ಹರಪನಹಳ್ಳಿ: ತಾಲೂಕಿನ ಉಚ್ಚಂಗಿದುರ್ಗದ ಇತಿಹಾಸ ಪ್ರಸಿದ್ಧ ಉಚ್ಚಂಗೆಮ್ಮ ದೇವಾಲಯದಲ್ಲಿ ನಡೆಯುವ ಭರತ್ ಹುಣ್ಣುಮೆ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.ಅವರು ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಯಾತ್ರಾ ನಿವಾಸದಲ್ಲಿ ಹಿಂದೂ ದಾರ್ಮಿಕ ದತ್ತಿ ಇಲಾಖೆ, ಉತ್ಸವಾಂಭ ದೇವಾಲಯ ಆಶ್ರಯದಲ್ಲಿ ಜ.31ರಿಂದ ಫೆ.2ರವರೆಗೆ ನಡೆಯುವ ಮೂರು ದಿನಗಳ ಕಾಲ ಭರತ್ ಹುಣ್ಣುಮೆ ಜಾತ್ರಾ ಮಹೋತ್ಸವದ ಪೂರ್ವ ಸಿದ್ಧತಾ ಸಭೆಯನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.
ದೇವದಾಸಿ ಮುತ್ತು ಕಟ್ಟುವ ಪದ್ಧತಿ ನಿರ್ಮೂಲನೆ, ರಸ್ತೆಗಳ ದುರಸ್ತಿ, ಪ್ರಚಾರದ ವ್ಯವಸ್ಥೆ ಮಾಡುವ ಬಗ್ಗೆ, ಜಾನುವಾರು ಆರೋಗ್ಯ ಸೇವೆ ವ್ಯವಸ್ಥೆ, ದೇವಸ್ಥಾನದ ಕಾಮಗಾರಿಗಳ ಪ್ರಗತಿ ಬಗ್ಗೆ, ಅಗತ್ಯ ತಕ್ಕಂತೆ ಗೃಹರಕ್ಷಕ ಸೇವಾದಳ, ದೇವಸ್ಥಾನಕ್ಕೆ ಬರುವ ದಾರಿಯಲ್ಲಿ ಆನೆಹೊಂಡದ ಹತ್ತಿರ ಹಾಗೂ ಅಕ್ಕಪಕ್ಕದ ಅಂಗಡಿಗಳನ್ನು ತೆರವುಗೊಳಿಸುವುದರ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಬರುವಂತಹ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಅವರು ತಾಕೀತು ಮಾಡಿದರು.
ಹರಪನಹಳ್ಳಿ ಡಿವೈಎಸ್ಪಿ ಸಂತೋಷ್ ಚೌಹಾಣ್ ಮಾತನಾಡಿ, ಈ ಜಾತ್ರೆಯು ಈ ಭಾಗದ ಅತೀ ದೊಡ್ಡ ಜಾತ್ರೆಯಾಗಿದೆ. ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆಗೊಳಿಸಲಾಗುವುದು. ನಾಲ್ಕು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ದೇವಸ್ಥಾನಕ್ಕೆ ಎರಡು ಕಡೆಯಿಂದ ಭಕ್ತರು ಬರುವುದರಿಂದ ಆ ಸ್ಥಳದಲ್ಲಿ ಶಾಮಿಯಾನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನಾಲ್ಕು ಕಡೆ ಚೆಕ್ ಪೋಸ್ಟ್ ಗಳನ್ನು ನಿಯೋಜನೆಗೊಳಿಸಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಟಿ.ಸುರೇಶಕುಮಾರ್, ಧಾರ್ಮಿಕ ದತ್ತಿ ಇಲಾಖೆಯ ಉಪವಿಭಾಗಧಿಕಾರಿ ಸವಿತಾ, ತಹಸೀಲ್ದಾರ್ ಗಿರೀಶಬಾಬು, ತಾಪಂ ಇಒ ವೈ.ಎಚ್. ಚಂದ್ರಶೇಖರ್, ಸಿಪಿಐ ಮಹಾಂತೇಶ್ ಸಜ್ಜನ್, ಗ್ರಾಪಂ ಅಧ್ಯಕ್ಷೆ ಟಿ.ಗೀತಾ ಕುಮಾರ್, ಉಪಾಧ್ಯಕ್ಷ ಮಡ್ರಳ್ಳಿ ಕೆಂಚಪ್ಪ, ಸಿಡಿಪಿಒ ಅಶೋಕ್, ಟಿಎಚ್ಒ ಪೃಥ್ವಿ, ಪಿಎಸ್ಐ ವಿಜಯಕೃಷ್ಣ, ಮುಖಂಡರಾದ ಶಿವಕುಮಾರ್ ಸ್ವಾಮಿ, ಪ್ರಧಾನ ಅರ್ಚಕ ಹುಚ್ಚಪ್ಪರ ಜಯಣ್ಣ, ಮಂಜುನಾಥ್ ಗೌಡ್ರು, ಮುಜರಾಯಿ ಇಲಾಖೆಯ ಇಒ ಮಲ್ಲಪ್ಪ, ಕೆಂಚಪ್ಪ, ಪಿಡಿಒ ಶಿವಕುಮಾರ್, ಗ್ರಾಪಂ ಸದಸ್ಯರು, ಎಲ್ಲ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.