ಬ್ಯಾಡಗಿ: ಕಾಂಗ್ರೆಸ್ ಬಲಿಷ್ಠವಾದ ಒಂದು ರಾಷ್ಟ್ರೀಯ ಪಕ್ಷವಾಗಿದ್ದು, ಬರುವ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವ ಮೂಲಕ ಸಾಮಾಜಿಕ ನ್ಯಾಯದಡಿ ಬಡವರ ಹಾಗೂ ದೀನ ದಲಿತರ ಪರವಾದ ಸರ್ಕಾರ ರಚನೆಗೆ ಅವಕಾಶ ಮಾಡಿ ಕೊಡುವಂತೆ ಶಾಸಕ ಬಸವರಾಜ ಶಿವಣ್ಣನವರ ಮನವಿ ಮಾಡಿದರು.
ಭಾರತಕ್ಕೆ ಕಾಂಗ್ರೆಸ್ ಪಕ್ಷವೊಂದೇ ಅಂತಿಮ ಪರಿಹಾರ ಮತ್ತು ಭ್ರಷ್ಟರ ಕೂಟವಾಗಿರುವ ಬಿಜೆಪಿ ಹಾಗೂ ಕುಟುಂಬಕ್ಕೆ ಸೀಮಿತವಾಗಿರುವ ಜೆಡಿಎಸ್‌ನ್ನು ಅಧಿಕಾರದಿಂದ ದೂರವಿಡಬೇಕಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶದಲ್ಲಿ ಅಭಿವೃದ್ಧಿಯ ಮಹಾಪೂರವೇ ಹರಿದುಬಂದಿದೆ. ದೇಶದ ಜನರಿಗೆ ಸರ್ಕಾರದ ಒಂದಿಲ್ಲೊಂದು ಸೌಲಭ್ಯಗಳು ತಲುಪುವಂತೆ ಕಾಂಗ್ರೆಸ್ ನೋಡಿಕೊಂಡಿದೆ ಎಂದರು.
ಬ್ಯಾಡಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ ಮಾತನಾಡಿ, ಆನಂದಸ್ವಾಮಿ ಗಡ್ಡದೇವರಮಠ ಒಬ್ಬ ಅನುಭವಿ ಹಾಗೂ ಸಜ್ಜನ ರಾಜಕಾರಣಿ, ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾಮಗಾರಿ ಅನುಷ್ಠಾನಗೊಳಿಸಲಿದ್ದಾರೆ. ಹೀಗಾಗಿ ಕಾಂಗ್ರೆಸ್‌ಗೆ ಮತವನ್ನು ಹಾಕುವ ಮೂಲಕ ಆಯ್ಕೆ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಕಾಗಿನೆಲೆ ಬ್ಲಾಕ್ ಅಧ್ಯಕ್ಷ ವೀರನಗೌಡ ಪಾಟೀಲ, ಸುರೇಶಗೌಡ ಪಾಟೀಲ (ದಿಡಗೂರ) ಶಿವಣ್ಣ ಅಂಬಲಿ, ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.