ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಮೇಲೆ ನಗರದ ಗೋಲಗುಮ್ಮಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಏ.7ರಂದು ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ ಎನ್ನಲಾದ ವಿವಾದಾತ್ಮಕ ಭಾಷಣಕ್ಕೆ ಸಂಬಂಧಿಸಿದಂತೆ ಗೋಲಗುಮ್ಮಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ನಿವಾಸಿ ಮೊಹಮ್ಮದ್ ಹನ್ನಾನ್ ಎಂಬುವರು ಶಾಸಕ ಯತ್ನಾಳ ವಿರುದ್ಧ ಏ.8 ರಂದು ದೂರು ದಾಖಲಿಸಿದ್ದಾರೆ. ಹುಬ್ಬಳ್ಳಿಯ ಬಾಣಿ ಓಣಿಯಲ್ಲಿ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ ಇಸ್ಲಾಂ ಧರ್ಮ ಮತ್ತು ಪ್ರವಾದಿ ಮಹಮ್ಮದ್ (ಸ.ಅ) ಅವರ ಬಗ್ಗೆ ಪ್ರಚೋದನಾಕಾರಿ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.ದೂರಿನಲ್ಲಿ, ಯತ್ನಾಳ ಅವರು ಬಾಳಾಸಾಬ್ ಠಾಕ್ರೆ ಮನೆಯಲ್ಲಿ ಮಹಮ್ಮದ್ ಪೈಗಂಬರ್ ಹುಟ್ಟಿದ್ದಾನೆ ಎಂಬ ಆಧಾರ ರಹಿತ ಹೇಳಿಕೆ ನೀಡಿದ್ದು, ಇದು ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ತೀವ್ರ ಆಘಾತ ಉಂಟುಮಾಡಿದೆ. ಈ ಹೇಳಿಕೆಯಿಂದ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ಉಂಟಾಗುವ ಸಾಧ್ಯತೆ ಇದೆ ಎಂದು ದೂರುದಾರರು ತಿಳಿಸಿದ್ದಾರೆ.
ಶಾಸಕ ಯತ್ನಾಳ ಅವರ ಈ ಹೇಳಿಕೆ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್‌ಗಳಾದ 196 (ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆ), 299 (ಉದ್ದೇಶಪೂರ್ವಕ ಅವಮಾನಿಸುವುದು, ಶಾಂತಿ ಭಂಗಪಡಿಸುವ ಉದ್ದೇಶ) ಮತ್ತು 353 (ಕೋಮುಗಲಭೆಗೆ ಪ್ರಚೋದನೆ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಈ ಭಾಷಣವು ಕನ್ನಡ ವಾಹಿನಿಯೊಂದರ ಅಧಿಕೃತ ಯೂಟ್ಯೂಬ್ ಚಾನೆಲ್ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಪ್ರಸಾರವಾಗಿದ್ದು, ಅದರ ಲಿಂಕ್ ಅನ್ನು ದೂರಿನೊಂದಿಗೆ ಲಗತ್ತಿಸಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.----------