ಮಠಾಧೀಶರು, ಜನಪ್ರತಿನಿಧಿಗಳ ನೇತೃತ್ವದಲ್ಲಿ ಶೀಘ್ರದಲ್ಲಿವರದಾ-ಬೇಡ್ತಿ ನದಿ ಜೋಡಣೆ ಜನಜಾಗೃತಿ ಸಭೆ

KannadaprabhaNewsNetwork |  
Published : Jan 12, 2026, 02:15 AM IST
ಬಸವರಾಜ ಬೊಮ್ಮಾಯಿ | Kannada Prabha

ಸಾರಾಂಶ

ವರದಾ-ಬೇಡ್ತಿ ನದಿ ಜೋಡಣೆ ಯೋಜನೆ ಕುರಿತು ಜನಾಭಿಪ್ರಾಯ ರೂಪಿಸಲು ಜಿಲ್ಲೆಯಲ್ಲೂ ಮಠಾಧೀಶರು, ಜನಪ್ರತಿನಿಧಿಗಳ ನೇತೃತ್ವದಲ್ಲಿ ಶೀಘ್ರದಲ್ಲಿ ಜನಜಾಗೃತಿ ಸಮಾವೇಶ ನಡೆಸಲಾಗುವುದು. ಗೊಂದಲ ನಿವಾರಣೆಗೆ ರಾಜ್ಯ ಸರ್ಕಾರ ಸಭೆ ಕರೆಯಲಿ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ: ವರದಾ-ಬೇಡ್ತಿ ನದಿ ಜೋಡಣೆ ಯೋಜನೆ ಕುರಿತು ಜನಾಭಿಪ್ರಾಯ ರೂಪಿಸಲು ಜಿಲ್ಲೆಯಲ್ಲೂ ಮಠಾಧೀಶರು, ಜನಪ್ರತಿನಿಧಿಗಳ ನೇತೃತ್ವದಲ್ಲಿ ಶೀಘ್ರದಲ್ಲಿ ಜನಜಾಗೃತಿ ಸಮಾವೇಶ ನಡೆಸಲಾಗುವುದು. ಗೊಂದಲ ನಿವಾರಣೆಗೆ ರಾಜ್ಯ ಸರ್ಕಾರ ಸಭೆ ಕರೆಯಲಿ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವರದಾ-ಬೇಡ್ತಿ ನದಿ ಜೋಡಣೆ ಯೋಜನೆ ಪ್ರಸ್ತಾವನೆ 1994ರಿಂದಲೇ ಇದೆ. ಹೊಸದಾಗಿ ಏನೂ ಯೋಜನೆ ಮಾಡುತ್ತಿಲ್ಲ. ಅಂದಿನ ಯೋಜನೆಗೂ ಇಂದಿನ ಯೋಜನೆಗೂ ವ್ಯತ್ಯಾಸ ಇದೆ. ಈಗ ಪರಿಸರ ಹಾನಿ, ಅರಣ್ಯ ನಾಶ ಏನೂ ಆಗುವುದಿಲ್ಲ. ಬೇಡ್ತಿ ನದಿಯಿಂದ ಕಡಿಮೆ ನೀರನ್ನು ಎತ್ತುತ್ತಿದ್ದೇವೆ, ಯಾವುದೇ ನೀರಿನ ನಷ್ಟ ಆಗುವುದಿಲ್ಲ. ರಾಜ್ಯ ಸರ್ಕಾರ ಆ ಭಾಗದಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದಿರುವ ಹೋರಾಟಕ್ಕೆ ಮನವರಿಕೆ ಮಾಡಿಕೊಡಲಿ ಎಂದು ಹೇಳಿದರು. ಚರ್ಚೆಗೆ ಸಿದ್ಧ: ಈ ವಿಚಾರವಾಗಿ ಮುಕ್ತವಾಗಿ ಚರ್ಚಿಸಲು ತಜ್ಞರು, ಪರಿಸರ ವಿಜ್ಞಾನಿಗಳನ್ನು ಕರೆಯಲಿ, ಸೌಹಾರ್ದಯುತ ನಿರ್ಣಯ ತೆಗೆದುಕೊಳ್ಳಬೇಕು. ನಮ್ಮ ಕಡೆ ಬರಗಾಲ ಇದೆ. ಮಳೆಗಾಲದಲ್ಲಿ ನೀರು ಸಂಗ್ರಹ ಮಾಡಿದರೆ ನಮ್ಮ ಭಾಗಕ್ಕೆ ಅನುಕೂಲ ಆಗುತ್ತದೆ. ಇದನ್ನು ಭಾವನಾತ್ಮಕವಾಗಿ ನೋಡಬಾರದು. ಯಾರಿಗೂ ತೊಂದರೆ ಆಗದಂತೆ ಯೋಜನೆ ಮಾಡಬೇಕಿದೆ. ರಾಜ್ಯ ಸರ್ಕಾರ ಡಿಪಿಆರ್ ಮಾಡಲು ಒಪ್ಪಿಗೆ ಕೊಟ್ಟಿದೆ. ಡಿಪಿಆರ್ ಆದ ಬಳಿಕ ರಾಜ್ಯ ಸರ್ಕಾರ ಸಭೆ ಕರೆಯಲಿ. ಯಾವುದೇ ನದಿ ನಿಂತ ನೀರಲ್ಲ. ಕೃಷ್ಣಾ ನದಿ ಮಹಾರಾಷ್ಟ್ರದಲ್ಲಿ ಹುಟ್ಟಿ ಕರ್ನಾಟಕ, ಆಂಧ್ರಪ್ರದೇಶದಲ್ಲಿ ಹರಿಯುತ್ತದೆ. ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಅಲ್ಲ. ವರದಾ-ಬೇಡ್ತಿ ಯೋಜನೆ ಆಗಲೇಬೇಕಿದೆ, ಯಾವುದೇ ರೀತಿಯ ಚರ್ಚೆಗೆ ನಾವು ಸಿದ್ಧ. ಗೊಂದಲವನ್ನು ಮಾತುಕತೆ ಮೂಲಕ ಬಗೆ ಹರಿಸಬೇಕು. ಅದಕ್ಕಾಗಿ ನಾವು ಹಾವೇರಿಯಲ್ಲಿ ಮಠಾಧೀಶರು, ರಾಜಕೀಯ ನಾಯಕರು ಎಲ್ಲರನ್ನೊಳಗೊಂಡ ಸಭೆ ಕರೆಯುತ್ತೇವೆ. ಜನ ಜಾಗೃತಿ, ಜನಾಭಿಪ್ರಾಯ, ಸಮಾವೇಶ ಮಾಡುವ ಮೂಲಕವೂ ಮಾಡುತ್ತೇವೆ ಎಂದು ಹೇಳಿದರು.

ಪರಿಸರಕ್ಕೆ ಮಾರಕವಾಗದ ರೀತಿಯಲ್ಲಿ ಬೇಡ್ತಿ ವರದಾ ಯೋಜನೆ:

ಬೇಡ್ತಿ ನದಿ ಯೋಜನೆ ಪರಿಸರ ಸ್ನೇಹಿಯಾಗಿ ಮಾಡಬೇಕಿದೆ. ಸುಸ್ಥಿರ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪರಿಸರಕ್ಕೆ ಹಾನಿ ಆಗದಂತೆ ಅಭಿವೃದ್ದಿ ಮಾಡಬೇಕು. ಕುಡಿಯುವ ನೀರು ಮೂಲಭೂತ ಹಕ್ಕು. ರಾಷ್ಟ್ರೀಯ ಕುಡಿಯುವ ನೀರು ನೀತಿಯಲ್ಲಿ ಕುಡಿಯುವ ನೀರು ಕೊಡುವುದು ಸರ್ಕಾರದ ಕರ್ತವ್ಯ. ಒಬ್ಬ ವ್ಯಕ್ತಿ ಆರೋಗ್ಯಕ್ಕೆ ಸಾಮಾನ್ಯವಾಗಿ 65 ಲೀಟರ್ ನೀರು ಕೊಡಬೇಕು. ಹಾವೇರಿ, ಹಾನಗಲ್, ಬ್ಯಾಡಗಿ, ಶಿಗ್ಗಾವಿ ಸವಣೂರು ಭಾಗದಲ್ಲಿ ಕುಡಿಯಲು ನೀರು ಕೊಡಲಿಕ್ಕೆ ವರದಾ ನದಿ ನೀರು ಅವಲಂಬನೆ ಆಗಿದೆ. ಆದರೆ, ವರದಾ ನದಿಯಲ್ಲಿ 5 ತಿಂಗಳು ಮಾತ್ರ ನೀರು ಇರುತ್ತದೆ. ಹೀಗಾಗಿ ನೂರಾರು ಹಳ್ಳಿಗಳು ಮತ್ತು ಪಟ್ಟಣದಲ್ಲಿ ನೀರು ಒದಗಿಸಲು ವರದಾ ನದಿಗೆ ಹೆಚ್ಚುವರಿ ನೀರು ಒದಗಿಸುವುದು ಒಂದೇ ಮಾರ್ಗವಾಗಿದೆ ಎಂದರು.ಆತುರದ ನಿರ್ಧಾರ ಬೇಡ: ಆ ಭಾಗದ ಜನರ ಅವಶ್ಯಕತೆಗಿಂತ ಹೆಚ್ಚು ನೀರು ಸಮುದ್ರ ಸೇರುತ್ತಿದೆ. ಇವತ್ತಿನ ಪರಿಸ್ಥಿತಿಯಲ್ಲಿ ನಾವು ಅಂತರಾಜ್ಯ ನದಿಗಳಿಂದ ನೀರು ತರುವುದು ಕಷ್ಟ ಸಾಧ್ಯವಿದೆ. ಹೀಗಾಗಿ ಪಶ್ಚಿಮಮುಖಿ ಇರುವ ಅಲ್ಪ ನೀರನ್ನು ಬಯಲು ಸೀಮೆಯ ಬಯಾರಿಕೆ ತಣಿಸಲು ಬಳಕೆ ಮಾಡುವ ಸದುದ್ದೇಶ ಇದೆ. ಇದರಿಂದ ಅಲ್ಲಿನ ಪರಿಸರಕ್ಕೆ ಹಾನಿ ಆಗುವುದಿಲ್ಲ ಎಂದರು. ಕಾರಣ ಭಾವನಾತ್ಮಕವಾಗಿ ಚಿಂತನೇ ಮಾಡದೇ ವಸ್ತುಸ್ಥಿತಿ ಅರಿತು ಒಬ್ಬರಿಗೊಬ್ಬರು ಸಹಕಾರ ಮಾಡಿದರೆ ಅನುಕೂಲ ಆಗಲಿದೆ. ಶಿರಸಿ, ಸಿದ್ದಾಪುರ ಹಾಗೂ ಹಾವೇರಿಗೆ ನಿಕಟವಾದ ಸಂಪರ್ಕವಿದೆ. ಇದಕ್ಕೆ ಪೂರಕವಾಗಿ ನಾವು ಯೋಚನೆ ಮಾಡಬೇಕು. ವೈಜ್ಞಾನಿಕವಾಗಿ ಡಿಪಿಆರ್ ಸಿದ್ಧವಾದ ಮೇಲೆ ಸಾಧಕ ಬಾಧಕಗಳ ಚರ್ಚಿಸಲು ರಾಜ್ಯ ಸರ್ಕಾರ ಮುಂದೆ ಬರಬೇಕು. ಡಿಪಿಆರ್ ಆಗುವವರೆಗೂ ನಾವೆಲ್ಲಾ ಕಾಯೋಣ. ಯಾವುದೇ ಆತುರದ ನಿರ್ಧಾರ ಯಾರಿಗೂ ಸಹ ಲಾಭ ತರುವುದಿಲ್ಲ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ