ಎಸ್‌ಐಆರ್ ಕುರಿತು ಗೊಂದಲಗಳಿಗೆ ಒಳಗಾಗದೇ ಅಗತ್ಯ ಮಾಹಿತಿ ನೀಡಿ: ಜಿಲ್ಲಾಧಿಕಾರಿ ದಾನಮ್ಮನವರ

KannadaprabhaNewsNetwork |  
Published : Jun 25, 2026, 02:00 AM IST
24ಎಚ್‌ವಿಆರ್3- | Kannada Prabha

ಸಾರಾಂಶ

ಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ, ನ್ಯಾಯ ಸಮ್ಮತ ಪಾರದರ್ಶಕ ಚುನಾವಣೆ ನಡೆಸಬೇಕು. ಈ ಹಿನ್ನೆಲೆಯಲ್ಲಿ ದೋಷರಹಿತ ಶುದ್ಧ ಹಾಗೂ ಆರೋಗ್ಯಕರ ಮತದಾರರ ಪಟ್ಟಿ ತಯಾರಿಕೆ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ಹಾವೇರಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ, ನ್ಯಾಯ ಸಮ್ಮತ ಪಾರದರ್ಶಕ ಚುನಾವಣೆ ನಡೆಸಬೇಕು. ಈ ಹಿನ್ನೆಲೆಯಲ್ಲಿ ದೋಷರಹಿತ ಶುದ್ಧ ಹಾಗೂ ಆರೋಗ್ಯಕರ ಮತದಾರರ ಪಟ್ಟಿ ತಯಾರಿಕೆ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಉದ್ದೇಶವಾಗಿದೆ. ಎಸ್‌ಐಆರ್ ಕುರಿತು ಮತದಾರರು ಯಾವುದೇ ಗೊಂದಲಗಳಿಗೆ ಒಳಗಾಗದೇ ಅಗತ್ಯ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಕೋರ್ಟ್ ಹಾಲ್‌ನಲ್ಲಿ ಬುಧವಾರ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ರಾಜಕೀಯ ಪಕ್ಷದವರ ಸಹಕಾರ ಎಲ್ಲ ಹಂತದಲ್ಲಿ ಬೇಕಾಗುತ್ತದೆ. ಎಲ್ಲ ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಗೆ ಒಬ್ಬ ಬಿಎಲ್‌ಎ ನೇಮಕ ಮಾಡಬೇಕು ಎಂದರು.

ಜೂ. 30ರಿಂದ ಜು. 29ರ ವರೆಗೆ ಬೂತ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಬಿಎಲ್‌ಒಗಳು ಮತದಾರರ ಮನೆ ಮನೆಗೆ ಭೇಟಿ ಸಮಯದಲ್ಲಿ ದ್ವಿಪ್ರತಿಯಲ್ಲಿ ಎನುಮರೇಷನ್ ಫಾರ್ಮ್ ನೀಡುತ್ತಾರೆ. ಈ ಫಾರ್ಮ್‌ ಅನ್ನು ಮತದಾರರು ಭರ್ತಿಮಾಡಿ ಸಹಿ ಮಾಡಬೇಕು. ಹೊಸ ಭಾವಚಿತ್ರ ನೀಡಲು ಅವಕಾಶವಿದೆ, ಫಾರ್ಮ್ ಭರ್ತಿ ಮಾಡಲು ಮತದಾರರಿಗೆ ತಿಳಿಯಲಿಲ್ಲ ಅಂದ ಪಕ್ಷದಲ್ಲಿ ಬಿಎಲ್ಒಗಳು ಭರ್ತಿ ಮಾಡುತ್ತಾರೆ. ಭರ್ತಿಮಾಡಿದ ಫಾರ್ಮ್‌ನ ಒಂದು ಪ್ರತಿ ಮತದಾರರ ಹತ್ತಿರ ಹಾಗೂ ಒಂದು ಪ್ರತಿ ಬಿ.ಎಲ್.ಒಗಳ ಹತ್ತಿರವಿರುತ್ತದೆ ಎಂದರು.

ಪ್ರತಿ ಮನೆಗೆ ಮೂರು ಭಾರಿ ಬಿಎಲ್‌ಒ ಭೇಟಿ ನೀಡಲಿದ್ದಾರೆ. ಗೈರು ಮತದಾರ, ವಾಸಸ್ಥಳ ಬದಲಾವಣೆ, ಮೃತ ಹಾಗೂ ನಕಲು ಮತದಾರರ ಪಟ್ಟಿ ಮಾಡಲಾಗುವುದು. ಅನರ್ಹರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುವುದು ಹಾಗೂ ಅರ್ಹರು ಮತದಾರರ ಪಟ್ಟಿಯಲ್ಲಿ ಮುಂದುವರಿಯಲಿದ್ದಾರೆ. ಈ ಕಾರ್ಯದಲ್ಲಿ ಬಿ.ಎಲ್.ಒ.ಗಳ ಹಾಗೂ ಬಿ.ಎಲ್.ಎ.ಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದರು.

2002ರಲ್ಲಿ ಎಸ್‌ಐಆರ್‌ಗೆ ಒಳಪಟ್ಟವರು, 2025ರಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದವರು ಮುಂದುವರಿಯಲಿದ್ದಾರೆ. 2002ರಲ್ಲಿ ಎಸ್‌ಐಆರ್‌ಗೆ ಒಳಪಟ್ಟ ತಂದೆ-ತಾಯಿ, ತಾತ-ಅಜ್ಜಿ ಸೇರಿದಂತೆ ರಕ್ತ ಸಂಬಂಧಿಗಳ ಆಧಾರದ ಮೇಲೆ ಅಗತ್ಯ ದಾಖಲೆ ಸಲ್ಲಿಸಬೇಕು. ಈ ಬಗ್ಗೆ ಎಲ್ಲ ಮತದಾರರು ಜಾಗೃತಿ ಹೊಂದಬೇಕು ಎಂದು ತಿಳಿಸಿದರು.

ವಯಸ್ಸಿನ ಅಂತರ, 2002ರ ಮತ್ತು 2025ರ ಮತದಾರ ಪಟ್ಟಿಯಲ್ಲಿ ತಂದೆ-ತಾಯಿ ಹೆಸರು ವಿಭಿನ್ನವಾಗಿದ್ದರೆ, ಸಂಬಂಧದ ಕಾಲಂನಲ್ಲಿ ಬೇರೆ ಬೇರೆ ಹೆಸರು ಇದ್ದರೆ ಹಾಗೂ 2002ರಲ್ಲಿ ಗಂಡನೊಂದಿಗೆ 2025ರಲ್ಲಿ ತಂದೆಯೊಂದಿಗೆ ಲಿಂಕೇಜ್ ಆಗಿದ್ದರೆ, ತಂದೆಯರು ವಿಭಿನ್ನವಾಗಿದ್ದರೆ, ಯಾವುದೇ ದಾಖಲೆ ಸಲ್ಲಿಸದೇ ಇರುವುದು ಹಾಗೂ ಕೇವಲ ಆಧಾರ್ ಮಾತ್ರ ಸಲ್ಲಿಕೆ ಪ್ರಕರಣಗಳನ್ನು ಲಾಜಿಕ್ ಎರರ್ಸ್‌, ತರ್ಕಾಧಾರಿತ ದೋಷಗಳೆಂದು ಪರಿಗಣಿಸಲಾಗುವುದು ಹಾಗೂ ಈ ದೋಷದ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ 1482 ಮತಗಟ್ಟೆಗಳಿದ್ದು, ಈ ಮತಗಟ್ಟೆಗಳಿಗೆ 1482 ಬಿಎಲ್‌ಒಗಳು ಹಾಗೂ 148 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಜುಲೈ 1, 1987ಕ್ಕಿಂತ ಮೊದಲು ಜನಿಸಿದವರು ಸ್ವಯಂ ಜನ್ಮ ದಿನಾಂಕ-ಸ್ಥಳವನ್ನು ಸ್ಥಾಪಿಸುವ 12 ದಾಖಲೆಗಳ ಪಟ್ಟಿಯಿಂದ ಯಾವುದೇ ದಾಖಲೆ ಸಲ್ಲಿಸಬೇಕು. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಿಗೆ 1482 ಬಿಎಲ್‌ಒ ಹಾಗೂ 148 ಬಿಎಲ್‌ಒ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಜೂ. 25ರಂದು ಎರಡನೇ ಹಂತದಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ತರಬೇತಿ ಆಯೋಜಿಸಲಾಗಿದೆ ಎಂದರು.

ಸಭೆಯಲ್ಲಿ ವಿಧಾನಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಬಸವರಾಜ ಶಿವಣ್ಣನವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಎಂ.ಎಂ. ಮೈದೂರು, ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್, ಚುನಾವಣಾ ತಹಸೀಲ್ದಾರ್ ಅಮೃತಗೌಡ ಪಾಟೀಲ, ರಾಜಕೀಯ ಪಕ್ಷದ ಮುಖಂಡರಾದ ಸಂಜೀವಕುಮಾರ ನೀರಲಗಿ, ಶಿವರಾಜ ಸಜ್ಜನರ ಸೇರಿದಂತೆ ಇತರರು ಇದ್ದರು.

ಎಸ್‌ಐಆರ್-2026 ವೇಳಾಪಟ್ಟಿ

ಬಿಎಲ್‌ಒ ಮನೆ ಮನೆ ಭೇಟಿ ಜೂ. 30ರಿಂದ ಜು. 29ರ ವರೆಗೆ, ಮತದಾನ ಕೇಂದ್ರಗಳ ತರ್ಕಬದ್ಧಗೊಳಿಸುವಿಕೆ ಜು .29, ಕರಡು ಮತದಾರರ ಪಟ್ಟಿಯ ಪ್ರಕಟಣೆ ಆಗಸ್ಟ್ 5, ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿ ಆಗಸ್ಟ್ 5ರಿಂದ ಸೆ.4ರ ವರೆಗೆ, ಹಕ್ಕುಗಳು ಮತ್ತು ಆಕ್ಷೇಪಣೆಗಳ ಹಂತ, ವಿಲೇವಾರಿ ಆ. 5ರಿಂದ ಅ. 3ರ ವರೆಗೆ ನಡೆಯಲಿದೆ. ಅಂತಿಮ ಮತದಾರರ ಪಟ್ಟಿಯನ್ನು ಅ. 7ರಂದು ಪ್ರಕಟಣೆ ಮಾಡಲಾಗುತ್ತದೆ ಎಂದರು. ಮತದಾರರ ಸಹಾಯವಾಣಿ

ಎಸ್.ಐ.ಆರ್. ಕುರಿತು ಯಾವುದೇ ಸಂದೇಹಗಳಲ್ಲಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಲಾದ 1950 ಮತದಾರ ಸಹಾಯವಾಣಿ ಸಂಪರ್ಕಿಸಬಹುದು ಅಥವಾ ಆಯಾ ತಹಸೀಲ್ದಾರ್ ಕಚೇರಿ ಸಂಪರ್ಕಿಸಬಹುದು. ಪ್ರಸ್ತುತ 13,35,342 ಮತದಾರರಿದ್ದು, ಈಗಾಗಲೇ 2002ರಲ್ಲಿ ಹಾಗೂ 2025ರ ಮತದಾರರ ಪಟ್ಟಿಯಲ್ಲಿರುವ 12,70,627 ಮತದಾರರ ಮ್ಯಾಪಿಂಗ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾಸೋಹಕ್ಕೆ ನೀಡಿದ ದಾನ ಎಂದಿಗೂ ವ್ಯರ್ಥವಾಗದು: ಚನ್ನವೀರ ಸ್ವಾಮಿಗಳು
ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ: ರಾಜಶ್ರೀ ಸಜ್ಜೇಶ್ವರ