ಥರ್ಡ್ ಐ, ಮಾದಕ ವ್ಯಸನ ಮುಕ್ತ ಗದಗ ಜಿಲ್ಲೆ ಜಾಗೃತಿ ಅಭಿಯಾನಕ್ಕೆ ಸಚಿವ ಎಚ್ಕೆಪಿ ಚಾಲನೆಗದಗ: ಥರ್ಡ ಐ ಮುಖಾಂತರ ಸಮಾಜದ ಬದುಕಿನಲ್ಲಿ ಬಹು ದೊಡ್ಡ ಸುಧಾರಣೆ ಕಾಣಬಹುದಾಗಿದೆ. ಜಿಲ್ಲೆಯಲ್ಲಿ ಕಳವು, ಕಾನೂನು ಬಾಹಿರ ಚಟುವಟಿಕೆಗಳನ್ನು ಕಂಡು ಹಿಡಿದು ನಿಯಂತ್ರಿಸಲು ಥರ್ಡ್ ಐ ಸಹಕಾರಿಯಾಗಲಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಮಾದಕ ವಸ್ತುಗಳ ಸೇವನೆಗೆ ದಾಸರಾಗುತ್ತಿದ್ದು, ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಗದಗ ಜಿಲ್ಲೆಯನ್ನು ವ್ಯಸನ ಮುಕ್ತ ಜಿಲ್ಲೆಯಾಗಿಸುವ ಪಣ ಜಿಲ್ಲೆಯ ಜನತೆ ತೊಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ನಗರದ ಗಾಂಧಿ ವೃತ್ತದಲ್ಲಿ ಶನಿವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ ಥರ್ಡ್ ಐ ಮತ್ತು ಮಾದಕ ವ್ಯಸನ ಮುಕ್ತ ಗದಗ ಜಿಲ್ಲೆ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.ಯುವ ಸಮುದಾಯ ಆರೋಗ್ಯಯುತ ಸುಸ್ಥಿರ ಜೀವನ ಸಾಗಿಸಲು ಸಮಾಜದ ಸರ್ವರೂ ಈ ಮಾದಕ ದ್ರವ್ಯಗಳ ನಿಯಂತ್ರಣ ಹಾಗೂ ನಿರ್ಮೂಲನೆ ಮಾಡಲು ದೃಢ ನಿರ್ಧಾರ ಕೈಗೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ ನೆರೆಹೊರೆಯುವರನ್ನು ವ್ಯಸನ ಮುಕ್ತಗೊಳಿಸಲು ಶ್ರಮಿಸಬೇಕು. ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕಾನೂನು ಪಾಲಿಸುವ ಮೂಲಕ ಸುರಕ್ಷಿತ ಜೀವನ ಸಾಗಿಸಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಥರ್ಡ್ ಐ ಕಮಾಂಡ್ ಸೆಂಟರ್ ತೆರೆಯಲಾಗಿದೆ. ಉತ್ತಮ ಗುಣಮಟ್ಟದ ಸಿಸಿ ಟಿವಿ ಕ್ಯಾಮೆರಾಗಳನ್ನು ಗದಗ ನಗರದ ಪ್ರಮುಖ ರಸ್ತೆ, ವೃತ್ತ, ಸಂಚಾರದಟ್ಟಣೆ ಇರುವೆಡೆ ಅಳವಡಿಸಲಾಗಿದೆ. ಅವುಗಳ ಸಹಾಯದಿಂದ ಸಂಚಾರಿ ನಿಯಮ ಉಲ್ಲಂಘಿಸುವವರನ್ನು ಶಿಕ್ಷೆಗೆ ಒಳಪಡಿಸಲಾಗುವುದು. ಅಲ್ಲದೇ ಈ ಸಿಸಿ ಟಿವಿ ಅಳವಡಿಕೆಯಿಂದ ಅಪರಾಧಗಳ ನಿಯಂತ್ರಣ ಮಾಡಲು ಸಹಕಾರಿಯಾಗಿದೆ. ಸಾರ್ವಜನಿಕರು ದೈನಂದಿನ ಜೀವನದಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸುವ ಅಭ್ಯಾಸವನ್ನು ಮಾಡಿಕೊಳ್ಳುವ ಮೂಲಕ ಅಪಘಾತಗಳನ್ನು ತಡೆಗಟ್ಟಬೇಕು ಎಂದು ಹೇಳಿದರು.ಜಾಥಾ ಕಾರ್ಯಕ್ರಮದಲ್ಲಿ ಸರ್ಕಾರಿ ಮುಖ್ಯ ಸಚೇತಕರು ಹಾಗೂ ವಿಪ ಸದಸ್ಯರಾದ ಸಲೀಂ ಅಹ್ಮದ್, ಎಸ್.ವಿ. ಸಂಕನೂರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಗಣ್ಯರಾದ ಬಿ.ಬಿ. ಅಸೂಟಿ, ಚಂದಾವರಿ, ಪರಾಪೂರ, ಬರ್ಕತ ಅಲಿ ಮುಲ್ಲಾ, ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಸೇರಿದಂತೆ ಶಾಲಾ ಮಕ್ಕಳು, ಸಂಘ ಸಂಸ್ಥೆಗಳು, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಥರ್ಡ್ ಐ ಹಾಗೂ ಮಾದಕ ವ್ಯಸನ ಮುಕ್ತ ಗದಗ ಜಿಲ್ಲೆ ಜಾಗೃತಿ ಅಭಿಯಾನದ ಜಾಥಾವು ಗದಗ ನಗರದ ಗಾಂಧಿ ವೃತ್ತದಿಂದ ಆರಂಭವಾಗಿ ಟಾಂಗಾ ಸರ್ಕಲ್ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹುಬ್ಬಳ್ಳಿ ರಸ್ತೆಯಲ್ಲಿರುವ ಭೀಮಸೇನ್ ಜೋಶಿ ಜಲ್ಲಾ ರಂಗ ಮಂದಿರ ತಲುಪಿತು.