ಶೋಕಸಾಗರದ ಮಧ್ಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಪರಶುರಾಮ ಅಂತ್ಯಸಂಸ್ಕಾರ

KannadaprabhaNewsNetwork |  
Published : Aug 04, 2024, 01:19 AM IST
ಕಾರಟಗಿ ತಾಲೂಕಿನ ಸೋಮನಾಳದಲ್ಲ್ಲಿ ದಲಿತ ಸಂಘಟನೆ ಪ್ರತಿಭಟನೆ | Kannada Prabha

ಸಾರಾಂಶ

ಮುಗಿಲು ಮುಟ್ಟಿದ ಆಕ್ರಂದನದ ನಡುವೆ ಯಾದಗಿರಿಯಲ್ಲಿ ಸಾವನ್ನಪ್ಪಿದ ಪಿಎಸ್‌ಐ ಪರಶುರಾಮ ಅಂತ್ಯಕ್ರಿಯೆ ಸ್ವಗ್ರಾಮ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ರಾತ್ರಿ ನೆರವೇರಿತು.

ಕನ್ನಡಪ್ರಭ ವಾರ್ತೆ ಕಾರಟಗಿ (ಕೊಪ್ಪಳ)

ಆಕ್ರೋಶ, ಪ್ರತಿಭಟನೆ, ಸಂಬಂಧಿಕರು, ಸ್ನೇಹಿತರ ಮುಗಿಲು ಮುಟ್ಟಿದ ಆಕ್ರಂದನದ ನಡುವೆ ಯಾದಗಿರಿಯಲ್ಲಿ ಸಾವನ್ನಪ್ಪಿದ ಪಿಎಸ್‌ಐ ಪರಶುರಾಮ ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ರಾತ್ರಿ ನೆರವೇರಿತು.

ಯಾದಗಿರಿಯಿಂದ ಮೃತದೇಹ ಆಗಮಿಸುತ್ತಿದ್ದಂತೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರು ಸರದಿಯಲ್ಲಿ ನಿಂತು ದರ್ಶನ ಪಡೆದರು. ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಯ ಪೊಲೀಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ತಾಲೂಕಿನ ವಿವಿಧ ಸಂಘಟನೆಗಳು ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಪರಶುರಾಮ್ ಅಂತಿಮದರ್ಶನ ಪಡೆದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಬಳ್ಳಾರಿ ಐಜಿ ಬಿ.ಜಿ. ಲೋಕೇಶಕುಮಾರ್, ಎಸ್ಪಿ ಡಾ. ರಾಮ್ ಅರಸಿದ್ದಿ, ಮಾಜಿ ಶಾಸಕ ಬಸವರಾಜ ದಢೇಸ್ಗೂರು ಗೌರವ ವಂದನೆ ಸಲ್ಲಿಸಿದರು. ಪೊಲೀಸ್ ಇಲಾಖೆಯಿಂದ ಮೃತರಿಗೆ ಗೌರವ ವಂದನೆ ಸಲ್ಲಿಸಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಈ ನಡುವೆ ನೆರೆದಿದ್ದ ಸಾರ್ವಜನಿಕರು ಅಮರ್ ಹೇ, ಅಮರ್ ಹೇ ಪರಶುರಾಮ್ ಅಮರ್ ಹೇ ಎಂದು ಘೋಷಣೆ ಕೂಗಿದರು. ಜನರು ಹೀಗೆ ಹೇಳುತ್ತಿದ್ದಂತೆ ಕುಟುಂಬಸ್ಥರ ದುಖಃದ ಕಟ್ಟೆ ಹೆಚ್ಚಾಯಿತು. ಆಗ ಎಲ್ಲರ ಆಕ್ರಂದನ ಮತ್ತಷ್ಟು ಜೋರಾಗಿ ಗ್ರಾಮದ ಮಹಿಳೆಯರ ಕಣ್ಣೀರ ಕೋಡಿ ಹರಿಯಿತು.

ಜೀರೋ ಟ್ರಾಫಿಕ್:

ಸಂಜೆ ೬ ಗಂಟೆಗೆ ಸ್ವಗ್ರಾಮ ಸೋಮನಾಳ ಗ್ರಾಮಕ್ಕೆ ಪರಶುರಾಮ ಪಾರ್ಥಿವ ಶರೀರ ಆಗಮಿಸಿತು. ಪೊಲೀಸ್ ಇಲಾಖೆ ಯಾದಗಿರಿಯಿಂದ ತಾಲೂಕಿನ ಸೋಮನಾಳ ಗ್ರಾಮಕ್ಕೆ ಜೀರೋ ಟ್ರಾಫಿಕ್‌ನಲ್ಲಿ ಮೃತದೇಹ ತಂದರು.

ಸ್ವಗ್ರಾಮ ತಲುಪುತ್ತಿದ್ದಂತೆ ಕುಟಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಗ್ರಾಮದಲ್ಲಿ ಇರುವ ಸ್ವಂತ ಜಮೀನಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ಪೊಲೀಸರು ಅಂತ್ಯ ಸಂಸ್ಕಾರ ನಡೆಯಿತು.

ಕೊಪ್ಪಳ ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ ಮಧ್ಯಾಹ್ನಕ್ಕೆ ಗ್ರಾಮಕ್ಕೆ ಆಗಮಿಸಿ ಬೀಡುಬಿಟ್ಟಿದ್ದರು. ಅಂತಿಮ ದರ್ಶನದಿಂದ ಹಿಡಿದು ಅಂತ್ಯಕ್ರಿಯೆಗೆ ನಡೆಯುವ ಎಲ್ಲ ಪ್ರಕ್ರಿಯೆಗಳ ವ್ಯವಸ್ಥೆ ಮಾಡಿದರು.

ಗ್ರಾಮಸ್ಥರ ಪ್ರತಿಭಟನೆ:

ಘಟನೆ ಖಂಡಿಸಿ ಸೋಮನಾಳದಲ್ಲಿ ಛಲವಾದಿ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಯಾದಗಿರಿ ಭ್ರಷ್ಟ ಶಾಸಕನಿಗೆ ಧಿಕ್ಕಾರ ಅಂತ ಘೋಷಣೆ ಕೂಗಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಮೃತದೇಹ ಇಟ್ಟ ಮೈದಾನದಲ್ಲಿಯೇ ಪ್ರತಿಭಟನೆ ನಡೆಯಿತು. ಯಾದಗಿರಿ ಶಾಸಕ ಚೆನ್ನಾರೆಡ್ಡಿ ಮತ್ತು ಆತನ ಪುತ್ರ ಬಂಧನಕ್ಕೆ ಮೃತ ಪಿಎಸ್‌ಐ ಪರಶುರಾಮ ಕುಟುಂಬಕ್ಕೆ ನ್ಯಾಯದೊರಕಿಸಿ ಕೊಡಬೇಕೆಂದು ಆಗ್ರಹಿಸಿ ರಸ್ತೆಯಲ್ಲಿಯೇ ಪ್ರತಿಭಟನೆ ನಡೆಸಿದರು. ಮೃತರ ಕುಟುಂಬಕ್ಕೆ ₹೨ ಕೋಟಿ ಪರಿಹಾರ ನೀಡಬೇಕು, ಅವರ ಪತ್ನಿಗೆ ಅದೇ ಹುದ್ದೆಯನ್ನೂ ನೀಡಬೇಕೆಂದು ಒತ್ತಾಯಿಸಿದರು.

ಸಚಿವರ ಭೇಟಿ:

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಗ್ರಾಮಕ್ಕೆ ಭೇಟಿ ನೀಡಿ ಮೃತ ಪಿಎಸ್‌ಐ ಪರಶುರಾಮ ಅಂತಿಮದರ್ಶನ ಪಡೆದರು. ಸಚಿವರು ಗ್ರಾಮದ ಪ್ರೌಢಶಾಲೆಗೆ ಭೇಟಿ ನೀಡುತ್ತಿದ್ದಂತೆ ದಲಿತ ಸಂಘಟನೆಗಳು ಮತ್ತು ಕುಟುಂಬದ ಸದಸ್ಯರು ಸಚಿವರನ್ನು ಭೇಟಿಯಾಗಿ ಪ್ರಕರಣವನ್ನು ಸಿಒಡಿಗೆ ತನಿಖೆಗೆ ನೀಡಬೇಕೆಂದು ಒತ್ತಾಯಿಸಿದರು. ಮೊದಲಿಗೆ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಸಚಿವರು ಪ್ರಕರಣದ ಕುರಿತು ಸಿಎಂ ಗಮನಕ್ಕೆ ತರುವೆ. ನನ್ನ ಕ್ಷೇತ್ರದ ವ್ಯಕ್ತಿಗೆ ಈ ರೀತಿಯಾಗಿದ್ದು, ಇದೆಲ್ಲವನ್ನೂ ಸಿಎಂ ಅವರೊಂದಿಗೆ ಚರ್ಚಿಸಿ ನ್ಯಾಯ ಒದಗಿಸುವೆ ಎಂದು ಭರವಸೆ ನೀಡಿದರು. ಈ ನಡುವೆ ನೆರೆದಿದ್ದ ಜನರು ಮೃತರ ಪತ್ನಿಗೆ ಪಿಎಸ್‌ಐ ಹುದ್ದೆಯನ್ನೇ ನೀಡಬೇಕೆಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ