ಸಿಸಿಟಿವಿ ದೃಶ್ಯಾವಳಿ ನೀಡದ ಪಿಎಸ್ಐಗಳು; ಕ್ರಮಕ್ಕೆ ಶಿಫಾರಸು

KannadaprabhaNewsNetwork |  
Published : Sep 11, 2026, 01:15 AM IST
ಫೋಟೋ- ವೆಂಕಟಸಿಂಗ | Kannada Prabha

ಸಾರಾಂಶ

ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ದೃಶ್ಯಾವಳಿ ಸಕಾಲಕ್ಕೆ ನೀಡಲು ನಿರ್ಲಕ್ಷ್ಯ ವಹಿಸಿದ ಹಾಗೂ ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಠಾಣೆಯ ಸಿಸಿಟಿವಿ ದೃಶ್ಯಾವಳಿ ಸಂಗ್ರಹ ಮಾಡದ ಕಾರಣ ಸಿರಿವಾರ ಪೊಲೀಸ್ ಠಾಣೆಯ ಮೂರು ಪಿಎಸ್‌ಐಗಳಿಗೆ ದಂಡ ವಿಧಿಸಿ ಆಯೋಗ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ದೃಶ್ಯಾವಳಿ ಸಕಾಲಕ್ಕೆ ನೀಡಲು ನಿರ್ಲಕ್ಷ್ಯ ವಹಿಸಿದ ಹಾಗೂ ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಠಾಣೆಯ ಸಿಸಿಟಿವಿ ದೃಶ್ಯಾವಳಿ ಸಂಗ್ರಹ ಮಾಡದ ಕಾರಣ ಸಿರಿವಾರ ಪೊಲೀಸ್ ಠಾಣೆಯ ಮೂರು ಪಿಎಸ್‌ಐಗಳಿಗೆ ದಂಡ ವಿಧಿಸಿ ಆಯೋಗ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದೆ.

ರಾಯಚೂರು ಜಿಲ್ಲೆಯ ಸಿರಿವಾರ ಪೊಲೀಸ್ ಠಾಣೆಗೆ ಪವನಕುಮಾರ ಎನ್ನುವವರು 04-06-2022ರಂದು ಮಾಹಿತಿ ಹಕ್ಕು ಅಧಿನಿಯಮ 2005ರ 6(1) 7(1) 7(2) ರಡಿ ಅರ್ಜಿ ಸಲ್ಲಿಸಿ 01-06-2022ರ ರಾತ್ರಿ 7:45 ರಿಂದ ರಾತ್ರಿ 11:50ರವರೆಗಿನ ಸಿಸಿಟಿವಿ ದೃಶ್ಯಾವಳಿ ನೀಡುವಂತೆ ಕೋರಿದ್ದರು.

ಮೇಲ್ಮನವಿದಾರರು ಕೋರಿದ ಮಾಹಿತಿ, ಮಾಹಿತಿ ಹಕ್ಕು ಅಧಿನಿಯಮ 2005ರ 6(1) 7(1) 7(2) ರ ಪ್ರಕಾರ ಜೀವ ಮತ್ತು ಸ್ವತಂತ್ರಕ್ಕೆ ಸಂಬಂಧಿಸಿದ್ದು ಅದನ್ನು 48 ಗಂಟೆಯೊಳಗೆ ಒದಗಿಸಬೇಕಿತ್ತು. ಆದರೆ ಮೇಲ್ಮನವಿದಾರ ಅರ್ಜಿ ಸಲ್ಲಿಸಿದ ಎರಡು ತಿಂಗಳ ಬಳಿಕ ಅಂದರೆ 13-08-2022 ಆಗಿನ ಪಿ.ಎಸ್.ಐ. ಗೀತಾಂಜಲಿ ಸಿಂದೆ ತಾವು ಕೋರಿದ ಮಾಹಿತಿ ಮಾಹಿತಿ ಹಕ್ಕು ಅಧಿನಿಯಮ 8(1) ಜೆ.ಗೆ ಸಂಬಂಧಿಸಿದೆ ಎಂದು ಹಿಂಬರಹ ನೀಡಿದ್ದರು.

ತಾವು ಕೋರಿದ ಸಕಾಲಕ್ಕೆ ನೀಡದ ಕಾರಣ ಮೇಲ್ಮನವಿದಾರರು ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದಲ್ಲಿ ಸಲ್ಲಿಸಿದ ದ್ವಿತೀಯ ಮೇಲ್ಮನವಿಯ ವಿಚಾರಣೆ ನಡೆಸಿ ಮೇಲ್ಮನವಿದಾರರು ಕೋರಿದ ಸಿಸಿಟಿವಿ ದೃಶ್ಯಾವಳಿ ಒದಗಿಸುವಂತೆ ಆದೇಶ ನೀಡಿತ್ತು. ಆದರೆ ಆಯೋಗದ ಆದೇಶ ಪಾಲಿಸದ ಕಾರಣ ಆ ಅವಧಿಯಲ್ಲಿ ಪಿ.ಎಸ್.ಐ.ಗಳಾಗಿ ಕಾರ್ಯನಿರ್ವಹಿಸಿದ ಗೀತಾಂಜಲಿ ಸಿಂದೆ, ಅವಿನಾಶ ಕಾಂಬಳೆ ಹಾಗೂ ಗುರುಚಂದ್ರ ಯಾದವ ಅವರಿಗೆ ಅನುಕ್ರಮವಾಗಿ 25 ಸಾವಿರ, 15 ಸಾವಿರ ಹಾಗೂ 25 ಸಾವಿರ ದಂಡ ವಿಧಿಸಿತ್ತು. ಆದರೆ ಪ್ರತಿವಾದಿ ಪಿಎಸ್ಐಗಳು ದಂಡ ಪಾವತಿ ಮಾಡಿದರೂ ಸಿಸಿಟಿವಿ ದೃಶ್ಯಾವಳಿ ನೀಡಿರಲಿಲ್ಲವಾದ್ದರಿಂದ ಮೂರು ಜನ ಪಿಎಸ್‌ಐಗಳ ವಿರುದ್ಧ ಸೂಕ್ತ ಕ್ರಮಕ್ಕೆ ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠದ ಆಯುಕ್ತರಾದ ಶ್ರೀ ಬಿ.ವೆಂಕಟ ಸಿಂಗ್ ಶಿಫಾರಸು ಮಾಡಿ ಆದೇಶ ಮಾಡಿರುತ್ತಾರೆ.

ಬಳಿಕ ಸಿರಿವಾರ ಪೊಲೀಸ್ ಠಾಣೆಗೆ ಪಿಎಸ್‌ಐ ಆಗಿ ಸೇವೆಗೆ ಬಂದ ಪಿ.ಎಸ್.ಐ.ಬಸನಗೌಡ ಮೇಲ್ಮನವಿದಾರರು ಕೋರಿದ ಸಿಸಿಟಿವಿ ದೃಶ್ಯಾವಳಿ ನೀಡಲು ಅನುಕೂಲವಾಗುವಂತೆ ರೀಟ್ರಿವ್ ಮಾಡಲು ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ಕೋರಿದ ಹಿನ್ನೆಲೆ ಜ. 2, 2025ರಂದು ಸಿರವಾರ ಠಾಣೆಗೆ ಆಗಮಿಸಿದ ತಾಂತ್ರಿಕ ತಂಡ ಸಿಸಿಟಿವಿ ದೃಶ್ಯಾವಳಿ ಸಂಗ್ರಹ ಇರುವ ಹಾರ್ಡ್‌ ಡಿಸ್ಕ್ ಪರಿಶೀಲನೆ ಮಾಡಲಾಗಿ, ಸದರಿ ಹಾರ್ಡ್‌ ಡಿಸ್ಕ್‌ನಲ್ಲಿ ಕೇವಲ 15 ತಿಂಗಳ ಸಿಸಿಟಿವಿ ದೃಶ್ಯಾವಳಿ ಮಾತ್ರ ಸಂಗ್ರಹವಿದ್ದು, ಅದಕ್ಕಿಂತ ಮುಂಚಿನ ದೃಶ್ಯಾವಳಿ ಸಂಗ್ರಹವಿಲ್ಲವೆಂದು ನೀಡಿದ ವರದಿಯನ್ನು ಮೇಲ್ಮನವಿದಾರರಿಗೆ ಜ. 2, 2025 ರಂದು ಹಿಂಬರಹ ನೀಡಿದ್ದರು. ಹೀಗಾಗಿ ಮೇಲ್ಮನವಿದಾರ ಕೋರಿದ ಮಾಹಿತಿ ಸಕಾಲಕ್ಕೆ ನೀಡದೆ ನಿರ್ಲಕ್ಷ್ಯ ವಹಿಸಿದ ಕಾರಣ ಆದೇಶ ಮಾಡಿದ್ದಾರೆ.

ಮಾಹಿತಿ ಸಕಾಲಕ್ಕೆ ನೀಡದೆ ಇರುವುದು ಎಸ್.ಎಲ್.ಪಿ. (ಕ್ರಿಮಿನಲ್ )ನಂ. 3543/2020 ರ ಆದೇಶ ಉಲ್ಲಂಘನೆ ಮಾಡಿರುವುದು ಸಾಬಿತಾಗಿರುವುದರಿಂದ ಪ್ರತಿವಾದಿ ಪಿಎಸ್‌ಐಗಳಾಗಿದ್ದ ಗೀತಾಂಜಲಿ ಸಿಂದೆ, ಅವಿನಾಶ ಕಾಂಬಳೆ, ಹಾಗೂ ಗುರುಚಂದ್ರ ಯಾದವ ಅವರ ವಿರುದ್ಧ ಕೆ.ಸಿ.ಎಸ್.ಆರ್. ನಿಯಮದಂತೆ ಶಿಸ್ತುಕ್ರಮ ಕೈಗೊಳ್ಳುವಂತೆ ಆಯೋಗ ಮಾಡಿದ ಆದೇಶದಂತೆ ಪೊಲೀಸ್ ಕಾಯ್ದೆ ನಿಯಮ 7 (ರೂಲ್-7) ರ ಪ್ರಕಾರ ನೋಟಿಸ್ ಜಾರಿ ಮಾಡಿ ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ವರಿಷ್ಠಾಧಿಕಾರಿಗಳು ಶಿಸ್ತು ಕ್ರಮಕ್ಕೆ ಮುಂದಾಗಿದ್ದು, ಕ್ರಮ ಪಾಲನಾ ವರದಿ ನೀಡುವಂತೆ ಮೂರು ಜಿಲ್ಲೆಯ ವರಿಷ್ಠಾಧಿಕಾರಿಗಳಿಗೆ ಆದೇಶಿಸಿದೆ.ಸುಪ್ರೀಂಕೋರ್ಟ್‌ ತೀರ್ಪಿನಂತೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಇರುವ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಲು ಅಗತ್ಯವಾದ ಸಂಗ್ರಹ ಸಾಮರ್ಥ್ಯದ ಹಾರ್ಡ್‌ ಡಿಸ್ಕ್ ಹಾಗೂ ಸಿಸಿಟಿವಿಗಳು ಕಾರ್ಯನಿರ್ವಹಿಸುವಂತೆ ಸುಸ್ಥಿತಿಯಲ್ಲಿ ಇಟ್ಟು 18 ತಿಂಗಳು ಕಾಯ್ದಿರಿಸುವಂತೆ ಕ್ರಮ ಕೈಗೊಳ್ಳಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರಾದ ಡಾ. ಎಂ. ಎಸ್.ಸಲೀಂ ಅವರಿಗೆ ಆಯೋಗ ಸೂಚಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಚ್ಚಪ್ಪ ಜಮಾದಾರ ನಿಂದನೆ ಖಂಡಿಸಿ ಪ್ರತಿಭಟನೆ
ಭವಿಷ್ಯದ ಸವಾಲುಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ: ಸಂಸದ ರಾಧಾಕೃಷ್ಣ ದೊಡ್ಡಮನಿ