ರಾಜಿನಾಮೆ ಕೊಟ್ಟಿದ್ದಾದರೂ ಯಾಕೆ, ಹಿಂಪಡೆಯುತ್ತಿರುವುದಾದರೂ ಯಾಕೆ ಎಂಬ ಗೊಂದಲ ಸಾರ್ವಜನಿಕ ವಲಯದಲ್ಲಿ ಮೂಡಿದೆ
ಅಮರೇಶ್ವರಸ್ವಾಮಿ ಕಂದಗಲ್ಲಮಠ ಕುಕನೂರು
ಸ್ಥಳೀಯ ಪಪಂ ಉಪಾಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜಿನಾಮೆ ಮರಳಿ ಹಿಂದಕ್ಕೆ ಪಡೆಯಲು ಎಸಿ ಅವರಿಗೆ ಪ್ರಶಾಂತ ಆರಬೆರಳಿನ್ ಸಲ್ಲಿಸಿರುವ ಅರ್ಜಿ ಚರ್ಚೆಗೆ ಗ್ರಾಸವಾಗಿದೆ.ಅಧಿಕಾರ ಹಂಚಿಕೆಯ ಒಪ್ಪಂದದ ಹಿನ್ನೆಲೆಯಲ್ಲಿ ಸ್ಥಳೀಯ ಪಪಂಗೆ ಇಷ್ಟರಲ್ಲಿಯೇ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆ ಜನರದಲ್ಲಿ ಮೂಡಿತ್ತು. ಇದಕ್ಕೆ ಪೂರಕ ಎಂಬಂತೆ ಜ.14ರಂದು ಪಪಂ ಉಪಾಧ್ಯಕ್ಷ ಪ್ರಶಾಂತ ಆರಬೆರಳಿನ ಸಹ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜಿನಾಮೆ ಹಿಂದಕ್ಕೆ ಪಡೆಯಲು ಅವರು ಅರ್ಜಿ ಸಲ್ಲಿಸಿದ್ದಾರೆ.
ಆಕಾಂಕ್ಷಿಗಳಿಗೆ ನಿರಾಸೆ: ಪಪಂನ 2.5 ವರ್ಷದ ಅವಧಿಯಲ್ಲಿ ಇಬ್ಬರು ಸದಸ್ಯರಿಗೆ 15 ತಿಂಗಳು ಅಧಿಕಾರ ಎಂದು ಹಿರಿಯರ ಸಮ್ಮುಖದಲ್ಲಿ ಒಪ್ಪಂದ ಮಾಡಿಕೊಂಡು ಮೊದಲು ಲಲಿತಮ್ಮ ಯಡಿಯಾಪುರ ಅಧ್ಯಕ್ಷರಾಗಿದ್ದಾರೆ. ಮುಂದಿನ 15 ತಿಂಗಳ ಅಧ್ಯಕ್ಷರಾಗಿ 18ನೇ ವಾರ್ಡ್‌ನ ಲೀಲಾವತಿ ಪ್ರವೀಣಕುಮಾರ ಮುಧೋಳ ಅವರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಈಗ ನಿರಾಸೆಯಾಗಿದೆ.ಪಪಂ ಉಪಾಧ್ಯಕ್ಷ ಪ್ರಶಾಂತ ಆರಬೆರಳಿನ್ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಹಿಂಪಡೆಯಲು ಅರ್ಜಿ ಸಲ್ಲಿಸಿದ್ದು ಯಾಕೆ ಎಂಬುದು ಗೊಂದಲದ ಗೂಡಾಗಿದೆ. ಮಾತಿನಂತೆ ರಾಜಿನಾಮೆ ಕೊಟ್ಟು ಅಧಿಕಾರ ಬಿಟ್ಟು ಕೊಡುತ್ತಿದ್ದಾರೆ ಎಂಬ ಪ್ರಶಂಸೆಗೆ ಪ್ರಶಾಂತ ಭಾಜನರಾಗಿದ್ದರು. ಆದರೆ ರಾಜಿನಾಮೆ ಕೊಟ್ಟಿದ್ದಾದರೂ ಯಾಕೆ, ಹಿಂಪಡೆಯುತ್ತಿರುವುದಾದರೂ ಯಾಕೆ ಎಂಬ ಗೊಂದಲ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ರಾಜಿನಾಮೆ ಹಿಂಪಡೆಯಲು ಅರ್ಜಿ ನೀಡಿದ್ದರ ಬಗ್ಗೆ ಮಾತನಾಡುವುದಿಲ್ಲ. ಹುದ್ದೆ ಮೇಲೆ ಆಸೆ ಇಲ್ಲ. ಜನರ ಸೇವೆ ಮಾಡುತ್ತಿರುವ ತೃಪ್ತಿ ಇದೆ. ಹಿರಿಯರ ಸೂಚನೆಗೆ ಬದ್ದರಾಗಿದ್ದೇವೆ ಎಂದು ಕುಕನೂರು ಪಪಂ ಉಪಾಧ್ಯಕ್ಷ ಪ್ರಶಾಂತ ಆರಬೆರಳಿನ್ ತಿಳಿಸಿದ್ದಾರೆ.ಹಿಂದೆ ಹಿರಿಯರ ಸಮ್ಮುಖದಲ್ಲಿ ನಮಗೆ ಅಧ್ಯಕ್ಷ ಸ್ಥಾನ ನೀಡುತ್ತೇವೆ ಎಂಬ ಮಾತು ನೀಡಿದ್ದರು. ಆ ಪ್ರಕಾರ ಸದ್ಯ ನಾವು ಸಹ ಅಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದೇವು. ಇದರ ಬಗ್ಗೆ ಹಿರಿಯರೇ ನಿರ್ಣಯ ತೆಗೆದುಕೊಳ್ಳಬೇಕಿದೆ ಎಂದು ಕುಕನೂರ ಪಪಂ ಸದಸ್ಯರಾದ ಲೀಲಾವತಿ ಪ್ರವೀಣಕುಮಾರ ಮುಧೋಳ, ಮಂಜುಳಾ ಕಲ್ಮನಿ ತಿಳಿಸಿದ್ದಾರೆ.