ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿಸರ್ಕಾರ ಅಲೆಮಾರಿ ಸಮುದಾಯಗಳ ಪ್ರಗತಿಗೆ ಹಲವು ಯೋಜನೆಗಳನ್ನು ರೂಪಿಸಿದೆ ಎಂದು ರಾಜ್ಯ ಎಸ್ಸಿಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಹೇಳಿದರು.ಪಟ್ಟಣದ ಪ್ರಸಿದ್ಧಿ ಶಾಲೆ ಬಳಿ ಅಲೆಮಾರಿ ಸಮುದಾಯದ ಟೆಂಟ್‌ವಾಸಿಗಳ ಪ್ರದೇಶಕ್ಕೆ ಭೇಟಿ ನೀಡಿ ಅವರು ಮಾತನಾಡಿದರು. ಪಟ್ಟಣದ ಅಲೆಮಾರಿ ಸಮುದಾಯಗಳ ಜನರಿಗೆ ವಸತಿ, ಪಡಿತರ ಚೀಟಿ ಸೇರಿ ವಿವಿಧ ಸೌಲಭ್ಯ ಕಲ್ಪಿಸಲು ತಾಲೂಕು ಆಡಳಿತ ಆದ್ಯತೆ ನೀಡಬೇಕು. ಅಲೆಮಾರಿ ಸಮುದಾಯ ಕಡೆಗಣನೆಗೆ ಒಳಗಾಗಿದ್ದು, ಸಮುದಾಯದ ಜನರು ಯೋಜನೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಪ್ರಗತಿಯ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು. ಅಲೆಮಾರಿ ಜನಾಂಗ ಕುರಿತು ಕಾಳಜಿ ವಹಿಸಿರುವ ಪಟ್ಟಣದ ಪುರಸಭೆ ಅಧ್ಯಕ್ಷರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ವೇಳೆ ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ ಮಾತನಾಡಿ, ಅಲೆಮಾರಿ ಸಮುದಾಯದ ಜನರಿಗೆ ಪುರಸಭೆಯಿಂದ ಬೀದಿದೀಪ, ಕುಡಿವ ನಿರು ಸೇರಿ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಈಗಾಗಲೇ ಪುರಸಭೆಯಿಂದ ಕೊಳಚೆ ಪ್ರದೇಶ ಅಭಿವೃದ್ಧಿಗೆ ಸಮೀಕ್ಷೆ ನಡೆಸಲಾಗಿದ್ದು, ನಾನಾ ವಾರ್ಡ್‌ಗಳನ್ನು ಅಭಿವೃದ್ಧಿಗೆ ಗುರುತಿಸಲಾಗಿದೆ. ನಿವೇಶನ ಮತ್ತು ವಸತಿ ಸೌಲಭ್ಯ ಕುರಿತಂತೆ ಬಳಿಕ ಪಟ್ಟಣದ ಬೈಲು ಪತ್ತಾರರ ಟೆಂಟ್‌ಗಳಿಗೆ ಭೇಟಿ ನೀಡಿದರು. ಈ ವೇಳೆ ಪುರಸಭೆಯಿಂದ ಒದಗಿದ ಸೌಲಭ್ಯ ಕುರಿತಂತೆ ಬೈಲ್ ಪತ್ತಾರರು ಮಾಹಿತಿ ನೀಡಿದರು. ಈಗಾಗಲೇ ಅಲೆಮಾರಿ ಸಮುದಾಯದಿಂದ ಸಲ್ಲಿಕೆಯಾದ ಅರ್ಜಿಗಳನ್ನು ಆಧರಿಸಿ ಸೌಲಭ್ಯ ಕಲ್ಪಿಸಲಾಗುವುದು ಎಂದರು. ಇದೇ ವೇಳೆ ಅಲೆಮಾರಿಗಳು ತಮ್ಮ ಸಂಪ್ರಾದಾಯಿಕ ದುರುಮುರುಗಿ ಆಟ ಪ್ರದರ್ಶಿಸಿ ಗಮನಸೆಳೆದರು.ತಹಸೀಲ್ದಾರ್ ಆರ್.ಕವಿತಾ, ಪುರಸಭೆ ಉಪಾಧ್ಯಕ್ಷೆ ಅಂಬಿಕಾ ದೇವೇಂದ್ರಪ್ಪ, ಮುಖ್ಯಾಧಿಕಾರಿ ಎಂ.ಕೆ. ಮುಗಳಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಗದೀಶ, ಬೆಲ್ಲದ ಬಸವರಾಜ, ಸುಡುಗಾಡು ಸಿದ್ದರ ಸಮಾಜದ ಜಿಲ್ಲಾಧ್ಯಕ್ಷ ಚೌಡಪ್ಪ, ಮಾಜಿ ಜಿಲ್ಲಾಧ್ಯಕ್ಷ ಕೆ.ಲಕ್ಷ್ಮಣ, ಓಬಳಾಪುರ, ಮುಖಂಡ ನರಸಿಂಹ, ವಿ.ಮಲ್ಲೇಶಪ್ಪ, ಕೆ.ದುರುಗಪ್ಪ ಇತರರಿದ್ದರು.