ಹರ್ಡೇಕರ್ ಮಂಜಪ್ಪನವರು ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ಸಲ್ಲಿಸಿದ ಅಪಾರ ಸೇವೆಯನ್ನು ಸ್ಮರಿಸಿದರು.

ಹೊಸಪೇಟೆ: ಮನುಷ್ಯ ಕಾಯಕ ಮತ್ತು ಉನ್ನತ ವಿಚಾರಗಳಿಗೆ ಬದ್ಧನಾಗಿರಬೇಕು. ಹರ್ಡೇಕರ್ ಮಂಜಪ್ಪನವರಂತಹ ಮಹಾಪುರುಷರ ಜೀವನ ಇಂದಿನ ಪೀಳಿಗೆಗೆ ಮಾದರಿ ಎಂದು ಜಗದ್ಗುರು ಕೊಟ್ಟೂರು ಬಸವಲಿಂಗ ಶ್ರೀ ಹೇಳಿದರು.

ನಗರದ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನ ಮಠದಲ್ಲಿ ಶುಕ್ರವಾರ ಮಾಸಿಕ ಶಿವಾನುಭವ ಸಂಪದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, 1924ರಲ್ಲಿ ಹರ್ಡೇಕರ್ ಮಂಜಪ್ಪನವರು ರಚಿಸಿದ್ದ ''''''''ಬಸವ ಚರಿತ್ರೆ'''''''' ಗ್ರಂಥವನ್ನು ಮಠದಿಂದ ಪುನಃ ಪ್ರಕಟಿಸಲಾಗುತ್ತಿದ್ದು, ಇದು ಸಾಹಿತ್ಯ ಲೋಕಕ್ಕೆ ಮಹತ್ವದ ಕೊಡುಗೆಯಾಗಿದೆ ಎಂದರು.

ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ. ರವೀಂದ್ರನಾಥ್ ಮಾತನಾಡಿ, ಹರ್ಡೇಕರ್ ಮಂಜಪ್ಪನವರು ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ಸಲ್ಲಿಸಿದ ಅಪಾರ ಸೇವೆಯನ್ನು ಸ್ಮರಿಸಿದರು. ಬಸವಣ್ಣನವರ ವಿಚಾರಧಾರೆ ಹಾಗೂ ಮಹಾತ್ಮ ಗಾಂಧೀಜಿಯವರ ತತ್ವಗಳಿಂದ ಪ್ರಭಾವಿತರಾಗಿದ್ದ ಅವರು, ದಾವಣಗೆರೆಯಲ್ಲಿ ಮೊಟ್ಟಮೊದಲ ಬಾರಿಗೆ ಸಾರ್ವಜನಿಕವಾಗಿ ಬಸವ ಜಯಂತಿಯನ್ನು ಆಚರಿಸಲು ಪ್ರೇರಣೆ ನೀಡಿದ್ದರು. ಕರ್ನಾಟಕ ಗಾಂಧಿ ಹರ್ಡೇಕರ್ ಮಂಜಪ್ಪನವರದು ಅದ್ಭುತ ವ್ಯಕ್ತಿತ್ವ. ಅವರ ಜೀವನವೇ ಒಂದು ಪವಾಡ. ವ್ಯಕ್ತಿಯಾಗಿ ಹುಟ್ಟಿದರು ತತ್ವವಾಗಿ ಬೆಳೆದು ನಿಂತರು. ಆರ್ಯ ಸಮಾಜ ಸಂಸ್ಕೃತಿಯಿಂದ ಎದ್ದುಬಂದ ಹರ್ಡೇಕರ ಮಂಜಪ್ಪನವರು ಬಸವಣ್ಣನವರ ತತ್ವ ಸಿದ್ಧಾಂತಗಳಿಗೆ ಮಾರುಹೋಗಿ ವಚನ ಸಂಸ್ಕೃತಿಯ ಆದರ್ಶದಲ್ಲಿ ಬದುಕಿದ್ದರು. ಆ ಮೂಲಕ ಲಿಂಗಾಯತ‌ ತತ್ವವಾಗಿ ಬೆಳೆದು ನಿಂತರು. ರಾಷ್ಟ್ರಧರ್ಮ ಸಾಧಕ ಜೀವನ, ಸತ್ಯಾಗ್ರಹ ತತ್ವ ಪ್ರಸಾರ, ಆಶ್ರಮ ಜೀವನ ಕೊನೆಯಲ್ಲಿ ಶರಣಜೀವನ ನಡೆಸಿದ ಹರ್ಡೇಕರ ಮಂಜಪ್ಪನವರು ಅಖಿಲ ಭಾರತ ಮಹಾಪುರುಷರಾಗಿ ಜೀವಿಸಿದರು ಎಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ವಿಜಯನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಲಕ್ಷ್ಮಣ ಅವರನ್ನು ಮಠದಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಲಕ್ಷ್ಮಣ್‌, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ-ಯುವಜನರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಪುಸ್ತಕ ಹಾಗೂ ಪತ್ರಿಕೆಗಳು ಇರಬೇಕಾದ ಕೈಯಲ್ಲಿ ಮೊಬೈಲ್ ಗಳಿವೆ. ಇದರಿಂದ ಸಾಹಿತ್ಯಾಸಕ್ತಿ ಕ್ಷೀಣಿಸಿದೆ ಎಂದರು. ಮುಖಂಡರಾದ ಕೆ. ಸಂಗಪ್ಪ ದೊಡ್ಡಬಸಪ್ಪ, ವಡ್ರಹಳ್ಳಿ ಜ್ಯೋತಿ ಕೊಟ್ರಪ್ಪ ಹಾಗೂ ಭಕ್ತರು ಇತರರಿದ್ದರು.

ಹೊಸಪೇಟೆಯ ಕೊಟ್ಟೂರುಸ್ವಾಮಿ ಮಠದಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ವಿಜಯನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಲಕ್ಷ್ಮಣ ಅವರನ್ನು ಜಗದ್ಗುರು ಶ್ರೀ ಕೊಟ್ಟೂರು ಬಸವಲಿಂಗ ಸ್ವಾಮೀಜಿ ಸನ್ಮಾನಿಸಿದರು.