸವಾಲಿನ ಕೆಲಸವಾಗಿದೆ ಎಂದು ಅವರು ಹೇಳಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶೃತಿ, ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಮೈಸೂರು ವಿವಿಯ ಅರ್ಥಶಾಸ್ತ್ರ ಹಾಗೂ ಸಹಕಾರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ನವೀತ ತಿಮ್ಮಯ್ಯ, ಇತರರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.